Site icon Vistara News

Sindhuri Vs Roopa : ನಾನೂ ನನ್ನ ಗಂಡ ಇನ್ನೂ ಜತೆಗಿದ್ದೇವೆ, ಆದರೆ ಕುಟುಂಬ ಒಡೆಯೋರನ್ನು ಪ್ರಶ್ನಿಸಿ: ಮತ್ತೆ ಸಿಡಿದ ರೂಪಾ

Roopa family Sindhuri

#image_title

ಬೆಂಗಳೂರು: ಮೈಸೂರಿನ ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರ ಜತೆ ಮಾತನಾಡಿರುವ ವಿಚಾರಗಳು ವೈರಲ್‌ ಆಗಿ ಮಾಧ್ಯಮಗಳಲ್ಲಿ ಜೋರಾಗಿ ಚರ್ಚೆಯಾಗುತ್ತಿರುವುದನ್ನು ಗಮನಿಸಿರುವ ಐಪಿಎಸ್‌ ಅಧಿಕಾರಿ ಡಿ. ರೂಪಾ ಅವರು ತಾನು ರೋಹಿಣಿ ಸಿಂಧೂರಿ ವಿರುದ್ಧ (Sindhuri Vs Roopa) ಮಾಡಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಹೆಚ್ಚು ಫೋಕಸ್‌ ಮಾಡಿ ಎಂದು ಮಾಧ್ಯಮಗಳಿಗೆ ಸಲಹೆ ನೀಡಿದ್ದಾರೆ. ಅದೇ ಹೊತ್ತಿಗೆ ಕುಟುಂಬಗಳನ್ನು ಒಡೆಯುವ ಕೆಲವೊಂದು ದುಷ್ಟರ ಬಗ್ಗೆಯೂ ತನಿಖೆ ನಡೆಸಿ ಎಂದಿದ್ದಾರೆ.

ರೋಹಿಣಿ ಸಿಂಧೂರಿ ಅವರು ಹೆಚ್ಚು ಹೆಚ್ಚು ಮೌನೀಶ್‌ ಮೌದ್ಗಿಲ್‌ ಅವರನ್ನು ಅವಲಂಬಿಸುತ್ತಿರುವುದರ ವಿರುದ್ಧ ಸಿಟ್ಟಿಗೆದ್ದಿರುವ ಡಿ. ರೂಪಾ ಗಂಗರಾಜು ಅವರ ಜತೆಗಿನ ಸಂಭಾಷಣೆಯಲ್ಲಿ ತಮ್ಮ ಆಕ್ರೋಶವನ್ನು ಹೇಳಿಕೊಂಡಿದ್ದಾರೆ. ಅದು ಸಾಮಾಜಿಕ ವಲಯದಲ್ಲಿ ಚರ್ಚೆಗೆ ಒಳಗಾಗಿರುವ ನಡುವೆಯೇ ಈಗ ರೂಪಾ ಅವರು ಫೇಸ್‌ ಬುಕ್‌ನಲ್ಲಿ ಹೊಸ ಪೋಸ್ಟ್‌ ಹಾಕಿದ್ದಾರೆ. ಅದರಲ್ಲಿ ತಮ್ಮ ಕುಟುಂಬ ಇನ್ನೂ ಜತೆಗೇ ಇದೆ. ಅದನ್ನ ಉಳಿಸಿಕೊಳ್ಳಲು ಹೋರಾಡುತ್ತಿದ್ದೇನೆ ಎಂಬರ್ಥದ ಹೇಳಿಕೆ ನೀಡಿದ್ದಾರೆ.

ಪರಸ್ಪರ ಬೀದಿ ಜಗಳಕ್ಕೆ ಇಳಿದಿರುವ ಇಬ್ಬರು ಮಹಿಳಾ ಅಧಿಕಾರಿಗಳನ್ನು ಕರೆದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಎಚ್ಚರಿಕೆ ನೀಡಿ, ಸಾರ್ವಜನಿಕ ಹೇಳಿಕೆ ನೀಡದಂತೆ ತಾಕೀತು ಮಾಡಿದ ಬಳಿಕವೂ ರೂಪಾ ಅವರು ಈ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹಾಗಿದ್ದರೆ ಪೋಸ್ಟ್‌ನಲ್ಲಿ ಏನು ಹೇಳಿದ್ದಾರೆ?

ಮಾಧ್ಯಮಗಳೇ ದಯವಿಟ್ಟು ನಾನು ರೋಹಿಣಿ ಸಿಂಧೂರಿ ಅವರ ವಿರುದ್ಧ ಎತ್ತಿರುವ ಭ್ರಷ್ಟಾಚಾರದ ವಿಷಯದ ಮೇಲೆ ಫೋಕಸ್‌ ಮಾಡಿ. ಜನಸಾಮಾನ್ಯರ ಬದುಕಿನ ಮೇಲೆ ಮಾರಕ ಪರಿಣಾಮ ಬೀರುವ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಯಾರನ್ನೂ ನಾನು ತಡೆದಿಲ್ಲ.

ಅದೇ ಹೊತ್ತಿಗೆ ನೀವು ಒಂದೇ ಮಾದರಿಯಲ್ಲಿ ನಡೆಯುತ್ತಿರುವ ದುರಂತಗಳ ಬಗ್ಗೆಯೂ ತನಿಖೆ ಮಾಡಿ. ಕರ್ನಾಟಕದಲ್ಲಿ ಒಬ್ಬ ಅಧಿಕಾರಿ ಸಾಯುತ್ತಾರೆ, ತಮಿಳುನಾಡಿನಲ್ಲಿ ಒಬ್ಬರು ಪ್ರಾಣ ಕಳೆದುಕೊಳ್ಳುತ್ತಾರೆ. ಕರ್ನಾಟಕದಲ್ಲಿ ಒಂದು ಐಎಎಸ್‌ ಕುಟುಂಬ ವಿಚ್ಛೇದನವನ್ನೇ ಪಡೆಯುವ ಸ್ಥಿತಿ ನಿರ್ಮಾಣವಾಗುತ್ತದೆ. ಇದರ ಬಗ್ಗೆ ತನಿಖೆ ನಡೆಸಿ.

ಯಾವುದೇ ಊಹಾಪೋಹಗಳನ್ನು ಮಾಡಲು ಹೋಗಬೇಡಿ. ನಾನು ಮತ್ತು ನನ್ನ ಗಂಡ ಇನ್ನೂ ಜತೆಗೇ ಇದ್ದೇವೆ. ನಾವು ನಮ್ಮ ಕುಟುಂಬವನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ನೀವು ಪ್ರಶ್ನೆ ಮಾಡಬೇಕಾಗಿರುವುದು ಕುಟುಂಬಗಳಿಗೆ ಅಡ್ಡಿಯಾಗುವ ದುಷ್ಟತನವನ್ನು ಪ್ರದರ್ಶಿಸುತ್ತಿರುವ ವ್ಯಕ್ತಿಗಳನ್ನು. ಇದನ್ನು ಮಾಡದೆ ಹೋದರೆ ಇನ್ನೂ ಅನೇಕ ಕುಟುಂಬಗಳು ನಾಶವಾದಾವು. ನಾನೊಬ್ಬ ದೈರ್ಯವಂತ ಮಹಿಳೆ. ನಾನು ಹೋರಾಟ ಮಾಡುತ್ತೇನೆ. ನಾನು ಎಲ್ಲ ಸಂತ್ರಸ್ತ ಮಹಿಳೆಯರ ಪರವಾಗಿ ಹೋರಾಡುತ್ತೇವೆ. ಎಲ್ಲ ಮಹಿಳೆಯರಿಗೆ ಈ ರೀತಿಯ ಹೋರಾಟದ ಕಸುವು ಇರುವುದಿಲ್ಲ. ನೀವು ಅಂಥ ಮಹಿಳೆಯರ ಧ್ವನಿಯಾಗಿದೆ. ಭಾರತ ಕೌಟುಂಬಿಕ ಮೌಲ್ಯಗಳಿಗೆ ಹೆಸರಾಗಿದೆ. ಅದನ್ನು ಉಳಿಸಿಕೊಳ್ಳೋಣ.

ಇದನ್ನೂ ಓದಿ : Sindhuri Vs Roopa : ಇದು ಪಕ್ಕಾ ಫ್ಯಾಮಿಲಿ ಮ್ಯಾಟರ್;‌ ಸಿಂಧೂರಿ ಮೌನೀಶ್‌ ಮೌದ್ಗಿಲ್‌ ಹಿಂದೆ ಬಿದ್ದಿದ್ದೇ ರೂಪಾ ಸಿಟ್ಟಿನ ಮೂಲ

Exit mobile version