ದೇವನಹಳ್ಳಿ: ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಪಟ್ಟಣದ ತಾಲೂಕು ಸರ್ಕಾರಿ ತಾಯಿ -ಮಗು ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ (Medical Negligence) 10 ದಿನದ ಹಸುಗೂಸು ಮೃತಪಟ್ಟಿರುವ ಆರೋಪವೊಂದು ಕೇಳಿ ಬಂದಿದೆ. ಮಗು ಸಾವಿಗೇ ಸಿಬ್ಬಂದಿಯೇ ಕಾರಣವೆಂದು ಆರೋಪಿಸಿ ಆಸ್ಪತ್ರೆ ಎದುರು ಪೋಷಕರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿದರು.
ದೇವನಹಳ್ಳಿಯ ಪುಟ್ಟಪ್ಪನಗುಡಿ ಪುನೀತ್ ಹಾಗೂ ಲಕ್ಷ್ಮೀ ದಂಪತಿಯ ಮಗು ವೈದ್ಯರ ನಿರ್ಲಕ್ಷ್ಯ ಬಲಿಯಾಗಿದೆ. ಲಕ್ಷ್ಮೀ ಹತ್ತು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯರು ಇಲ್ಲದ ಕಾರಣಕ್ಕೆ ನರ್ಸ್‌ಗಳೇ ಹೆರಿಗೆ ಮಾಡಿಸಲು ಮುಂದಾದರು.
ಹೀಗಾಗಿ ಕುಟುಂಬಸ್ಥರು ಬೇರೆ ಕಡೆ ಹೆರಿಗೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು. ಆದರೂ ಬಿಡದೇ ಸರ್ಕಾರಿ ಆಸ್ಪತ್ರೆ ನರ್ಸ್‌ಗಳೇ ಹೆರಿಗೆ ಮಾಡಿಸಿದ್ದಾರೆ. ಆದರೆ ಹತ್ತು ದಿನಗಳ ನಂತರ ಉಸಿರಾಟದ ತೊಂದರೆಯಿಂದ ಮಗು ಮೃತಪಟ್ಟಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಮಗು ಸಾವಿಗೆ ಕಾರಣ ಎಂದು ಕಿಡಿಕಾರಿದ್ದಾರೆ.
ಆಸ್ಪತ್ರೆ ಮುಂದೆ ಮಗುವಿನ ಮೃತದೇಹವನ್ನು ಇಟ್ಟು, ಹೆರಿಗೆ ಮಾಡಿಸಿದ ಸಿಬ್ಬಂದಿಯನ್ನು ಅಮಾನತ್ತು ಮಾಡಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇತ್ತ ಮಗು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ