ಚಾಮರಾಜನಗರ: ತಾಲೂಕಿನ ನಂಜೇದೇವನಪುರ ಗ್ರಾಮದ ಜಮೀನೊಂದರಲ್ಲಿ ಹಾವುಗಳ ಸರಸ ಸಲ್ಲಾಪ ಎಲ್ಲರ ಗಮನ ಸೆಳೆದಿದೆ. ಸುಮಾರು ಒಂದು ಗಂಟೆಗಳ ಕಾಲ ಈ ಹಾವುಗಳ ಸಲ್ಲಾಪದಲ್ಲಿ ತೊಡಗಿದ್ದು, ಅವುಗಳ ಸಮ್ಮಿಲನದ ದೃಶ್ಯವನ್ನು ವಿಡಿಯೊ ಮಾಡಿಕೊಳ್ಳಲಾಗಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Video Viral) ಆಗಿದೆ.
ನಾಗರಹಾವುಗಳು ಹೀಗೆ ಸರಸ ಸಲ್ಲಾಪದಲ್ಲಿ ತೊಡಗಿವೆ ಎಂದು ಹೇಳಲಾಗಿದೆ. ಇದು ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿತ್ತು. ಒಂದಕ್ಕೊಂದು ಸುತ್ತಿಕೊಂಡ ಹಾವುಗಳು ಈ ಜಗದ ಪರಿವೇ ಇಲ್ಲದಂತೆ ಸರಸ ಸಲ್ಲಾಪದಲ್ಲಿ ತೊಡಗಿದ್ದವು. ಸುಮಾರು ಗಂಟೆಗೂ ಹೆಚ್ಚು ಕಾಲ ಇವುಗಳು ಮಿಲನ ಕ್ರಿಯೆ ನಡೆಸಿವೆ. ಇದನ್ನು ಸ್ಥಳೀಯರು ತಮ್ಮ ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿಕೊಂಡು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ: Instagram: ನಿಮ್ಮ ಮಕ್ಕಳು ಇನ್‌ಸ್ಟಾ ಯೂಸ್ ಮಾಡ್ತಾ ಇದ್ದಾರಾ? ಈ ಜಾಲತಾಣದಲ್ಲೇ ಮಕ್ಕಳ ಲೈಂಗಿಕ ಶೋಷಣೆ ಜಾಲ ಸಕ್ರಿಯ!
ತಜ್ಞರು ಏನಂತಾರೆ?
ನಂಜೇದೇವನಪುರ ಗ್ರಾಮದ ಜಮೀನಿನಲ್ಲಿ ಹಾವುಗಳನ್ನು ಕಂಡ ಕೂಡಲೇ ನಾಗರಿಕರು ಅದನ್ನು ಓಡಿಸುವ ಕೆಲಸವನ್ನು ಮಾಡದಿರುವುದು ಶ್ಲಾಘನೆಗೆ ಪಾತ್ರವಾಗಿದೆ. ಕಾರಣ, ಇಂಥ ಸಂದರ್ಭದಲ್ಲಿ ಜನರು ಗಾಬರಿ ಬೀಳಬಾರದು. ಅಲ್ಲದೆ, ಅವುಗಳಿಗೆ ತೊಂದರೆಯನ್ನೂ ಮಾಡಬಾರದು ಎಂಬುದು ವನ್ಯಜೀವಿ ತಜ್ಞರ ಅಭಿಮತವಾಗಿದೆ.
ನಾಗರಹಾವು ಮಿಲನದ ವಿಡಿಯೊ ಇಲ್ಲಿದೆ
ಪ್ರಕೃತಿ ಸಮತೋಲನ ಕಾಯ್ದುಕೊಳ್ಳಬೇಕೆಂದರೆ ಪ್ರತಿಯೊಂದು ಜೀವಿಗಳ ಅವಶ್ಯಕತೆ ಬಹಳವೇ ಇರುತ್ತದೆ. ಯಾವುದೇ ಒಂದರ ಕೊರತೆಯಾದರೂ ಕೊಂಡಿ ತಪ್ಪುವುದಲ್ಲದೆ, ಪರಿಸರದಲ್ಲಿ ಅಸಮತೋಲನಕ್ಕೆ ಕಾರಣವೂ ಆಗುತ್ತದೆ. ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಅವುಗಳು ತಮ್ಮದೇ ಆದ ರೀತಿಯಲ್ಲಿ ಪರಿಸರಕ್ಕೆ ಕೊಡುಗೆಯನ್ನು ನೀಡುತ್ತಿರುತ್ತವೆ. ಜತೆಗೆ ಸೂಕ್ಷ್ಮ ಜೀವರಾಶಿಗಳ ನಿಯಂತ್ರಣದಲ್ಲಿ ಇವುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಪರಿಸರ ತಜ್ಞರು ಹೇಳುತ್ತಾರೆ.
ಇನ್ನು ಸೊಳ್ಳೆಗಳು ಮತ್ತದರ ಮೊಟ್ಟೆಗಳನ್ನು ಹಾವಿನ ಮರಿಗಳು ತಿನ್ನುತ್ತವೆ. ಹೀಗಾಗಿ ಸೊಳ್ಳೆಗಳ ನಿಯಂತ್ರಣವು ಆಗುವುದರಿಂದ ಅವುಗಳಿಂದ ಹರಡುವ ಸೋಂಕುಗಳು ಸಹ ನಿಯಂತ್ರಣವಾಗುತ್ತವೆ.
ಹೇಗೆ ನಡೆಯುತ್ತವೆ ಮಿಲನ?
ಎಲ್ಲರಿಗೂ ಒಂದು ಕುತೂಹಲ ಇದ್ದೇ ಇರುತ್ತವೆ. ಹಾವುಗಳ ಮಿಲನ ಪ್ರಕ್ರಿಯೆ ಹೇಗೆ ನಡೆಯುತ್ತವೆ? ಅವುಗಳಿಗೆ ಪರಸ್ಪರ ಮಿಲನ ಸೂಕ್ಷ್ಮಗಳು ಹೇಗೆ ಗೊತ್ತಾಗುತ್ತದೆ ಎಂಬ ಕುತೂಹಲ ಇರುತ್ತದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಹೆಣ್ಣು ಹಾವುಗಳು!
ಇದನ್ನೂ ಓದಿ: Traffic Police: ಒನ್‌ವೇ, ಫುಟ್‌ಪಾತ್‌ನಲ್ಲಿ ಗಾಡಿ ಓಡಿಸ್ಬೇಡಿ, ಹೋದ್ರೆ ಕ್ರಿಮಿನಲ್ ಕೇಸ್ ಬೀಳೋದು ಗ್ಯಾರಂಟಿ!
ಹೌದು. ಹೆಣ್ಣು ಹಾವುಗಳಿಗೆ ಮಿಲನದ ಬಯಕೆ ಆಗುತ್ತದೆ. ಆಗ ಹೆಣ್ಣು ಹಾವು ಪರಿಸರ ಪ್ರದೇಶಕ್ಕೆ ಬಂದು ಗಂಡು ಹಾವುಗಳನ್ನು ಆಕರ್ಷಿಸಲು ಫೆರೋಮೋನ್ ಎಂಬ ದ್ರವ್ಯವನ್ನು ಹೊರಸೂಸುತ್ತದೆ. ಈ ದ್ರವ್ಯವು ಎಲ್ಲ ಹಾವುಗಳಲ್ಲಿ ಸಾಮಾನ್ಯವಾಗಿರುತ್ತವೆ. ಈ ದ್ರವ್ಯವನ್ನು ಹೆಣ್ಣು ಹಾವುಗಳು ಹೊರಸೂಸಿವೆ ಎಂದಾದರೆ, ಅದು ಮಿಲನ ಕ್ರಿಯೆಗೆ ಆಹ್ವಾನ ನೀಡಿದಂತೆ. ಆಗ ಗಂಡು ಹಾವುಗಳು ಈ ವಾಸನೆಯನ್ನು ಗ್ರಹಿಸಿ ಅಲ್ಲಿಗೆ ಬರುತ್ತವೆ. ಮಿಲನದಲ್ಲಿ ತೊಡಗುತ್ತವೆ. ಇನ್ನು ಕೆಲವು ಸಂದರ್ಭದಲ್ಲಿ ಹಾವುಗಳು ಯಾವುದಾದರೂ ದಾಳಿಗೆ ತುತ್ತಾಗಿದ್ದರೆ ಇಲ್ಲವೇ ಅಪಾಯದ ಮುನ್ಸೂಚನೆಯಲ್ಲಿದ್ದರೂ ಈ ಫೆರೋಮೋನ್ ದ್ರವ್ಯವನ್ನು ಹೊರಸೂಸುತ್ತವೆ. ಆಗ ಈ ವಾಸನೆ ಗ್ರಹಿಸಿ ಆ ಜಾತಿಯ ಹಾವುಗಳು ಸ್ಥಳಕ್ಕೆ ಬರುತ್ತವೆ ಎಂದು ಉರಗ ತಜ್ಞರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.