ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಕೆಲ ವೈದ್ಯರ ನಿರ್ಲಕ್ಷ್ಯದಿಂದ (Medical Negligence) ಅಮಾಯಕರು ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ಉಡುಪಿ ಮೂಲದ ಯುವಕನೊಬ್ಬ ಇಂಜೆಕ್ಷನ್ ರಿಯಾಕ್ಷನ್ ಆಗಿ ಮೃತಪಟ್ಟಿದ್ದ. ಈ ಘಟನೆ ಮಾಸುವ ಮುನ್ನವೇ ಬಾಲಕನೊಬ್ಬ ಬಲಿಯಾಗಿದ್ದಾನೆ.
ಪ್ರೀತಮ್ ನಾಯ್ಕ್ (11) ಮೃತ ದುರ್ದೈವಿ. ಸೆಂಟ್ ಕ್ಲೋರಿಸ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಪ್ರೀತಮ್‌ಗೆ ಕಳೆದ ನಾಲ್ಕು ದಿನದ ಹಿಂದೆ ಅನಾರೋಗ್ಯದ ಸಮಸ್ಯೆ ಆಗಿತ್ತು. ಹೀಗಾಗಿ ಕೋನಣನಕುಂಟೆಯಲ್ಲಿರುವ ರಾಜ ನಂದಿನಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ವೇಳೆ ಪ್ರೀತಮ್‌ನನ್ನು ಪರೀಕ್ಷಿಸಿದ ವೈದ್ಯರು ಇಂಜೆಕ್ಷನ್ ಕೊಟ್ಟಿದ್ದಾರೆ.
ವಾಪಸ್ ಮನೆಗೆ ಬಂದಿದ್ದ ಪ್ರೀತಮ್‌ಗೆ ಮರುದಿನವೇ ಇಂಜೆಕ್ಷನ್ ಕೊಟ್ಟ ಜಾಗ ಹಾಗೂ ಕಾಲು ಊತ ಬಂದಿದೆ. ವಿಪರೀತ ನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಆಸ್ಪತ್ರೆಗೆ ಕರೆದುಕೊಂಡಿದ್ದಾರೆ. ಬಳಿಕ ಪರೀಕ್ಷೆ ಮಾಡಿದಾಗ ಇಂಜೆಕ್ಷನ್‌ನಿಂದ ಕಾಲು ಇನ್ಫೆಕ್ಷನ್ ಆಗಿದೆ. ಹೀಗಾಗಿ ಕೂಡಲೇ ಆಪರೇಷನ್ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಪ್ರೀತಮ್‌ಗೆ ಆಪರೇಷನ್ ಮಾಡಿದ್ದು, ಆತ ಚಿಕಿತ್ಸೆಗೆ ಸ್ಪಂದಿಸದೇ ಪ್ರಾಣ ಬಿಟ್ಟಿದ್ದಾನೆ.
ಇಂಜೆಕ್ಷನ್ ಅಡ್ಡ ಪರಿಣಾಮದಿಂದಲೇ ನಮ್ಮ ಮಗ ಮೃತಪಟ್ಟಿದ್ದಾನೆ. ನನ್ನ ಮಗನ ಸಾವಿಗೆ ರಾಜನಂದಿನಿ ಆಸ್ಪತ್ರೆಯ ಡಾಕ್ಟರ್ ನಿರ್ಲಕ್ಷ್ಯವೇ ಕಾರಣವೆಂದು ಪ್ರೀತಮ್ ತಂದೆ ಪಿರ್ಯಾನಾಯಕ್, ತಾಯಿ ಕೃಷ್ಣ ಬಾಯಿ ಆರೋಪಿಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ: Medical Negligence : ಬೆಂಗಳೂರಲ್ಲಿ ವೈದ್ಯರ ಎಡವಟ್ಟು; ಯುವಕನ ಜೀವ ತೆಗೆದ ಇಂಜೆಕ್ಷನ್!
ವೈದ್ಯರ ನಿರ್ಲಕ್ಷ್ಯಕ್ಕೆ ಹಾರಿಹೋಯ್ತು ಹಸುಗೂಸಿನ ಪ್ರಾಣ!
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಪಟ್ಟಣದ ತಾಲೂಕು ಸರ್ಕಾರಿ ತಾಯಿ -ಮಗು ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ (Medical Negligence) 10 ದಿನದ ಹಸುಗೂಸು ಮೃತಪಟ್ಟಿರುವ ಆರೋಪವೊಂದು ಕೇಳಿ ಬಂದಿದೆ. ಮಗು ಸಾವಿಗೇ ಸಿಬ್ಬಂದಿಯೇ ಕಾರಣವೆಂದು ಆರೋಪಿಸಿ ಆಸ್ಪತ್ರೆ ಎದುರು ಪೋಷಕರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿದರು.
ದೇವನಹಳ್ಳಿಯ ಪುಟ್ಟಪ್ಪನಗುಡಿ ಪುನೀತ್ ಹಾಗೂ ಲಕ್ಷ್ಮೀ ದಂಪತಿಯ ಮಗು ವೈದ್ಯರ ನಿರ್ಲಕ್ಷ್ಯ ಬಲಿಯಾಗಿದೆ. ಲಕ್ಷ್ಮೀ ಹತ್ತು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯರು ಇಲ್ಲದ ಕಾರಣಕ್ಕೆ ನರ್ಸ್‌ಗಳೇ ಹೆರಿಗೆ ಮಾಡಿಸಲು ಮುಂದಾದರು.
ಹೀಗಾಗಿ ಕುಟುಂಬಸ್ಥರು ಬೇರೆ ಕಡೆ ಹೆರಿಗೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು. ಆದರೂ ಬಿಡದೇ ಸರ್ಕಾರಿ ಆಸ್ಪತ್ರೆ ನರ್ಸ್‌ಗಳೇ ಹೆರಿಗೆ ಮಾಡಿಸಿದ್ದಾರೆ. ಆದರೆ ಹತ್ತು ದಿನಗಳ ನಂತರ ಉಸಿರಾಟದ ತೊಂದರೆಯಿಂದ ಮಗು ಮೃತಪಟ್ಟಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಮಗು ಸಾವಿಗೆ ಕಾರಣ ಎಂದು ಕಿಡಿಕಾರಿದ್ದಾರೆ.
ಆಸ್ಪತ್ರೆ ಮುಂದೆ ಮಗುವಿನ ಮೃತದೇಹವನ್ನು ಇಟ್ಟು, ಹೆರಿಗೆ ಮಾಡಿಸಿದ ಸಿಬ್ಬಂದಿಯನ್ನು ಅಮಾನತ್ತು ಮಾಡಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇತ್ತ ಮಗು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ