ತುಮಕೂರು: ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿಸೆಂಬರ್ 2ರಂದು ಬಾಲಕನಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ (Medical Negligence) ಮೃತಪಟ್ಟ ಪ್ರಕರಣ ಸಂಬಂಧ ಆಡಳಿತ ವೈದ್ಯಾಧಿಕಾರಿ ಹಾಗೂ ಆಂಬ್ಯುಲೆನ್ಸ್ ಚಾಲಕನನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ನೀಡಿರುವ ಬೆನ್ನಲ್ಲೇ ತಾಲೂಕು ವೈದ್ಯಾಧಿಕಾರಿ (ಟಿಎಚ್‌ಒ) ಹಾಗೂ ಜಿಲ್ಲಾ ವೈದ್ಯಾಧಿಕಾರಿ (ಡಿಎಚ್ಒ)ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ನೋಟಿಸ್ ನೀಡಿದ್ದು, ೧೫ ದಿನಗಳ ಒಳಗೆ ಉತ್ತರ ನೀಡುವಂತೆ ಆದೇಶಿಸಿದ್ದಾರೆ.
ಮಧುಗಿರಿ ಟಿಎಚ್ಒ ಡಾ. ರಮೇಶ್ ಬಾಬು ಹಾಗೂ ತುಮಕೂರು ಡಿಎಚ್ಒ ಡಾ. ಮಂಜುನಾಥ್‌ಗೆ ನೋಟಿಸ್ ನೀಡಿದ್ದಾರೆ. ಕೊಡಿಗೇನಹಳ್ಳಿ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಆಂಬ್ಯುಲೆನ್ಸ್ ಚಾಲಕನ ಹಾಜರಾತಿ ಪರಿಶೀಲಿಸದ ಹಿನ್ನೆಲೆಯಲ್ಲಿ ಕಾರಣ ಕೇಳಲಾಗಿದೆ. ಜತೆಗೆ ಆಸ್ಪತ್ರೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಳಾಗಿ ಐದಾರು ತಿಂಗಳು ಕಳೆದರೂ ಸರಿಪಡಿಸದೇ ಕರ್ತವ್ಯ ಲೋಪ ಎಸಗಲಾಗಿದೆ ಎಂದು ಹೇಳಲಾಗಿದೆ. ಈ ಸಂಬಂಧ 15 ದಿನದೊಳಗೆ ಉತ್ತರ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಇನ್ನು ವೈದ್ಯರು ಆಸ್ಪತ್ರೆಯ ಕೇಂದ್ರ ಸ್ಥಾನದಲ್ಲಿ ಇರದೇ ಕರ್ತವ್ಯ ನಿರ್ಲಕ್ಷ್ಯ ಮಾಡಿದ್ದಾರೆ. ಇದರ ಬಗ್ಗೆ ಏಕೆ ಗಮನಹರಿಸಿಲ್ಲ ಎಂದು ಕಾರಣ ಕೇಳಿ ಡಿಎಚ್‌ಒ ಡಾ.ಮಂಜುನಾಥ್‌ಗೆ ನೋಟಿಸ್ ನೀಡಿದ್ದು, 24/7 ಆಸ್ಪತ್ರೆಯಲ್ಲಿ ಲಭ್ಯವಿರಬೇಕಿತ್ತು. ಇದು ಕರ್ತವ್ಯಲೋಪ ಆಗಿದೆ. ಜಿಲ್ಲಾ ಆರೋಗ್ಯಾಧಿಕಾರಿಯಾದವರು ನಿಯಮಿತವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ವೈದ್ಯರ ಹಾಗೂ ಸಿಬ್ಬಂದಿಯ ಹಾಜರಾತಿಯನ್ನು ಪರಿಶೀಲನೆ ಮಾಡಬೇಕು. ಇಲ್ಲಿ ಹಾಗಾಗಿಲ್ಲ ಎಂದು ಆರೋಪ ಮಾಡಲಾಗಿದೆ. ಕರ್ತವ್ಯ ಲೋಪ ಸಂಬಂಧ ಮೂರು ದಿನಗಳ ಒಳಗೆ ಉತ್ತರ ನೀಡಿ ಎಂದು ಸೂಚನೆ ನೀಡಲಾಗಿದೆ.
ಇದನ್ನೂ ಓದಿ | Sexual Assault | ಶಾಲೆಗೆ ಹೋಗಿದ್ದ ಬಾಲಕಿ ಅಪಹರಣ; ಗುಜರಾತಿಗೆ ಹೊತ್ತೊಯ್ದ ಯುವಕನಿಂದ ಅತ್ಯಾಚಾರ
ಏನಿದು ಪ್ರಕರಣ?
ಐದು ವರ್ಷದ ಬಾಲಕ ನೀರಿನ ಸಂಪ್‌ನಲ್ಲಿ ಆಕಸ್ಮಿಕವಾಗಿ ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದ. ಮಗನನ್ನು ಉಳಿಸಿಕೊಳ್ಳುವ ಸಲುವಾಗಿ ಕೊಡಿಗೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೋಷಕರು ಬಂದಿದ್ದಾರೆ. ಈ ಪ್ರಾಥಮಿಕ ಆರೋಗ್ಯ ಕೇಂದ್ರವು 24/7 ಸೇವೆ ನೀಡಬೇಕಿದ್ದರೂ ಬಾಲಕನನ್ನು ಕರೆದುಕೊಂಡು ಬಂದಾಗ ವೈದ್ಯರು ಇರಲಿಲ್ಲ. ಕನಿಷ್ಠ ಇಬ್ಬರು ವೈದ್ಯರಾದರೂ ಇರಬೇಕಿತ್ತು. ಒಬ್ಬ ವೈದ್ಯರೂ ಇರದೇ ಇದ್ದರಿಂದ ಬಾಲಕನಿಗೆ ಚಿಕಿತ್ಸೆ ದೊರಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಲಕ ಆಸ್ಪತ್ರೆಯಲ್ಲೇ ಅಸುನೀಗಿದ್ದ. ಇದು ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೇ ವೇಳೆ ಪಂಚರತ್ನ ಯಾತ್ರೆ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಎದುರು ಶವವನ್ನು ತಂದಿದ್ದ ಪೋಷಕರು ಹಾಗೂ ಸಾರ್ವಜನಿಕರು ಆಸ್ಪತ್ರೆ ವೈದ್ಯರ ವಿರುದ್ಧ ತೀವ್ರ ಅಸಮಾಧಾನವನ್ನು ಹೊರಹಾಕಿದ್ದರು. ಈಗ ಪ್ರಕರಣದ ಬಗ್ಗೆ ಇಲಾಖೆ ತನಿಖೆ ನಡೆಸಿದ್ದು, ಕರ್ತವ್ಯ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಆಡಳಿತ ವೈದ್ಯಾಧಿಕಾರಿ ಹಾಗೂ ಆಂಬ್ಯುಲೆನ್ಸ್ ಚಾಲಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ | Tiger Attack | ಗುಂಡ್ಲುಪೇಟೆ ಸುತ್ತಮುತ್ತ ಹುಲಿ ಹಾವಳಿ; ಜಾನುವಾರುಗಳು ಬಲಿ, ಜನರಲ್ಲಿ ಹೆಚ್ಚಿದ ಆತಂಕ