Site icon Vistara News

ಕಾಂಗ್ರೆಸ್‌ ತೊರೆದ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ, 10 ವರ್ಷಗಳ ಬಳಿಕ ಬಿಜೆಪಿಗೆ ಘರ್‌ವಾಪ್ಸಿ

MD Laxminarayana

ತುಮಕೂರು: ೨೦೧೨ರಲ್ಲಿ ಬಿಜೆಪಿ ಬಿಟ್ಟು, ಕೆಜೆಪಿಯಲ್ಲಿದ್ದು ಬಳಿಕ ೨೦೧೫ರಲ್ಲಿ ಕಾಂಗ್ರೆಸ್‌ ಸೇರಿದ್ದ ತುರುವೇಕೆರೆ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ ಅವರು ಕಾಂಗ್ರೆಸ್‌ಗೆ ವಿದಾಯ ಹೇಳಿದ್ದಾರೆ. ಅವರು ಮತ್ತೆ ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಎಂ.ಡಿ. ಲಕ್ಷ್ಮೀನಾರಾಯಣ ಅವರು ಮೂಲತಃ ಬಿಜೆಪಿಯವರೇ ಆಗಿದ್ದರು. ೨೦೧೨ರಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಬಿಜೆಪಿಯಿಂದ ಸಿಡಿದೆದ್ದು ಕೆಜೆಪಿ ಪಕ್ಷ ಸೇರಿದ್ದರು ಲಕ್ಷ್ಮೀನಾರಾಯಣ. ಬಿಎಸ್‌ವೈ ಅವರ ಕಟ್ಟಾ ಅನುಯಾಯಿಯಾಗಿದ್ದ ಲಕ್ಷ್ಮೀನಾರಾಯಣ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡುವವರಲ್ಲಿ ಮುಂಚೂಣಿಯಲ್ಲಿದ್ದರು. ಈ ಕಾರಣಕ್ಕಾಗಿಯೇ ಏನೋ ಒಂದು ಹಂತದಲ್ಲಿ ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮರಳಿ ಸೇರಿಸಿಕೊಂಡರೂ ಎಂ.ಡಿ. ಲಕ್ಷ್ಮೀನಾರಾಯಣ ಅವರಿಗೆ ಪ್ರವೇಶ ನೀಡಿರಲಿಲ್ಲ. ಹಾಗಾಗಿ ಅವರು ಕಾಂಗ್ರೆಸ್‌ ಪಕ್ಷವನ್ನು ಸೇರಿದ್ದರು. ಇದೀಗ ೭ ವರ್ಷಗಳ ಬಳಿಕ ಅವರಿಗೆ ಕಾಂಗ್ರೆಸ್‌ ನಿಲುವುಗಳ ಬಗ್ಗೆ ಆಕ್ಷೇಪ ಹುಟ್ಟಿಕೊಂಡಿದೆ. ಹೀಗಾಗಿ ಆಗಸ್ಟ್‌ ೩೧ರಂದು ಪಕ್ಷಕ್ಕೆ ಗುಡ್‌ ಬೈ ಹೇಳಿದ್ದಾರೆ.

ತುರುವೇಕೆರೆ ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಎಂ.ಡಿ.ಲಕ್ಷ್ಮೀನಾರಾಯಣ ರಾಜೀನಾಮೆ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರು. ಕಳೆದ ಕೆಲವು ಸಮಯದಿಂದ ಅವರು ಕಾಂಗ್ರೆಸ್‌ ವಿರುದ್ಧ ಆಗಾಗ ಅಸಮಾಧಾನ ಹೊರಹಾಕುತ್ತಲೆ ಇದ್ದರು. ಹೋದಲ್ಲಿ ಬಂದಲ್ಲಿ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದರು. ಆಗಲೇ ಅವರು ಪಕ್ಷ ಬಿಡುವುದು ಖಚಿತವಾಗಿತ್ತು. ಈಗ ಅಧಿಕೃತವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿರುವ ಅವರು, ಇತ್ತೀಚಿನ ಬೆಳವಣಿಗೆಯಿಂದ ಬೇಸತ್ತು ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬರೆದಿದ್ದಾರೆ. ಕಾಂಗ್ರೆಸ್‌ ಹಿಂದೂ ವಿರೋಧಿ ನಿಲುವುಗಳನ್ನು ಪ್ರದರ್ಶಿಸುತ್ತಿದೆ ಎನ್ನುವುದು ಅವರು ಮಾಡುವ ಪ್ರಮುಖ ಆರೋಪ.

ಲಕ್ಷ್ಮೀನಾರಾಯಣ ನಡೆದು ಬಂದ ಹಾದಿ
1999ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ತುರುವೇಕೆರೆಯಲ್ಲಿ ಸ್ಪರ್ಧಿಸಿ ಗೆದ್ದು ಶಾಸಕರಾಗಿದ್ದ ಲಕ್ಷ್ಮೀನಾರಾಯಣ ಅವರು 2012ರಲ್ಲಿ ಎಂಎಲ್ಸಿ ಸ್ಥಾನಕ್ಕೆ ನಾಮನಿರ್ದೇಶನಗೊಂಡಿದ್ದರು. ಬಳಿಕ ಬಿಎಸ್‌ವೈ ಅವರು ಕೆಜೆಪಿ ಕಟ್ಟಿದಾಗ ಅವರ ಜತೆಗೆ ಹೋಗಿದ್ದರು. ಮುಂದೆ ಬಿಜೆಪಿ ಬಿಎಸ್‌ವೈ ಅವರನ್ನು ಸೇರಿಸಿಕೊಂಡಿತಾದರೂ ಲಕ್ಷ್ಮೀನಾರಾಯಣ ಅವರಿಗೆ ಬಾಗಿಲು ಮುಚ್ಚಿತ್ತು.

ಆಗ ಕಾಂಗ್ರೆಸ್‌ ಸೇರಿದ್ದ ಲಕ್ಷ್ಮೀನಾರಾಯಣ ಅವರನ್ನು ಕೆಪಿಸಿಸಿಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೆ, ಕಳೆದ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಅವರು ಸಿಟ್ಟಿಗೆದ್ದಿದ್ದಾರೆ.

ʻʻಬಿಜೆಪಿ ತನಗೆ ಹಲವು ಸ್ಥಾನಮಾನಗಳನ್ನು ನೀಡಿ ರಾಜ್ಯ ಮಟ್ಟದಲ್ಲಿ ಗುರುತಿಸಿದೆ. ನನ್ನನ್ನು ಶಾಸಕ, ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದೆ. ಹೀಗಾಗಿ ನಾನು ಬಿಜೆಪಿಯ ಋಣ ತೀರಿಸುವೆ. ಬಿಜೆಪಿಯನ್ನು ಸುಭದ್ರವಾಗಿ ಸಂಘಟಿಸುವೆʼʼ ಎಂದು ಹೇಳಿಕೊಂಡಿದ್ದಾರೆ ಲಕ್ಷ್ಮೀನಾರಾಯಣ.

Exit mobile version