ಬೆಂಗಳೂರು: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸಿ ಜೈಲಿನಲ್ಲಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸೆಲ್ಫ್ ಚೆಕ್‌ಗೆ ಸಹಿ ಹಾಕಲು ಷರತ್ತುಬದ್ಧ ಅನುಮತಿ ನೀಡಿ ಹೈಕೋರ್ಟ್ ಆದೇಶಿಸಿದೆ.
ಸೆಲ್ಫ್ ಚೆಕ್‌ಗಳಿಗೆ ಸಹಿ ಹಾಕಲು ಅನುಮತಿ ಕೋರಿ ಹೈಕೋರ್ಟ್‌ಗೆ ಶ್ರೀಗಳಿಂದ ಗುರುವಾರ ಅರ್ಜಿ ಸಲ್ಲಿಕೆಯಾಗಿತ್ತು. ಗುರುವಾರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠವು, ಸೆಲ್ಫ್ ಚೆಕ್ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಲ್ಲದೆ, ಸಂಸ್ಥೆ ಹೆಸರಿನಲ್ಲಿ ಏಕೆ ಚೆಕ್ ಇಲ್ಲ ಎಂದು ಪ್ರಶ್ನೆ ಮಾಡಿ, ಶುಕ್ರವಾರಕ್ಕೆ ವಿಚಾರಣೆ ಮುಂದೂಡಿತ್ತು.
ಶುಕ್ರವಾರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠವು, ಅಕ್ಟೋಬರ್ ತಿಂಗಳ ಚೆಕ್‌ಗಳಿಗೆ ಸಹಿ ಹಾಕಲು ಷರತ್ತುಬದ್ಧ ಅನುಮತಿ ನೀಡಿದೆ. ಆದರೆ, ವೇತನಕ್ಕೆ ಸಂಬಂಧಿಸಿದ ಚೆಕ್‌ಗಳಿಗೆ ಮಾತ್ರ ಸಹಿ ಹಾಕಬೇಕು. ಸಹಿ ಪಡೆಯಲು ಸಂಬಂಧಪಟ್ಟವರಿಗೆ ಜೈಲು ಅಧಿಕಾರಿಗಳು ಅನುಮತಿ ನೀಡಬೇಕು. ಜತೆಗೆ ಮುರುಘಾಶ್ರೀ ಸಹಿ ವೇಳೆ ತನಿಖಾಧಿಕಾರಿ, ಜೈಲು ಅಧೀಕ್ಷಕರು ಉಪಸ್ಥಿತರಿರಬೇಕು ಎಂದು ಆದೇಶದಲ್ಲಿ ಸೂಚಿಸಿದೆ.
ಅಕ್ಟೋಬರ್‌ಗೆ ಮಾತ್ರ ಆದೇಶ ಸೀಮಿತ
ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ನ್ಯಾಯಪೀಠವು, ಈ ಆದೇಶವು ಅಕ್ಟೋಬರ್ ತಿಂಗಳಿಗೆ ಮಾತ್ರ ಅನ್ವಯವಾಗಲಿದೆ. ವೇತನವಿಲ್ಲದೆ ವಿದ್ಯಾಪೀಠದ ಸಿಬ್ಬಂದಿ ಉಪವಾಸ ಇರಬಾರದು ಎಂಬ ಕಳಕಳಿಯ ದೃಷ್ಟಿಯಿಂದ ಅವಕಾಶ ಕೊಡಲಾಗುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಮರುಘಾ ಶರಣರಿಗೆ ಯಶಸ್ವಿ ಕೊರೊನರಿ ಆಂಜಿಯೊಗ್ರಾಮ್: ನ್ಯಾಯಾಲಯಕ್ಕೆ ವರದಿ ಸಲ್ಲಿಕೆ