Site icon Vistara News

‌MB Patil: ಕುಮಾರಸ್ವಾಮಿಯದು ಅವಕಾಶವಾದಿ ಮೈತ್ರಿ ಎಂದ ಎಂ.ಬಿ. ಪಾಟೀಲ್

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ಬಿಜೆಪಿ ಜತೆ, ಆಮೇಲೆ ಕಾಂಗ್ರೆಸ್ ಜತೆ ಸೇರಿಕೊಂಡು ಸರ್ಕಾರ ರಚಿಸಿ, ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. ಈಗ ಪುನಃ ಬಿಜೆಪಿ ಜತೆ ಹೋಗಿದ್ದಾರೆ. ಅವರದು ಅವಕಾಶವಾದಿ ಮೈತ್ರಿ. ಅವರು ತಮ್ಮ ಸರ್ಕಾರವನ್ನೇ ಉಳಿಸಿಕೊಳ್ಳಲಿಲ್ಲ. ಈಗ ನಮ್ಮ ಸರ್ಕಾರವನ್ನು ಉರುಳಿಸುವ ಮಾತುಗಳನ್ನು ಆಡುತ್ತಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ್ (‌MB Patil) ಟೀಕಿಸಿದರು.

ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಮೊದಲು ಪಾದಯಾತ್ರೆಗೆ ತಮ್ಮ‌ ನೈತಿಕ ಬೆಂಬಲವೂ ಇಲ್ಲ ಎಂದರು. ಆಮೇಲೆ ಯಾರದೋ ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ಪಾದಯಾತ್ರೆಗೆ ಹೋಗಿದ್ದಾರಷ್ಟೆ ಎಂದು ಕುಟುಕಿದರು.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ಯಾವ ತಪ್ಪೂ ಇಲ್ಲ. ಸ್ವತಃ ಮುಡಾ ತಪ್ಪು ಮಾಡಿ, ಅದನ್ನು ಒಪ್ಪಿಕೊಂಡಿದೆ. ನಿಯಮಗಳಂತೆಯೇ ಸಿಎಂ ಪತ್ನಿಗೆ ಬದಲಿ ನಿವೇಶನಗಳನ್ನು ಅದು ಕೊಟ್ಟಿದೆ. ಇದರಲ್ಲಿ ಸಿದ್ದರಾಮಯ್ಯ ಅವರ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | PSI Parashuram Case: ಸರ್ಕಾರಿ ಯೋಜನೆ ಹಣ ಬಿಡುಗಡೆಗೂ ಕಮಿಷನ್‌ಗೆ ಬೇಡಿಕೆ; ಎ2 ಪಂಪನಗೌಡ ವಿರುದ್ಧ ಮತ್ತೊಂದು ಆರೋಪ

ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು ಸಚಿವರ ಸಭೆ ಕರೆದಿರುವುದರಲ್ಲಿ ತಪ್ಪೇನೂ ಇಲ್ಲ. ಪಕ್ಷದ ಹಿತದೃಷ್ಟಿಯಿಂದ ಅವರು ನಮಗೆ ಸಲಹೆ ಕೊಡಬಹುದಷ್ಟೆ. ಇದಕ್ಕಿಂತ ಹೆಚ್ಚು ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದರು.

ಪೊಲೀಸ್ ಎಸ್ಐ ಒಬ್ಬರು ಸತ್ತಿರುವುದರ ಹಿಂದೆ ಅಲ್ಲಿನ ಕಾಂಗ್ರೆಸ್ ಶಾಸಕರ ಕೈವಾಡವೇನೂ‌ ಇಲ್ಲ. ಈಗ ಪ್ರತಿಯೊಂದಕ್ಕೂ ಶಾಸಕರು ಮತ್ತು ಮಂತ್ರಿಗಳನ್ನು ದೂರುವುದು ಒಂದು ಕಾಯಿಲೆಯಾಗಿದೆ ಎಂದು ಬೇಸರ ಹೊರಹಾಕಿದರು.

ಎಚ್‌ಡಿಕೆ ಪ್ಯಾಂಟ್‌ನಲ್ಲಿ ಖಾಕಿ ಚೆಡ್ಡಿ ಇದೆ ಎಂದ ಜಮೀರ್‌

Zameer Ahmed Khan

ರಾಮನಗರ: ಕುಮಾರಸ್ವಾಮಿ ಕೇವಲ 37 ಸೀಟ್ ಗೆದ್ದು ನಮ್ಮ ಜೊತೆ ಬಂದಿದ್ದರು. ಅವರದು ಮ್ಯಾಚ್ ಫಿಕ್ಸಿಂಗ್, ಅವರನ್ನು ನಂಬಬೇಡಿ ಅಂತ ಕಾಂಗ್ರೆಸ್‌ನವರಿಗೆ ಅಂದೇ ಹೇಳಿದ್ದೆ. ನಾನು ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಕುಮಾರಸ್ವಾಮಿ ಪ್ಯಾಂಟ್‌ನಲ್ಲಿ ಖಾಕಿ ಚೆಡ್ಡಿ ಇದೆ. ಬಿಜೆಪಿಗಿಂತ ಬಿಗಿಯಾದ ಖಾಕಿ ಚೆಡ್ಡಿ ಹಾಕಿದ್ದಾರೆ ಎಂದು ನಾನು ಹೇಳಿದಾಗ ಕೆಲವರು ಕೇಳಲಿಲ್ಲ ಎಂದು ಸಚಿವ ಜಮೀರ್ ಅಹ್ಮದ್‌ (Zameer Ahmed Khan) ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿ ಬಡವರಿಗೆ ಒಂದು‌ ಮನೆಯನ್ನೂ ಕೊಟ್ಟಿಲ್ಲ. ಯಾಕೆ ಬಿಜೆಪಿ-ಜೆಡಿಎಸ್‌ಗೆ ಬಡವರ ಬಗ್ಗೆ ಕಾಳಜಿ ಇಲ್ವಾ? ಕುಮಾರಸ್ವಾಮಿ ಅವರೇ ರಾಮನಗರದ ಜನ್ಮಕೊಟ್ಟ ಕ್ಷೇತ್ರ ಅಂತೀರಿ. ರಾಮನಗರದಲ್ಲಿ ಎಷ್ಟು ಮನೆ ಕೊಟ್ಟಿದ್ದೀರಿ? ನಿಮಗೆ ಓಪನ್ ಚಾಲೆಂಜ್ ಹಾಕುತ್ತೀನಿ, ಕೇವಲ 330 ಮನೆ ಕೊಟ್ಟಿದ್ದೀರಿ. ನಾವು ಎಷ್ಟು ಮನೆ ಕೊಟ್ಟಿದ್ದೀವಿ ಬನ್ನಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.

ಚನ್ನಪಟ್ಟಣಕ್ಕೆ 5 ಸಾವಿರ ಮನೆ ಮಂಜೂರು ಮಾಡುತ್ತೇವೆ

ಡಿ.ಕೆ.ಸುರೇಶ್ ಸೋತಿದ್ದು ನನಗೆ ಹೊಟ್ಟೆ ಉರೀತಿದೆ. ಕ್ಷೇತ್ರದಲ್ಲಿ ಕ್ಲರ್ಕ್ ರೀತಿ ಕೆಲಸ ಮಾಡಿದ್ದಾರೆ. ಅವರು ಕ್ಷೇತ್ರಕ್ಕಾಗಿ ಹಲವು ರಾತ್ರಿ ಕೆಲಸ ಮಾಡಿದ್ದಾರೆ. ಅಂತವರು ಸೋತಿದ್ದರಿಂದ ಹೊಟ್ಟೆ ಉರೀತಿದೆ. ಡಿ.ಕೆ. ಸುರೇಶ್ ಅವರ 1 ಪರ್ಸೆಂಟ್ ಕೆಲಸ ಕುಮಾರಸ್ವಾಮಿ ಮಾಡಿಲ್ಲ. ಕೇವಲ ಡಂಗುರ ಹೊಡೆದುಕೊಂಡು ಬರುತ್ತಾರೆ. ಚನ್ನಪಟ್ಟಣಕ್ಕೆ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಬೇಕು ಅಂತ ಡಿ.ಕೆ.ಸುರೇಶ್ ಕೇಳಿದ್ದರು. ಹೀಗಾಗಿ ಚನ್ನಪಟ್ಟಣಕ್ಕೆ ಐದು ಸಾವಿರ ಮನೆ ಮಂಜೂರು ಮಾಡುತ್ತೇವೆ, ಇನ್ನು 15 ದಿನಗಳಲ್ಲಿ 5 ಸಾವಿರ ಮನೆ ಮಂಜೂರು ಮಾಡುತ್ತೇವೆ. ಮೈನಾರಿಟಿ ಅಭಿವೃದ್ಧಿಗೆ 10ಕೋಟಿ ಹಣ ಕೊಡುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್‌ ಘೋಷಣೆ ಮಾಡಿದರು.

ಇದನ್ನೂ ಓದಿ | PSI Parashuram Case: ಸರ್ಕಾರಿ ಯೋಜನೆ ಹಣ ಬಿಡುಗಡೆಗೂ ಕಮಿಷನ್‌ಗೆ ಬೇಡಿಕೆ; ಎ2 ಪಂಪನಗೌಡ ವಿರುದ್ಧ ಮತ್ತೊಂದು ಆರೋಪ

ಬಿಜೆಪಿ-ಜೆಡಿಎಸ್ ಪಾದಯಾತ್ರೆಯಿಂದ ಏನೂ ಆಗಲ್ಲ. ನಾವೆಲ್ಲಾ ಇರೋವರೆಗೂ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಏನೂ‌ ಮಾಡೋಕಾಗಲ್ಲ. ಯಾರೋ ಅವರನ್ನು ಮುಟ್ಟೋಕೆ ಸಾಧ್ಯವಿಲ್ಲ. ನಾವೆಲ್ಲಾ ನಮ್ಮ ನಾಯಕರ ಜೊತೆ ಇದ್ದೀವಿ. ಡಿಕೆಶಿ ಆಸ್ತಿ ಬಗ್ಗೆ ಬಿಚ್ಚಿಡ್ತೀನಿ ಅಂತ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಕುಮಾರಸ್ವಾಮಿ ನಿಮ್ಮ ಕುಟುಂಬದ ಆಸ್ತಿ ತೆಗೆದರೆ ಕರ್ನಾಟಕದ 3 ಬಜೆಟ್ ಮಾಡಬಹುದು. ನಿಮ್ಮ ಅಣ್ಣ, ಅಕ್ಕ, ಬಾವ, ಅನುಸೂಯಕ್ಕ ಎಲ್ಲರ ಆಸ್ತಿ ತೆಗಿಯಿರಿ. ದಯಮಾಡಿ ಎರಡು ಬಜೆಟ್ ಗಾಗುವಷ್ಟಾದರೂ ಜನರಿಗೆ ಕೊಡಿ ಎಂದು ಕುಮಾರಸ್ವಾಮಿಗೆ ಒತ್ತಾಯ ಮಾಡಿದರು.

Exit mobile version