ಕಾರವಾರ: ಭಟ್ಕಳ ತಾಲೂಕಿನ ಹಾಡುವಳ್ಳಿ ಸಮೀಪದ ಓಣಿಬಾಗಿಲು ಗ್ರಾಮದಲ್ಲಿ ಸಂಬಂಧಿಯಿಂದಲೇ ಹತ್ಯೆಗೊಳಗಾಗಿದ್ದ (Mass Murder) ಒಂದೇ ಕುಟುಂಬದ ನಾಲ್ವರ ಅಂತ್ಯಕ್ರಿಯೆಯು ಸೋಮವಾರ (ಫೆ.೨೭) ನೆರವೇರಿತು.
ಅಂತ್ಯ ಸಂಸ್ಕಾರಕ್ಕೂ ಮುನ್ನ ಮನೆಯ ಆವರಣದಲ್ಲಿ ನಾಲ್ವರ ಶವಗಳನ್ನೂ ಇರಿಸಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಈ ವೇಳೆ ಮೃತ ರಾಘವೇಂದ್ರ, ಕುಸುಮಾ ದಂಪತಿಯ ಮಗ ಹಾಗೂ ಮಗಳ ಕಡೆಯಿಂದಲೂ ವಿಧಿವಿಧಾನಗಳನ್ನು ಪೂರೈಸಲಾಯಿತು.
ಶಂಭು ಭಟ್ ಅವರ ಗಂಡು ಮಕ್ಕಳಿಬ್ಬರೂ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರ ರಕ್ತ ಸಂಬಂಧಿಯೊಬ್ಬರು ಅಂತ್ಯ ಸಂಸ್ಕಾರ ನೆರವೇರಿಸಿದ್ದು, ಶಂಭು ಭಟ್ ಅವರ ಪುತ್ರಿ ಜಯಾ ಅಡಿಗ ಅಂತ್ಯ ಸಂಸ್ಕಾರ ಕಾರ್ಯದಲ್ಲಿ ಭಾಗಿಯಾದರು. ಶಂಭು ಭಟ್ ಅವರ 5 ವರ್ಷದ ಮೊಮ್ಮಗಳು ಹಾಗೂ 4 ವರ್ಷದ ಮೊಮ್ಮಗ ಮೃತದೇಹಗಳನ್ನು ಕಂಡು ಕಣ್ಣೀರಿಟ್ಟಿದ್ದು ಮನಕಲಕುವಂತೆ ಇತ್ತು.
ಇದನ್ನೂ ಓದಿ: JDS Politics: ಹಾಸನ ಟಿಕೆಟ್ ಗೊಂದಲ ಪರಿಹರಿಸಲು ದೇವೇಗೌಡರಿಗೆ ಆರೋಗ್ಯ ಸರಿ ಇಲ್ಲ; ಅಂತಿಮ ನಿರ್ಧಾರ ನನ್ನದೇ ಅಂದರೇ ಎಚ್‌ಡಿಕೆ?
ಆಸ್ತಿ ಹಂಚಿಕೆ ವಿಚಾರವಾಗಿ ನಡೆದಿದ್ದ ಗಲಾಟೆಯಲ್ಲಿ ಗ್ರಾಮದ ನಿವಾಸಿ ಶಂಭು ಭಟ್, ಅವರ ಪತ್ನಿ ಮಾದೇವಿ ಭಟ್, ಪುತ್ರ ರಾಘವೇಂದ್ರ ಭಟ್ ಹಾಗೂ ಸೊಸೆ ಕುಸುಮಾ ಭಟ್ ಕೊಲೆಯಾಗಿದ್ದರು. ಶಂಭು ಭಟ್ ಅವರ ಹಿರಿಯ ಸೊಸೆ ವಿದ್ಯಾ ಭಟ್ ಸಹೋದರ ವಿನಯ ಭಟ್ ಹಾಗೂ ತಂದೆ ಶ್ರೀಧರ ಭಟ್ ಮಾರಕಾಸ್ತ್ರಗಳಿಂದ ಕೊಚ್ಚಿ ಮನೆಯಂಗಳದಲ್ಲೇ ಹತ್ಯೆ ಮಾಡಿದ್ದರು. ಈ ಪ್ರಕರಣ ಇಡೀ ಉತ್ತರ ಕನ್ನಡ ಜನತೆಯನ್ನೇ ಬೆಚ್ಚಿ ಬೀಳಿಸಿತ್ತು.
ಇದನ್ನೂ ಓದಿ: INDvsAUS : ಇನ್ನೂ ಫಿಟ್ ಆಗಿಲ್ಲ ಮಿಚೆಲ್ ಸ್ಟಾರ್ಕ್, ಮೂರನೇ ಪಂದ್ಯದಿಂದಲೂ ಔಟ್
ಶಂಭು ಭಟ್ ಅವರ ಹಿರಿಯ ಸೊಸೆ ವಿದ್ಯಾ ಭಟ್ ನ ಕುಮ್ಮಕ್ಕಿನಿಂದಲೇ ಈ ಹತ್ಯೆ ನಡೆದಿದೆ ಎನ್ನುವ ಆರೋಪಗಳು ಕೇಳಿಬಂದಿದ್ದು, ಶಂಭು ಭಟ್ ಅವರ ಮಗಳು ಜಯಾ ಅಡಿಗ ನೀಡಿದ ದೂರಿನನ್ವಯ ವಿದ್ಯಾ ಭಟ್, ಅವರ ಸಹೋದರ ವಿನಯ ಭಟ್ ಹಾಗೂ ತಂದೆ ಶ್ರೀಧರ್ ಭಟ್ ವಿರುದ್ಧ ಭಟ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು. ಮೊದಲು ಹಿರಿಯ ಸೊಸೆ ವಿದ್ಯಾ ಭಟ್‌ಳನ್ನು ವಶಕ್ಕೆ ಪಡೆದುಕೊಂಡಿದ್ದು, ತಲೆಮರೆಸಿಕೊಂಡಿದ್ದವರ ಪತ್ತೆಗಾಗಿ ಭಟ್ಕಳ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿ ಶೋಧ ನಡೆಸಲಾಗಿತ್ತು.
ಭಾನುವಾರ (ಫೆ.೨೬) ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ವಿನಯ ಭಟ್‌ನನ್ನು ಪೊಲೀಸರು ಶಿವಮೊಗ್ಗ ಸಮೀಪದಲ್ಲಿ ವಶಪಡಿಸಿಕೊಂಡಿದ್ದರು. ಅಲ್ಲದೆ ಅವನ ತಂದೆ ಶ್ರೀಧರ ಭಟ್‌ನನ್ನು ತಾಲೂಕಿನ ಹಲ್ಯಾಣಿ ಗ್ರಾಮದಲ್ಲೇ ವಶಪಡಿಸಿಕೊಳ್ಳಲಾಗಿತ್ತು. ಇನ್ನು ಮೃತದೇಹಗಳನ್ನು ಎಫ್ಎಸ್ಎಲ್ ತಂಡ ಪರಿಶೀಲನೆ ನಡೆಸಿದ್ದು, ಹತ್ಯೆ ನಡೆದ ಸ್ಥಳಕ್ಕೂ ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯಗಳನ್ನು ಕಲೆಹಾಕಿದ್ದರು. ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು, ಸೋಮವಾರದಂದು ಅಂತ್ಯಸಂಸ್ಕಾರ ನೆರವೇರಿದ ಬೆನ್ನಲ್ಲೇ ಹತ್ಯೆ ನಡೆದ ಮನೆಯಲ್ಲಿ ಮೌನ ಆವರಿಸಿದೆ.
ಇದನ್ನೂ ಓದಿ: Modi at Belagavi: ಬಡ್ಡಿ ಸಮೇತ ಕರ್ನಾಟಕದ ಋಣ ತೀರಿಸುತ್ತೇನೆ; ಅಭಿವೃದ್ಧಿಗೆ ಜತೆಯಾಗಿ ಎಂದು ಕರೆ ನೀಡಿದ ಪ್ರಧಾನಿ ಮೋದಿ