Site icon Vistara News

Medara Samavesha | ಮೇದಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ

Medara Samavesha

ಚಿತ್ರದುರ್ಗ: ಮೇದಾರ ಗುರುಗಳ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುವುದು. ಮೇದಾರ (Medara Samavesha) ಸಮುದಾಯದ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಿ, ಬಿದಿರು ವೃತ್ತಿಗೆ ಬೆಂಬಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಮೇದಾರ ಗುರು ಪೀಠದಲ್ಲಿ ಶನಿವಾರ ಆಯೋಜಿಸಿದ್ದ ಅಖಿಲ ಭಾರತ, ಅಖಿಲ ಕರ್ನಾಟಕ ಮೇದಾರ ಬುಡಕಟ್ಟು ಜನಾಂಗದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸಮುದಾಯದ ಮಠದ ಅಭಿವೃದ್ಧಿಗೂ ಅನುದಾನ ಪೂರೈಸಲಾಗುವುದು. ಮೇದಾರ ಸಮುದಾಯ ಹೆಚ್ಚಿರುವ ಜಿಲ್ಲೆಯಲ್ಲಿ ಸಮುದಾಯ ಭವನ ನಿರ್ಮಾಣ, ಜಿಎಸ್‌ಟಿ ಪಾವತಿಯಲ್ಲಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಿಗಮದಲ್ಲಿ ಹೊಸ ತಂತ್ರಜ್ಞಾನಗಳನ್ನು ತಂದು, ತರಬೇತಿ ನೀಡಬೇಕು. ಪ್ರತಿ ಜಿಲ್ಲೆಯಲ್ಲಿ ಬಿದಿರಿನ ಹೊಸ ಉತ್ಪನ್ನಗಳನ್ನು ತಯಾರಿಸುವ ಕೇಂದ್ರಗಳನ್ನು ಸ್ಥಾಪಿಸಿ, ಆ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಜೋಡಿಸಬೇಕು. ಆನ್‌ಲೈನ್‌ ಮಾರುಕಟ್ಟೆಯ ಮೂಲಕ ರಾಜ್ಯದ ಬಿದಿರಿನ ಉತ್ಪನ್ನಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಬೇಕು. ಇದಕ್ಕೆ ಬೇಕಾಗಿರುವ ಬಂಡವಾಳವನ್ನು ಸರ್ಕಾರದಿಂದ ಒದಗಿಸಲಾಗುವುದು ಎಂದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ : ತೀರ್ಪುಗಳು ಕನ್ನಡದಲ್ಲಿದ್ದರೆ ಜನರಿಗೆ ನ್ಯಾಯ: ನ್ಯಾ. ಅರಳಿ ನಾಗರಾಜ

ಬಿದಿರಿನ ಅಭಿವೃದ್ಧಿಗಾಗಿ ವಿಶೇಷ ಜಮೀನು ಮೀಸಲು
ಮೇದಾರ ಸಮುದಾಯದ ಬೇಡಿಕೆಗಳು, ಬಿದಿರಿನ ಕೆಲಸದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಅದೇ ರೀತಿ ಬಿದಿರಿನ ಪೀಠೋಪಕರಣ, ದಿನೋಪಯೋಗಿ ವಸ್ತುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಇದೆ. ಇದಕ್ಕೆ ಪೂರಕವಾಗಿ ಸಾಕಷ್ಟು ಬಿದಿರು ಸಿಗುವಂತಾಗಬೇಕು. ಇದಕ್ಕಾಗಿ ನಮ್ಮ ಸರ್ಕಾರ ಬಿದಿರಿನ ಅಭಿವೃದ್ಧಿಗಾಗಿ ವಿಶೇಷವಾದ ಜಮೀನು ಮೀಸಲಿಟ್ಟು, ಅರಣ್ಯ ಇಲಾಖೆಯಿಂದ ಬಿದಿರನ್ನು ಬೆಳೆಸಿ ಸರಬರಾಜು ಮಾಡುವ ಕೆಲಸವನ್ನು ಮಾಡುತ್ತದೆ. ಯೋಗ್ಯ ಮತ್ತು ಸುಲಭ ದರವನ್ನು ನಿಗದಿಪಡಿಸಿ ಬಿದಿರಿನ ಖರೀದಿಗೆ ವ್ಯವಸ್ಥೆಯನ್ನು ಕಲ್ಪಿಸಿ, ಪ್ರತಿ ಬಿದಿರು ಕಸುಬುದಾರರಿಗೆ ಕೋಟಾವನ್ನು ನಿಗದಿಪಡಿಸಲಾಗುವುದು ಎಂದರು.

ಬೀದರ್‌ನ ಕೇತೇಶ್ವರರ ಸಮಾಧಿಯ ಸುರಕ್ಷತೆಗೆ ಕ್ರಮ
ಬೀದರ್‌ನಲ್ಲಿರುವ ಕೇತೇಶ್ವರರ ಸಮಾಧಿಯ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಭೋವಿ ಜನಾಂಗದವರ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಕಲ್ಲು ಒಡೆಯುವ ಭೋವಿ ಸಮುದಾಯದ ಸಮಸ್ಯೆಗಳ ಬಗೆಹರಿಸಲು ಕಾನೂನುಗಳನ್ನು ಸರಳೀಕರಿಸುವ ವಿಚಾರವನ್ನು ಮುಂದಿನ ಅಧಿವೇಶನದಲ್ಲಿ ತರಲಾಗುವುದು. ಅಮೃತ ಯೋಜನೆಯಡಿ 354 ಕೋಟಿ ರೂ.ಗಳ ಅನುದಾನವನ್ನು ಕುರಿಗಾಹಿಗಳ ಸಂಘಗಳಿಗೆ ನೀಡಲಾಗುತ್ತಿದೆ. ಲಿಡ್ಕರ್‌ನ ಉತ್ಪನ್ನಗಳನ್ನು ಹೆಚ್ಚಿಸಲಾಗುತ್ತಿದೆ. ಲಂಬಾಣಿ ಬಂಜಾರರ ತಾಂಡಾಗಳನ್ನು ಗ್ರಾಮಗಳನ್ನಾಗಿ ಮಾಡಿ ಮನೆಗಳಿಗೆ ಹಕ್ಕುಪತ್ರಗಳನ್ನು ನೀಡಲು ಕ್ರಮ ವಹಿಸಲಾಗುತ್ತಿದೆ. ಕರ್ನಾಟಕದಲ್ಲಿ ಕಾಯಕ ಕ್ರಾಂತಿ ಆಗಬೇಕೆಂಬುದು ನನ್ನ ಆಸೆಯಾಗಿದೆ ಎಂದರು.

ಮೀಸಲಾತಿ ಹೆಚ್ಚಳ
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಸಂವಿಧಾನಬದ್ಧವಾಗಿ ಹೆಚ್ಚಿಸಲಾಗಿದೆ. ಇದನ್ನು ಕಾನೂನಿನ ಚೌಕಟ್ಟಿನೊಳಗೆ ತರಲಾಗುವುದು. ನಮ್ಮ ಸರ್ಕಾರ ಜನಪರವಾದ ಬದಲಾವಣೆಯನ್ನು ತರುತ್ತಿದೆ. ಇತಿಹಾಸದ ಭಾಗವಾಗಬೇಕು ಇಲ್ಲವೇ ಇತಿಹಾಸವನ್ನು ಸೃಷ್ಟಿಸಬೇಕು. ಕೇಂದ್ರದಲ್ಲಿ ಪ್ರಧಾನಿ ಮೋದಿಯವರೂ ದೊಡ್ಡ ಬದಲಾವಣೆಗಳನ್ನು ತರುತ್ತಿದ್ದಾರೆ. ಎಲ್ಲ ಸಮುದಾಯದ ಗುರುಗಳು ನನ್ನೊಂದಿಗಿದ್ದಾರೆ ಎಂಬ ವಿಶ್ವಾಸದೊಂದಿಗೆ ಮುನ್ನಡೆಯುತ್ತಿದ್ದೇನೆ ಎಂದರು.

ಸಬಲ ರಾಜ್ಯ ನಿರ್ಮಾಣ
ವಸ್ತುನಿಷ್ಠವಾಗಿ ಭೂಮಿಯಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ಚಿಂತನೆಯಾಗಬೇಕಿದೆ. ಈ ಬಗ್ಗೆ ಭಾಷಣಗಳಾಗಿವೆ. ಆದರೆ ಕಾರ್ಯಕ್ರಮಗಳೇನು ಎನ್ನುವುದು ಮುಖ್ಯ. ಅದಕ್ಕಾಗಿಯೇ ಕಾಯಕ ಯೋಜನೆಯನ್ನು ಘೋಷಿಸಲಾಗಿದೆ. ಗ್ರಾಮೀಣ ಕುಶಲಕರ್ಮಿಗಳಿಗೆ ವಿಶೇಷ 50 ಸಾವಿರ ರೂಪಾಯಿ ಅನುದಾನ ನೀಡಿ ಸ್ವಾವಲಂಬಿಯಾಗುವಂತೆ ಇದೇ ವರ್ಷದಲ್ಲಿ 33 ಸಾವಿರ ಗ್ರಾಮಗಳಲ್ಲಿ ಪ್ರಾರಂಭಿಸಲಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆ, ಯುವಕರಿಗೆ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ರೂಪಿಸಲಾಗಿದೆ. ಇವೆರೆಲ್ಲರೂ ಸ್ವಾವಲಂಬಿಗಳಾದಾಗ ಕನ್ನಡ ನಾಡು ಶ್ರೀಮಂತವಾಗುತ್ತದೆ. ನಾಡಿನ ಜನತೆ ಶ್ರೀಮಂತರಾಗಬೇಕು. ಆಗ ತನ್ನಿಂದತಾನೇ ರಾಜ್ಯ ಸಬಲವಾಗುತ್ತದೆ ಎಂದರು.

ಸೀಬಾರದ ಮೇದಾರ ಗುರುಪೀಠ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಮಹಾಸ್ವಾಮೀಜಿ, ಸಚಿವ ಬಿ.ಸಿ.ನಾಗೇಶ್, ಅಖಿಲ ಕರ್ನಾಟಕ ಶ್ರೀ ಗುರು ಮೇದಾರ ಕೇತೇಶ್ವರ ಟ್ರಸ್ಟ್ ಅಧ್ಯಕ್ಷ ಸಿ.ಪಿ ಪಾಟೀಲ್, ಅಖಿಲ ಕರ್ನಾಟಕ ಮೇದಾರ ಗಿರಿ ಜನಾಂಗದ ಕಲ್ಯಾಣ ಸೇವಾ ಸಂಘದ ಅಧ್ಯಕ್ಷ ವೈ.ಕೆ.ಹಳೇಪೇಟೆ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ | Moral education | ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ಹೇಗೆ?: ಸೋಮವಾರ ಮಹತ್ವದ ದುಂಡು ಮೇಜಿನ ಸಮಾಲೋಚನಾ ಸಭೆ

Exit mobile version