ತುಮಕೂರು: ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಲು ತುರುವೇಕೆರೆ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಅವರು ಮುಂದಾಗಿದ್ದು, ವಾರದೊಳಗೆ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.
ಸದ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಿರುವ ಎಂ.ಡಿ.ಲಕ್ಷ್ಮಿನಾರಾಯಣ(ಎಂಡಿಎಲ್), 1999ರ ಚುನಾವಣೆಯಲ್ಲಿ ಬಿಜೆಪಿಯಿಂದ ತುರುವೇಕೆರೆಯಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದರು. 2012ರಲ್ಲಿ ಬಿಜೆಪಿಯಿಂದ ಎಂಎಲ್‌ಸಿ ಸ್ಥಾನಕ್ಕೆ ನಾಮನಿರ್ದೇಶನಗೊಂಡಿದ್ದ ಅವರು, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಈಗ ಕಾಂಗ್ರೆಸ್ ಮೇಲೆ ಮುನಿಸಿಕೊಂಡು ಮತ್ತೆ ಕಮಲ ಹಿಡಿಯಲು ಮುಂದಾಗಿದ್ದಾರೆ.
ಇದನ್ನೂ ಓದಿ | ಜಾರ್ಖಂಡ ಶಾಸಕರು, ಸಚಿವರನ್ನೆಲ್ಲ ಕರೆದುಕೊಂಡು ಜಲಾಶಯಕ್ಕೆ ಹೋದ ಸಿಎಂ ಹೇಮಂತ್ ಸೊರೆನ್
ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, “ಬಿಜೆಪಿಯು ನನಗೆ ಹಲವು ಸ್ಥಾನಮಾನಗಳನ್ನು ನೀಡಿ ರಾಜ್ಯ ಮಟ್ಟದಲ್ಲಿ ಗುರುತಿಸಿದೆ. ಹೀಗಾಗಿ ನಾನು ಬಿಜೆಪಿಯ ಋಣ ತೀರಿಸುವೆ. ಯಾವುದೇ ಕ್ಷೇತ್ರದಿಂದಲೂ ಚುನಾವಣೆಗೆ ಸ್ಪರ್ಧಿಸಲು ಬಯಸುವುದಿಲ್ಲ. ತುರುವೇಕೆರೆ ಶಾಸಕರಾಗಿರುವ ಮಸಾಲ ಜಯರಾಮ್ ಅವರನ್ನು ಮತ್ತೆ ಗೆಲ್ಲಿಸಲು ಶ್ರಮಿಸುವೆ. ಕಾಂಗ್ರೆಸ್ ಪಕ್ಷದವರಿಗೆ ಸಂಸ್ಕೃತಿ ಇಲ್ಲ, ನಾನು ಬಿಜೆಪಿ ಸೇರಿದ ನಂತರ ಕಾಂಗ್ರೆಸ್ ಕರ್ಮಕಾಂಡ ಬಯಲು ಮಾಡುವೆ ಎಂದು ತಿಳಿಸಿದ್ದಾರೆ.
ಯಾವುದೇ ನಿರೀಕ್ಷೆ ಅಥವಾ ಷರತ್ತುಗಳನ್ನು ವಿಧಿಸಿ ಬಿಜೆಪಿಗೆ ಹೋಗುತ್ತಿಲ್ಲ. ಸಂಸ್ಕಾರ, ಸಂಘ ಪರಿವಾರದ ಹಿನ್ನೆಲೆಯಿಂದ ಬಂದವನಾಗಿರುವುದರಿಂದ ಹೋಗುತ್ತಿರುವೆ. ಬಹಳ ಕಾಲದಿಂದ ನನ್ನ ದೇಹ ಮಾತ್ರ ಕಾಂಗ್ರೆಸ್‌ನಲ್ಲಿತ್ತು. ಆದರೆ ಮನಸ್ಸು ಬಿಜೆಪಿ ಕಡೆ ಇತ್ತು. ಕಾಂಗ್ರೆಸ್‌ಗೆ ಸಂಸ್ಕೃತಿಯೇ ಇಲ್ಲ, ಸದಾ ಹಿಂದುಗಳನ್ನು ಬೈಯುವುದು, ನಮ್ಮ ದೇವರುಗಳನ್ನು ಟೀಕಿಸುವುದೇ ಅವರ ಕೆಲಸ ಎಂದು ಕಿಡಿ ಕಾರಿದರು.
ಇದನ್ನೂ ಓದಿ | ಯಾರು ಕಮಿಷನ್ ತೆಗೆದುಕೊಂಡಿದ್ದರೋ ಎಚ್‌ಡಿಕೆ ಹೇಳಲಿ: ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್