ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ ʼಮಾರ್ಟಿನ್ʼ ಸಿನಿಮಾ (Martin Movie) ಅ.11ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಪಂಚ ಭಾಷೆಗಳಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿರುವ ಎ.ಪಿ.ಅರ್ಜುನ್ ನಿರ್ದೇಶನದ ಈ ಚಿತ್ರದ ಟ್ರೈಲರ್ 1 ರಿಲೀಸ್ ಮಾಡಲು ನಿಗದಿ ಮಾಡಿದೆ. ಮುಂಬೈ ಮತ್ತು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಟ್ರೈಲರ್ 1 ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.
ಆಗಸ್ಟ್ 4ರಂದು ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಹಾಗೂ ಆಗಸ್ಟ್ 5ರಂದು ಮುಂಬೈನಲ್ಲಿ ಟ್ರೈಲರ್ 1 ರಿಲೀಸ್ ಆಗಲಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಉದಯ್ ಮೆಹ್ತಾ ಮಾಹಿತಿ ನೀಡಿದ್ದಾರೆ. ಈ ವೇಳೆ ಧ್ರುವ ಸರ್ಜಾ, ಎ.ಪಿ. ಅರ್ಜುನ್ ಉಪಸ್ಥಿತರಿದ್ದರು.
ಮೊದಲು ಕನ್ನಡಿಗರಿಗೆ ಟ್ರೇಲರ್ ತೋರಿಸುತ್ತೇವೆ ಎಂದ ಧ್ರುವ ಸರ್ಜಾ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಧ್ರುವ ಸರ್ಜಾ ಅವರು, ಆಗಸ್ಟ್ 4ರಂದು ಮೊದಲು ನಮ್ಮ ಕನ್ನಡಿಗರಿಗೆ ಮಾರ್ಟಿನ್ ಚಿತ್ರದ ಟ್ರೈಲರ್ 1 ತೋರಿಸುತ್ತೇವೆ. ಆ.5ರಂದು ಮುಂಬೈನಲ್ಲಿ ಟ್ರೇಲರ್ ರಿಲೀಸ್ ಆಗಲಿದೆ. ಕಾರ್ಯಕ್ರಮಕ್ಕೆ 28 ದೇಶಗಳಿಂದ ಮಾಧ್ಯಮದವರು ಬರುತ್ತಿದ್ದಾರೆ. ಅದರ ಜತೆ ಭಾರತದ ವಿವಿಧೆಡೆಯಿಂದ ರಿಪೋರ್ಟರ್ಸ್ ಬರುತ್ತಾರೆ ಎಂದು ತಿಳಿಸಿದರು.
ಆಗಸ್ಟ್ 2ರಿಂದ ಬುಕ್ ಮೈ ಶೋನಲ್ಲಿ ಟ್ರೇಲರ್ ರಿಲೀಸ್ ಟಿಕೆಟ್ ಬುಕ್ ಮಾಡಬಹುದು. ಆಗಸ್ಟ್ 4ರಂದು ಮಧ್ಯಾಹ್ನ 1 ಗಂಟೆಗೆ ಟ್ರೇಲರ್ ರಿಲೀಸ್ ಆಗಲಿದೆ ಎಂದು ಹೇಳಿದರು.
ನಿರ್ದೇಶಕನ ವಿರುದ್ಧ ದೂರು ನೀಡಿಲ್ಲ: ನಿರ್ಮಾಪಕ ಉದಯ್ ಮೆಹ್ತಾ
ಮಾರ್ಟಿನ್ ಚಿತ್ರದ ವಿಎಫ್‌ಎಕ್ಸ್‌ಗಾಗಿ ನಿರ್ದೇಶಕ ಎ.ಪಿ. ಅರ್ಜುನ್ 50 ಲಕ್ಷ ರೂ. ಕಮಿಷನ್ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿರುವ ವಿಷಯ ಎಲ್ಲರಿಗೂ ಗೊತ್ತಿದೆ. ನಾನು ನೆನ್ನೆ ಭಾರತಕ್ಕೆ ಬಂದೆ, ಈ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡುತ್ತೇನೆ. ನಮ್ಮ ಟೀಮ್‌ನ ಯಾವ ಸದಸ್ಯನ ಮೇಲೂ ಕಂಪ್ಲೇಂಟ್ ಕೊಟ್ಟಿಲ್ಲ. ನಾನು ಕಂಪ್ಲೇಂಟ್ ಕೊಟ್ಟಿರುವುದು ಸತ್ಯ ರೆಡ್ಡಿ ಎಂಬುವವರ ಡಿಜಿಟಲ್ ಕಂಪನಿ ವಿರುದ್ಧ ಎಂದು ತಿಳಿಸಿದರು.
15 ವರ್ಷಗಳಿಂದ ನಾನು ಸಿನಿಮಾ ರಂಗದಲ್ಲಿದೇನೆ. ಇದುವರೆಗೂ ನಾನು ಯಾವುದೇ ವಿವಾದ ಮಾಡಿಲ್ಲ. ನಾನು ಫ್ಯಾಷನೇಟ್ ಪ್ರೊಡ್ಯೂಸರ್, ನನಗೆ ಈ ರೀತಿ ಮೋಸವಾಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇಲ್ಲಿ ಅನುಭವ ಲೆಕ್ಕಕ್ಕೆ ಬರೋಲ್ಲ, ಸಡನ್ ಅಪಘಾತವಾದಾಗ ಏನೂ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.
ಕಮಿಷನ್ ಪಡೆದಿರುವುದು ಸಾಬೀತಾದ್ರೆ 1 ಕೋಟಿ ಕೊಡ್ತೇನೆ: ನಿರ್ದೇಶಕ ಎ.ಪಿ.ಅರ್ಜುನ್
50 ಲಕ್ಷ ಕಮಿಷನ್ ಆರೋಪ ಬಗ್ಗೆ ನಿರ್ದೇಶಕ ಪ್ರತಿಕ್ರಿಯಿಸಿ, ಸುದ್ದಿ ಮಾಡುವವರು ಆಧಾರಗಳನ್ನು ಇಟ್ಟುಕೊಟ್ಟು ಪ್ರಸಾರ ಮಾಡಬೇಕು. ನಾನು ಕೇವಲ 5000 ರೂ. ಕಮಿಷನ್ ಪಡೆದಿರುವುದು ಸಾಬೀತಾದರೂ ನಿಮಗೆ 1 ಕೋಟಿ ರೂ. ಕೊಡುತ್ತೇನೆ. ಈ ರೀತಿ ಸುಳ್ಳು ಆರೋಪಗಳಿಂದ ನಮ್ಮ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Actor Shahrukh Khan: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?
‘ಮಾರ್ಟಿನ್’ ಚಿತ್ರದ ವಿಎಫ್‌ಎಕ್ಸ್ ವರ್ಕ್ ಜವಾಬ್ದಾರಿಯನ್ನು ಡಿಜಿಟಲ್ ಟೆರೇನ್ ಕಂಪನಿಗೆ ನೀಡಲಾಗಿತ್ತು. ಇದಕ್ಕಾಗಿ ನಿರ್ಮಾಪಕ ಉದಯ್ ಕೊಟ್ಟಿದ್ದ 2.5 ಕೋಟಿ ರೂ.ಗಳಲ್ಲಿ 50 ಲಕ್ಷ ರೂ.ಗಳನ್ನು ನಿರ್ದೇಶಕ ಎ.ಪಿ.ಅರ್ಜುನ್ ಕಮಿಷನ್ ಆಗಿ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ನಿರ್ದೇಶಕ ಎ.ಪಿ.ಅರ್ಜುನ್ ಹಾಗೂ ನಿರ್ಮಾಪಕ ಉದಯ್ ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ.
ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಮಾರ್ಟಿನ್ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್ ಕುಮಾರ್, ನಿಕಿತನ್ ಧೀರ್, ನವಾಬ್ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್ ಪಾಠಕ್ ಸಹ ‘ಮಾರ್ಟಿನ್’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.