Site icon Vistara News

Mayank Agarwal: ಚೇತರಿಸಿಕೊಂಡ ಮಯಾಂಕ್ ಅಗರ್ವಾಲ್; ತ್ರಿಪುರದಿಂದ ಬೆಂಗಳೂರಿಗೆ ಆಗಮನ

Mayank Agarwal

ದೇವನಹಳ್ಳಿ: ವಿಮಾನದಲ್ಲಿ ನೀರೆಂದು ಆ್ಯಸಿಡ್ ಕುಡಿದು ಅಸ್ವಸ್ಥರಾಗಿದ್ದ ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್‌ ಅಗರ್ವಾಲ್‌ (Mayank Agarwal) ಅವರು ಚೇತರಿಸಿಕೊಂಡಿದ್ದು, ಬುಧವಾರ ರಾತ್ರಿ ತ್ರಿಪುರದಿಂದ ಬೆಂಗಳೂರಿಗೆ ಆಗಮಿಸಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಬೆಂಗಳೂರಿನ ನಿವಾಸಕ್ಕೆ ತೆರಳಿದರು.

ಅಸ್ವಸ್ಥಗೊಂಡಿದ್ದ ಮಯಾಂಕ್‌ ಅಗರ್ವಾಲ್‌ ಅವರ ಆರೋಗ್ಯ ಉತ್ತಮವಾಗಿದ್ದು, ಫ್ಯಾಮಿಲಿ ಡಾಕ್ಟರ್ ಸಲಹೆ ಪಡೆದು ಮುಂದಿನ ಚಿಕಿತ್ಸೆ ಮುಂದುವರಿಯಲಿದೆ. ಗಂಟಲು ಸಮಸ್ಯೆಯಿಂದ ಸದ್ಯ ಮಾತನಾಡಲು ಆಗುತ್ತಿಲ್ಲ. ಚಿಕಿತ್ಸೆ ಪಡೆದ ನಂತರ ಮಾಧ್ಯಮಗಳ ಬಳಿ ಮಾತನಾಡುವುದಾಗಿ ಮಯಾಂಕ್‌ ಸಂಜ್ಞೆ ಮಾಡಿದ್ದಾರೆ.

ಕರ್ನಾಟಕ ಕ್ರಿಕೆಟ್‌ ತಂಡದ ಮ್ಯಾನೇಜರ್ ರಮೇಶ್ ಮಾತನಾಡಿ, ಮಯಾಂಕ್ ಅರ್ಗವಾಲ್ ಅವರು ಅಪಾಯದಿಂದ ಪಾರಾಗಿದ್ದಾರೆ. ಥ್ರೋಟ್ ಇನ್ಫೆಕ್ಷನ್ ಆಗಿರುವ ಕಾರಣ ಅವರು ಮಾತನಾಡಲು ಆಗುತ್ತಿಲ್ಲ. ತ್ರಿಪುರಾದಿಂದ ಸೂರತ್‌ಗೆ ಹೋಗುವಾಗ ತೊಂದರೆಯಾಗಿತ್ತು. ಕೂಡಲೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ. ನೀರು ಕುಡಿದ ಪರಿಣಾಮ ಪ್ರಾಬ್ಲಂ ಆಗಿತ್ತು. ಆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ತನಿಖೆ ನಂತರ ಏನಾಗಿತ್ತು ಎಂಬುವುದು ಗೊತ್ತಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ | Jay Shah : ಮೂರನೇ ಬಾರಿಗೆ ಎಸಿಸಿ ಅಧ್ಯಕ್ಷ ಸ್ಥಾನಕ್ಕೇರಿದ ಜಯ್​ ಶಾ

ಏರ್‌ಪೋರ್ಟ್‌ನಿಂದ ಮನೆಗೆ ತೆರಳುತ್ತಿದ್ದಾರೆ. ನಾಳೆ ಬೆಂಗಳೂರಿನಲ್ಲಿ ವೈದ್ಯರನ್ನು ಸಂಪರ್ಕಿಸಲಿದ್ದಾರೆ. ಮಯಾಂಕ್ ಅಗರ್ವಾಲ್ ಅವರು ಕ್ಷೇಮವಾಗಿದ್ದಾರೆ‌ ಯಾರು ಗಾಬರಿ ಪಡಬೇಕಿಲ್ಲ. ಸಹಕಾರ ನೀಡಿದ ಆಡಳಿತ ಮಂಡಳಿ ಹಾಗೂ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ವಿಮಾನದಲ್ಲಿ ನೀರೆಂದು ಆ್ಯಸಿಡ್ ಕುಡಿದಿದ್ದ ಮಯಾಂಕ್

ತ್ರಿಪುರಾ ವಿರುದ್ಧ ರಣಜಿ ಪಂದ್ಯವನ್ನು ಗೆದ್ದಿರುವ ಕರ್ನಾಟಕ ತಂಡವು ಮುಂದಿನ ಪಂದ್ಯವನ್ನು ಫೆಬ್ರವರಿ 2ರಿಂದ ಗುಜರಾತ್‌ನ ಸೂರತ್‌ನಲ್ಲಿ ಆಡಬೇಕಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ತಂಡವು ಸೋಮವಾರ ತ್ರಿಪುರಾದ ಅಗರ್ತಲಾದಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಿತ್ತು. ಈ ವೇಳೆ, ಮಯಾಂಕ್ ಅಗರ್ವಾಲ್ ಅವರು ವಿಮಾನದಲ್ಲಿ ಸೀಟಿನ ಮುಂಭಾಗದಲ್ಲಿದ್ದ ಬಾಟಲಿಯನ್ನು ನೀರೆಂದು ಭಾವಿಸಿ ಕುಡಿದಾಗ ಅಸ್ವಸ್ಥರಾಗಿದ್ದರು.

ನೀರು ಕುಡಿಯುತ್ತಿದ್ದಂತೆ ಅವರ ಗಂಟಲಿನಲ್ಲಿ ಉರಿ ಶುರುವಾಗಿದೆ. ಬಾಯಿ ಮತ್ತು ನಾಲಿಗೆಗೆ ಕೂಡ ಸುಟ್ಟಂತ ಅನುಭವಾಗಿದೆ. ಮಾತನಾಡಲು ಸಾಧ್ಯವಾಗದೆ ತೀವ್ರ ಅಸ್ವಸ್ಥಗೊಂಡ ಅವರನ್ನು ಕೂಡಲೇ ಅಗರ್ತಲಾದ ಎಎಲ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು.

ಇದನ್ನೂ ಓದಿ | Ind vs Eng : ಎರಡನೇ ಟೆಸ್ಟ್​ಗೆ ಸಿರಾಜ್​ ಹೊರಗಿಡಿ, ಮಾಜಿ ಆಟಗಾರನ ಸಲಹೆ

ಇತ್ತೀಚಿನ ಮಾಹಿತಿಗಳ ಪ್ರಕಾರ, ಸ್ಟೋರೇಜ್ ಏರಿಯಾದಲ್ಲಿ ವಿಮಾನದ ಸಿಬ್ಬಂದಿಯು ವಾಟರ್ ಬಾಟಲ್‌ನಲ್ಲಿ ಆ್ಯಸಿಡ್ ಇಟ್ಟಿದ್ದರು ಎನ್ನಲಾಗಿದೆ. ಮಯಾಂಕ್ ಅಗರ್ವಾಲ್ ಅವರು ನೀರೆಂದು ತಪ್ಪಾಗಿ ಭಾವಿಸಿ ಆ್ಯಸಿಡ್ ಕುಡಿದಿದ್ದಾರೆ. ಆ್ಯಸಿಡ್ ಕುಡಿದ ಮರುಕ್ಷಣವೇ ಅವರು ಎಲ್ಲವನ್ನು ಉಗುಳಿದ್ದಾರೆ, ಹೀಗಾಗಿ ಅಪಾಯ ತಪ್ಪಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ.

Exit mobile version