ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಕೆಲ ವೈದ್ಯರ ನಿರ್ಲಕ್ಷ್ಯದಿಂದ (Medical Negligence) ಅಮಾಯಕರು ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಸದ್ಯ ಉಡುಪಿ ಮೂಲದ ಯುವಕನೊಬ್ಬ ಬೆಂಗಳೂರಿನಲ್ಲಿ ವೈದ್ಯನ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾನೆ. ಅಮರ್ ಶೆಟ್ಟಿ (31) ಮೃತ ದುರ್ದೈವಿ.
ಅಮರ್ ಶೆಟ್ಟಿ ಕಳೆದ 13ರಂದು ಜ್ವರವೆಂದು ಮಾಗಡಿ ರಸ್ತೆಯಲ್ಲಿರುವ ಭಾಗ್ಯ ಕ್ಲಿನಿಕ್‌ಗೆ ಹೋಗಿದ್ದರು. ಈ ವೇಳೆ ಕ್ಲಿನಿಕ್‌ನಲ್ಲಿ ವೈದ್ಯನೊಬ್ಬ ಜ್ವರಕ್ಕಾಗಿ ಅಮರ್‌ಗೆ ಇಂಜಕ್ಷನ್ ಕೊಟ್ಟಿದ್ದರು. ವಾಪಸ್ ಮನೆಗೆ ಬಂದಿದ್ದ ಅಮರ್‌ಗೆ ಇಂಜಕ್ಷನ್‌ನಿಂದ ರಿಯಾಕ್ಷನ್ ಆಗಿ ಬೆಳಗಾಗುವುದರಲ್ಲಿ ಊತ ಕಂಡಿದೆ. ಜತೆಗೆ ಕಾಲು, ಸೊಂಟದ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ.
ಇದನ್ನೂ ಓದಿ: Bengaluru News : ಬೇಕರಿಗೆ ನುಗ್ಗಿ ದಾಂಧಲೆ; ಬೆಂಗಳೂರಲ್ಲಿ ಹೆಚ್ಚಿದ ಮಾಸ್ಕ್‌ಧಾರಿ ಪುಂಡರು!
ಹೀಗಾಗಿ ಅಮರ್ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದರೂ, ಆಗಲೂ ಸೊಂಟದ ಭಾಗದಲ್ಲಿ ಊತವು ಕಡಿಮೆಯೂ ಆಗದೆ, ನೋವು ಇನ್ನಷ್ಟು ಹೆಚ್ಚಾಗಿತ್ತು. ಹೀಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅಮರ್ ನಿನ್ನೆ ಶುಕ್ರವಾರ ಮೃತಪಟ್ಟಿದ್ದಾರೆ. ಇಂಜೆಕ್ಷನ್ ಅಡ್ಡ ಪರಿಣಾಮದಿಂದಲೇ ಮಲ್ಟಿ ಆರ್ಗನ್ ಡ್ಯಾಮೇಜ್ ಆಗಿ ಮೃತಪಟ್ಟಿದ್ದಾಗಿ ಆರೋಪಿಸಿ ಕುಟುಂಬಸ್ಥರು ಠಾಣೆ ಮೆಟ್ಟಿಲೇರಿದ್ದಾರೆ.
ಮದುವೆ ತಯಾರಿಯಲ್ಲಿದ್ದ ಅಮರ್
ದುಬೈನಲ್ಲಿದ್ದ ಅಮರ್ ಕಳೆದ 1 ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಲ್ಲಿ ಹೋಟೆಲ್ ಬಿಸಿನೆಸ್ ನಡೆಸುತ್ತಿದ್ದರು. ಈ ವರ್ಷ ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇನ್ನೆರಡು ದಿನಗಳಲ್ಲಿ ಮದುವೆ ಮಾತುಕತೆ ಕೂಡ ಇತ್ತು. ಅಷ್ಟರಲ್ಲೇ ಹೀಗೆ ಆಗಿದೆ ಎಂದು ಅಮರ್ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಸದ್ಯ ಭಾಗ್ಯ ಕ್ಲಿನಿಕ್ ವೈದ್ಯನ ವಿರುದ್ಧ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಚೆನ್ನಾಗಿದ್ದ ಹುಡುಗನನ್ನು ಡಾಕ್ಟರ್ ಸಾಯಿಸಿಬಿಟ್ರು!
ಚೆನ್ನಾಗಿದ್ದ ಹುಡುಗನನ್ನ ಡಾಕ್ಟರ್ ಸಾಯಿಸಿಬಿಟ್ರು ಎಂದು ಅಮರ್ ಸಹೋದರ ರಾಘವೇಂದ್ರ ಶೆಟ್ಟಿ ಆಕ್ರೋಶ ಹೊರಹಾಕಿದರು. ಕೆ.ಪಿ.ಅಗ್ರಹಾರದಲ್ಲಿ ಮಾವನ ಜತೆಗೆ ಇದ್ದ. ಜ್ವರ ಎಂದು ಭಾಗ್ಯ ಕ್ಲಿನಿಕ್‌ಗೆ ಹೋಗಿದ್ದ. ಇಂಜೆಕ್ಷನ್ ಕೊಟ್ಟ ಬಳಿಕ ಆ ಜಾಗವು ಊದಿಕೊಂಡಿತ್ತು. ಇಂಜೆಕ್ಷನ್ ಕೊಟ್ಟ ಬಳಿಕ ಆರ್ಗಾನ್ ಡ್ಯಾಮೇಜ್ ಆಗಿದೆ. ಅಮರ್ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದೆ. ಪೊಲೀಸರು ತನಿಖೆ ನಡೆಸುತ್ತೇವೆ ಎಂದಿದ್ದು, ಅಮರ್ ಸಾವಿಗೆ ನ್ಯಾಯ ಕೊಡಿಸಬೇಕು ಎಂದರು.
ಇಂಜೆಕ್ಷನ್ ರಿಯಾಕ್ಷನ್! ನಂಬಲು ಅಸಾಧ್ಯ
ಘಟನೆ ಸಂಬಂಧ ಭಾಗ್ಯ ಕ್ಲಿನಿಕ್ ವೈದ್ಯ ರಂಜಿತ್ ಪ್ರತಿಕ್ರಿಯಿಸಿದ್ದು, ಅಮರ್ ಶೆಟ್ಟಿ ಕಳೆದ ಭಾನುವಾರ ಚಿಕಿತ್ಸೆಗಾಗಿ ಕ್ಲಿನಿಕ್‌ಗೆ ಬಂದಿದ್ದರು. ಕ್ಲಿನಿಕ್‌ಗೆ ಬರುವಾಗ ಸ್ಟೇಬಲ್ ಆಗಿದ್ದರು. ವಿಚಾರಿಸಿದಾಗ ಜ್ವರ, ಕೆಮ್ಮು ಇರುವುದಾಗಿ ಹೇಳಿದ್ದರು. ಪರೀಕ್ಷಿಸಿ ಬಳಿಕ ಇಂಜೆಕ್ಷನ್ ಕೊಟ್ಟು, ಎರಡು ದಿನ ಬಿಟ್ಟು ಬರುವಂತೆ ಸೂಚಿಸಿದ್ದೆ. ಏನಾದರೂ ಅಡ್ಡ ಪರಿಣಾಮ ಆಗಿದ್ದರೆ ಮತ್ತೆ ಬರಬೇಕಿತ್ತು. ಹುಡುಗ ಆಗಲಿ, ಅವರ ಮನೆಯವರು ಆಗಲಿ ಯಾರು ಬಂದಿಲ್ಲ. ನಿನ್ನೆ ಆತ ಮೃತಪಟ್ಟಿದ್ದಾಗಿ ಮಾಹಿತಿ ಬಂತು. ನಾನು ನೀಡಿದ ಇಂಜೆಕ್ಷನ್‌ನಿಂದ ರಿಯಾಕ್ಷನ್ ಆಗಿದೆ ಎಂದು ಹೇಳಿದ್ದಾರೆ. ಆದರೆ ಅದು ನಂಬಲು ಆಗಲ್ಲ. ನಮ್ಮ ಕ್ಲಿನಿಕ್ ಸುಮಾರು ನಲವತ್ತು ವರ್ಷಗಳಿಂದ ಇದೆ. ಇಂತಹ ಘಟನೆ ಯಾವತ್ತು ಸಂಭವಿಸಿಲ್ಲ, ಇದೆ ಮೊದಲು ಎಂದು ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ