ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನುವಾಗಲೇ ಅವರು ಮತ್ತೆ ವರುಣಾ ವಿಧಾನಸಭಾ ಕ್ಷೇತ್ರದ ಕಡೆಗೆ ಮುಖ ಮಾಡಿದ್ದಾರೆ ಎನ್ನುವ ಸುದ್ದಿ ಅನೇಕ ಕಾಂಗ್ರೆಸ್ ನಾಯಕರಲ್ಲಿ ಆತಂಕ ಉಂಟುಮಾಡಿದೆ.
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡದಿದ್ದರೆ ತಮ್ಮ ಗೆಲುವಿಗೆ ಅಪಾಯವಾಗುತ್ತದೆ ಎಂದರಿತು ಕೋಲಾರ ಸುತ್ತಮುತ್ತಲಿನ ಜಿಲ್ಲೆಗಳ ಕಾಂಗ್ರೆಸ್ ನಾಯಕರು, ಶಾಸಕರು ಸಿದ್ದರಾಮಯ್ಯ ಮನೆಗೆ ಬರುತ್ತಿದ್ದಾರೆ. ಒಮ್ಮೆ ಬಂದವರು ಮತ್ತೆ ಬಂದು ಶತಪಥ ಹಾಕುತ್ತ, ಹೇಗಾದರೂ ಮಾಡಿ ಕೋಲಾರದಲ್ಲೇ ಸಿದ್ದರಾಮಯ್ಯ ಸ್ಪರ್ಧಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆಗೆ ನಿರ್ಧಾರ ಮಾಡಲು ಸ್ಥಳೀಯ ನಾಯಕ ಹಾಗೂ ಮಾಜಿ ಸಚಿವ ಮುನಿಯಪ್ಪ ಅವರ ಮುನಿಸೇ ಪ್ರಮುಖ ಕಾರಣ ಎನ್ನಲಾಗಿದೆ. ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣದ ನಡುವಿನ ಗುದ್ದಾಟವನ್ನು ಸರಿಪಡಿಸಲು ಸಿದ್ದರಾಮಯ್ಯ ಕೈಯಿಂದಲೂ ಸಾಧ್ಯವಾಗಲಿಲ್ಲ. ಅನೇಕ ಬಾರಿ ಪ್ರವಾಸ ಮಾಡಿದರೂ ಈ ಪರಿಸ್ಥಿತಿ ಸರಿಯಾಗದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಗೆಲುವು ಕಷ್ಟ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ವರುಣಾದತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್‌ನಲ್ಲಿ ಹರಿದಾಡುತ್ತಿದೆ.
ಈ ವಿಚಾರವನ್ನು ತಿಳಿದ ಕೂಡಲೆ ಅನೇಕ ಕಾಂಗ್ರೆಸಿಗರು ಸಿದ್ದರಾಮಯ್ಯ ಮನೆಗೆ ಆಗಮಿಸುತ್ತಿದ್ದಾರೆ. ಹರಿಹರ ಶಾಸಕ ರಾಮಪ್ಪ, ಅಖಂಡ ಶ್ರೀನಿವಾಸ್ ಮೂರ್ತಿ, ದಿವಾಕರ್ ಬಾಬು, ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್, ಮಾಜಿ ಸಚಿವ ಎಂ.ಆರ್. ಸೀತಾರಾಮ್ ಸೇರಿ ಅನೇಕರು ಭೇಟಿ ಮಾಡಿದ್ದಾರೆ. ಕೋಲಾರ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಲಕ್ಷ್ಮೀ ನಾರಾಯಣ್ ಸಹ ಆಗಮಿಸಿದ್ದರು. ಆದರೆ ರಮೇಶ್ ಕುಮಾರ್, ಕೆ.ವೈ. ನಂಜೇಗೌಡ, ನಾರಾಯಣಸ್ವಾಮಿ ಸಿದ್ದು ನಿವಾಸದಿಂದ ದೂರ ದೂರ ಉಳಿದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಇದೇ ವೇಳೆ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸದಿದ್ದರೆ ತಮಗೂ ಒಂದು ಅವಕಾಶವಿರಲಿ ಎಂದು ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ಚಿಕ್ಕರಾಯಪ್ಪ ನಡುವೆ ಪೈಪೋಟಿ ಆರಂಭವಾಗಿದೆ. ಸಿದ್ದರಾಮಯ್ಯ ಸ್ಪರ್ಧೆ ಮಾಡದಿದ್ದರೆ ತಮಗೇ ಟಿಕೆಟ್ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಇಬ್ಬರೂ ಒತ್ತಾಯ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ಹಾಗೂ ಬದಲಾವಣೆ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್‌ಗೆ ಈ ಹೀನಾಯ ಸ್ಥಿತಿ ಬರಬಾರದಿತ್ತು. ಒಬ್ಬ ಸಿಎಂ ಆಗಿದ್ದವರು ಆಡಳಿತ ಮಾಡಿದವರಿಗೆ ಇಂದು ಚುನಾವಣೆಗೆ ನಿಲ್ಲಲು ಜಾಗ ಇಲ್ಲ ಅಂತಾದರೆ ಅವರ ಆಡಳಿತ ಎಂತಹದ್ದು ಅಂತಾ ಗೊತ್ತಾಗುತ್ತದೆ. ಇದು ರಾಜಕೀಯದಲ್ಲಿ ಪಲಾಯನವಾದ. ಈ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ನಲ್ಲಿ ಸೀಟೇ ಸಿಗುವುದಿಲ್ಲ ಅಂತಾ ನನಗೆ ಅನ್ನಿಸುತ್ತದೆ ಎಂದರು.
ಚಿಕ್ಕಮಗಳೂರಿನಲ್ಲಿ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಸಿದ್ದರಾಮಯ್ಯ ಸುಧೀರ್ಘ 45 ವರ್ಷ ಅಧಿಕಾರದ ರಾಜಕಾರಣ ಮಾಡಿದ್ದಾರೆ. ರಾಜ್ಯದಲ್ಲಿ ಗುರುತಿಸಿಕೊಂಡತಹ ನಾಯಕರುಗಳಲ್ಲಿ ಅವರು ಕೂಡ ಒಬ್ಬರು. ಅವರು ಕ್ಷೇತ್ರ ಹುಡುಕಾಡುವುದು ಗೌರವ ತಂದು ಕೊಡುವ ಸಂಗತಿಯಲ್ಲ. ಯಾಕಂದ್ರೆ ಮಾಸ್ ಲೀಡರ್ ಕ್ಷೇತ್ರ ಹುಡುಕೋದು ಅಭದ್ರತೆ ಕಾಡುತ್ತದೆ. ಅವರ ಪಕ್ಷಕ್ಕೆ ಯಾವ ವಿಶ್ವಾಸ ಮೇಲೆ ಅಧಿಕಾರಕ್ಕೆ ಬರ್ತಾರೆ ಅಂತಾ ಹೇಳ್ತಾರೆ? ಆ ನಾಯಕರುಗಳಿಗೇ ಅಭದ್ರತೆಯ ಭಾವನೆ ಇದ್ದರೆ ಕಾರ್ಯಕರ್ತರಿಗೆಮ ರಾಜ್ಯದ ಜನರಿಗೆ ಹೇಗೆ ವಿಶ್ವಾಸ ತುಂಬುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Karnataka Elections : ಕೋಲಾರ ಸೇಫಲ್ಲ ಎಂದ ರಾಹುಲ್; ಗೆಲ್ಲಿಸ್ತೀವಿ ಎಂದ ಕೈ ನಾಯಕರು, ಸೋಮವಾರ ಫೈನಲ್ ಎಂದ ಸಿದ್ದು