ಬೆಂಗಳೂರು: ಬಿಎಂಟಿಸಿ (BMTC) ಕೇಂದ್ರ ಕಚೇರಿಯ ಆಯಕಟ್ಟಿನ ಜಾಗದಲ್ಲಿದ್ದ ಅಧಿಕಾರಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಒಟ್ಟು ೧೮ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಆದೇಶ ಹೊರಡಿಸಿದ್ದಾರೆ.
ಎಂಡಿ ಸಹಿಯನ್ನೇ ಫೋರ್ಜರಿ ಮಾಡಿದ ಪ್ರಕರಣದ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಬಿಎಂಟಿಸಿ, ಈಗ ಸಾಮೂಹಿಕ ವರ್ಗಾವಣೆಯ ಕ್ರಮ ಕೈಗೊಂಡಿದೆ. ಆ ಮೂಲಕ ಕಚೇರಿಯೊಳಗೆ ಮೇಜರ್ ಸರ್ಜರಿಯನ್ನು ಮಾಡಿದೆ.
ಯಾವೆಲ್ಲ ಅಧಿಕಾರಿಗಳ ವರ್ಗಾವಣೆ?
-ಶ್ಯಾಮಲಾ ಮುದ್ದೋಡಿ, ವಿಭಾಗೀಯ ಸಂಚಾರ ಅಧಿಕಾರಿ, ಸಂಚಾರ ವಾಣಿಜ್ಯ ಶಾಖೆ
-ಪ್ರತಿಮಾ ಎಸ್.ವಿ., ವಿಭಾಗೀಯ ಸಂಚಾರ ಅಧಿಕಾರಿ
-ಅನಿತಾ ಟಿ., ಸಹಾಯಕ ಸಂಚಾರ ಅಧೀಕ್ಷಕಿ, ಸಂಚಾರ ವಾಣಿಜ್ಯ ಶಾಖೆ
-ಮೋಹನ್ ಬಾಬು, ಸಹಾಯಕ ಸಂಚಾರ ಅಧೀಕ್ಷಕ
-ಸತೀಶ್- ಸಂಚಾರ ನಿರೀಕ್ಷಕ, ಸಂಚಾರ ವಾಣಿಜ್ಯ ಶಾಖೆ
-ಗುಣಶೀಲ,ಸಹಾಯಕ ಸಂಚಾರ ನಿರೀಕ್ಷಕಿ, ಸಂಚಾರಿ ವಾಣಿಜ್ಯ ಶಾಖೆ
-ಪವಿತ್ರ, ಸಹಾಯಕ ಸಂಚಾರ ನಿರೀಕ್ಷಕಿ, ಸಂಚಾರ ಆಚರಣೆ ಶಾಖೆ
-ಲಕ್ಷ್ಮಿನಾರಾಯಣ, ಸಹಾಯಕ ನಿಯಂತ್ರಕ
-ರಮೇಶ್, ಸಂಚಾರ ನಿಯಂತ್ರಕ
-ಗಣಪಯ್ಯ, ಸಹಾಯಕ ಲೆಕ್ಕಿಗ
-ಸುದೇವಿ, ಸಹಾಯಕಿ
-ಬಿ.ಎಸ್. ಲತಾ, ಸಹಾಯಕಿ
-ಪ್ರಸನ್ನ ಕುಮಾರ್ ಅಂಗಡಿ, ಕಿರಿಯ ಸಹಾಯಕ
-ಪರಮೇಶ್ವರ್, ಕುಶಲಕರ್ಮಿ
-ಮಂಜುಳಾ, ನಿರ್ವಾಹಕಿ
-ಕಾರ್ತಿಕ ಜಿ., ಕಚೇರಿ ಸಹಾಯಕ
-ಮುನಿರಾಜ್ ಎಸ್, ಕಚೇರಿ ಸಹಾಯಕ
-ಚೇತನ, ಸಂಚಾರ ನಿರೀಕ್ಷಕಿ
ಇದನ್ನೂ ಓದಿ: Karnataka Election: ಗೌರಿಗದ್ದೆ ಅವಧೂತ ವಿನಯ್ ಗುರೂಜಿ ಮೊರೆ ಹೋದರೇ ಲಕ್ಷ್ಮಿ ಹೆಬ್ಬಾಳ್ಕರ್?
ಏನಿದು ಬಿಎಂಟಿಸಿ ಎಂಡಿ ಸಹಿ ನಕಲು ಪ್ರಕರಣ?
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (BMTC) ಎಂಡಿಗೆ ವರ್ಷದವರೆಗೂ ಹಿರಿಯ ಅಧಿಕಾರಿಗಳು ಕಡತವನ್ನೇ ಕಳುಹಿಸಿಲ್ಲ. ಬದಲಾಗಿ ಎಂಡಿ ಸಹಿಯನ್ನು ಫೋರ್ಜರಿ ಮಾಡಿ, ಅವರೇ ವಂಚನೆ ಎಸಗಿದ್ದಾರೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಬಿಎಂಟಿಸಿ ಭದ್ರತಾ ಜಾಗೃತ ಇಲಾಖೆಯಿಂದ ದೂರು ದಾಖಲಾಗಿತ್ತು.
ಪ್ರಸ್ತುತ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ ಅಧಿಕಾರಿಯಾಗಿರುವ ಶ್ರಿರಾಮ್ ಮುಲ್ಕಾವನ್ ಎಂಬುವವರು ಟೆಂಡರ್ ನವೀಕರಣದ ಕಡತವನ್ನು ನಿರ್ದೇಶಕರಿಗೆ ಕಳುಹಿಸದೆ ಫೋರ್ಜರಿ ಮಾಡಿರುವ ಆರೋಪ ಕೇಳಿ ಬಂದಿದೆ. ಶ್ರೀರಾಮ್ ಮುಲ್ಕಾವನ್ ಫೋರ್ಜರಿ ಮಾಡಿ ಇಲಾಖೆಗೆ ದೋಖಾ ಮಾಡಿದ್ದು, ಹಾಲಿ ಎಂಡಿ ಸೇರಿದಂತೆ ಹಿಂದಿನ ಎಂಡಿಗಳ ಸಹಿಯೂ ನಕಲಿ ಮಾಡಿರುವ ಆಪಾದನೆ ಇದೆ. ಹಿಂದಿನ ಎಂಡಿಗಳಾದ ಶಿಖಾ, ಅನ್ಬುಕುಮಾರ್, ರಾಧಿಕಾ, ಸೂರ್ಯಸೇನ ಅವರ ಸಹಿಗಳನ್ನೂ ನಕಲು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Child Marriage: ಮಸ್ಕಿಯಲ್ಲಿ ನೆರವೇರಿದ ಬಾಲ್ಯ ವಿವಾಹ; ಬಾಲಕಿಯರಿಬ್ಬರು ಬಾಲಮಂದಿರಕ್ಕೆ ಶಿಫ್ಟ್
ಅಧಿಕಾರಿಗಳು ಶಾಮೀಲು ಶಂಕೆ
ಶ್ರೀರಾಮ್ ಜತೆ ಅನೇಕ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆದರೆ, ಎಫ್ಐಆರ್‌ನಲ್ಲಿ ಶ್ರೀರಾಮ್ ಹೊರತುಪಡಿಸಿ ಉಳಿದ ಅಧಿಕಾರಿಗಳ ಹೆಸರನ್ನು ಕೈಬಿಡಲಾಗಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಕೇಂದ್ರ ಕಚೇರಿಯೊಳಗೆ ದೊಡ್ಡ ಬದಲಾವಣೆಯನ್ನೇ ತರಲು ಬಯಸಿದ್ದರು. ಇದರ ಭಾಗವಾಗಿ ಬಹಳ ಸಮಯದಿಂದ ಒಂದೆಡೆ ಇದ್ದ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ.