ಬಾಗಲಕೋಟೆ: ಇಲ್ಲಿನ ಕೆರೂಡಿ ಖಾಸಗಿ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ (Medical Negligence) ಕಾರಣ ಎಂದು ಆರೋಪಿಸಿ ಆಕೆಯ ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿ ಜತೆ ತಳ್ಳಾಟ-ನೂಕಾಟ ನಡೆಸಿದ್ದಾರೆ.
ಅಚನೂರು ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ನಿವಾಸಿ ಶಾಂತಮ್ಮ (೬೦) ಮೃತ ವೃದ್ಧೆಯಾಗಿದ್ದಾರೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದ ಶಾಂತಮ್ಮ ಬದುಕುತ್ತಿದ್ದರು. ಆದರೆ, ಅವರ ನಿರ್ಲಕ್ಷ್ಯದಿಂದ ಅವರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆ ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ತಳ್ಳಾಟ ನೂಕಾಟ ಸಹ ನಡೆದಿದೆ.
ಸಂಜೆ ೫.೩೦ಕ್ಕೆ ಶಾಂತಮ್ಮ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಅವರಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಮುಖ್ಯ ವೈದ್ಯರು ನೋಡದೆ ಕೇವಲ ನರ್ಸ್‌ಗಳು ಮಾತ್ರ ಪರೀಕ್ಷೆ ಮಾಡುತ್ತಿದ್ದರು. ಇದೇ ಅವರ ಸಾವಿಗೆ ಕಾರಣವಾಗಿದೆ. ವೈದ್ಯರು ಸೂಕ್ತವಾಗಿ ಸ್ಪಂದಿಸಿದ್ದರೆ, ಹೀಗಾಗುತ್ತಿರಲಿಲ್ಲ ಎಂಬುದು ಕುಟುಂಬಸ್ಥರ ಆರೋಪವಾಗಿದೆ.
ಆಸ್ಪತ್ರೆಯಲ್ಲಿ ಗಲಾಟೆ ಜೋರಾಗಿರುವುದು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಬಾಗಲಕೋಟೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಸ್ಪತ್ರೆ ಹೊರಗೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಇದನ್ನೂ ಓದಿ | Tiger Attack | ಮೈಸೂರಿನಲ್ಲಿ ರೈತನ ಮೇಲೆ ಹುಲಿ ದಾಳಿ, ತೀವ್ರ ಗಾಯ; ಹೆಚ್ಚಿದ ಆತಂಕ