ತುಮಕೂರು: ವೈದ್ಯರ ನಿರ್ಲಕ್ಷ್ಯದಿಂದ (Medical Negligence) ಗೃಹಿಣಿಯೊಬ್ಬರು ಮೃತಪಟ್ಟಿದ್ದಾರೆ. ಮಾನಸ (30) ಮೃತ ದುರ್ದೈವಿ. ತುಮಕೂರಿನ ಬಟವಾಡಿ ಬಳಿಯಿರುವ ಚಿನ್ಮಯ ನರ್ಸಿಂಗ್ ಹೋಮ್‌ನಲ್ಲಿ (Tumkur News) ಈ ಘಟನೆ ನಡೆದಿದೆ.
ತುಮಕೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಮಾನಸ ಅವರು ಅರುಣ್ ಎಂಬುವವರನ್ನು ಮದುವೆ ಆಗಿದ್ದರು. ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಮಾನಸ ಹಾಗೂ ಅರುಣ್ ದಂಪತಿಗೆ ಮಕ್ಕಳು ಆಗಿರಲಿಲ್ಲ. ಮಕ್ಕಳಾಗಿಲ್ಲವೆಂದು ಒಂದೂವರೆ ತಿಂಗಳಿನಿಂದ ಚಿನ್ಮಯ ಆಸ್ಪತ್ರೆ ವೈದ್ಯರ ಬಳಿ ಮಾನಸ ಚಿಕಿತ್ಸೆ ಪಡೆಯುತ್ತಿದ್ದರು.
ಈ ನಡುವೆ ವೈದ್ಯರು ಗರ್ಭಕೋಶದಲ್ಲಿ 3 ಗ್ರಾಂ ಗಡ್ಡೆಯಿದೆ. ಆಪರೇಷನ್ ಮಾಡಬೇಕು ಎಂದು ದಾಖಲು ಮಾಡಿಕೊಂಡಿದ್ದರು. ತುಮಕೂರಿನ ಮಹಾಲಕ್ಷ್ಮಿನಗರದಲ್ಲಿರುವ ಚಿನ್ಮಯ ನರ್ಸಿಂಗ್ ಹೋಮ್‌ಗೆ ಮಾಸನ ದಾಖಲಾಗಿದ್ದರು. ಶನಿವಾರ ರಾತ್ರಿ ಆಪರೇಷನ್ ನಡೆಸುವಾಗ ಮಾನಸ ಮೃತಪಟ್ಟಿದ್ದಾರೆ.
ಮಾನಸ ಸಾವಿಗೆ ವೈದ್ಯರೇ ಕಾರಣ ಎಂದು ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನ ವೈದ್ಯೆ ಡಾ.ಶಶಿಕಲಾ ಆಪರೇಷನ್ ನಡೆಸಿದ್ದರು ಎನ್ನಲಾಗಿದೆ. ಈ ಸಂಬಂಧ ಹೊಸ ಬಡಾವಣೆ ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Elephant attack : ಕಾಡಾನೆ ದಾಳಿಗೆ ಮತ್ತೊಬ್ಬ ವೃದ್ಧ ಬಲಿ!
ಒಂದು ದಿನದ ನವಜಾತ ಶಿಶುವನ್ನು ಎಸೆದು ಹೋದ ತಾಯಿ
ಮಕ್ಕಳಾಗಲಿ ಎಂದು ಕೋಟ್ಯಂತರ ಹೆಣ್ಣುಮಕ್ಕಳು ದೇವರಲ್ಲಿ ನಿತ್ಯ ಪ್ರಾರ್ಥನೆ ಮಾಡುತ್ತಾರೆ. ಅದರಲ್ಲೂ, ವಂಶೋದ್ಧಾರಕ ಜನಿಸಲಿ ಎಂದು ಭಗವಂತನಲ್ಲಿ ಹರಕೆ ಹೊತ್ತುಕೊಳ್ಳುತ್ತಾರೆ. ಪ್ರತಿದಿನ ಆಸ್ಪತ್ರೆಗಳಿಗೆ ಅಲೆದಾಡುತ್ತಾರೆ. ಆದರೆ, ಬೆಳಗಾವಿಯಲ್ಲಿ ಕಟುಕ ಮಹಿಳೆಯೊಬ್ಬರು ಹೆತ್ತ ಮಗನನ್ನೇ ಕಾಂಪೌಂಡ್‌ನಲ್ಲಿ ಎಸೆದು ಹೋಗಿದ್ದಾರೆ. ಅಮ್ಮಾ ಎಂದು ಕೂಗಲು ಆಗದೆ, ಕರುಳಿನ ಕೂಗು ಅಮ್ಮನಿಗೆ ಕೇಳಿಸದೆ ಒಂದು ದಿನದ ನವಜಾತ ಶಿಶು ಮೃತಪಟ್ಟಿದೆ.
ಬೆಳಗಾವಿ ನಗರದ ರಾಮತೀರ್ಥ ನಗರದ ಕಟ್ಟಡವೊಂದರ ಕಾಂಪೌಂಡ್‌ನಲ್ಲಿ ನವಜಾತ ಶಿಶುವನ್ನು ತಾಯಿ ಎಸೆದುಹೋಗಿದ್ದಾರೆ. ರಾತ್ರಿಯಿಡೀ ನರಳಿದ ಮಗು ಪ್ರಾಣ ಬಿಟ್ಟಿದೆ ಎಂದು ತಿಳಿದುಬಂದಿದೆ. ಇದು ಯಾರ ಮಗು, ಎಸೆದ ಮಹಿಳೆ ಯಾರು ಎಂಬುದು ಇದುವರೆಗೆ ಗೊತ್ತಾಗಿಲ್ಲ. ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಮಗುವನ್ನು ಮರಣೊತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನು ಹೆತ್ತ ಮಗುವನ್ನೇ ಎಸೆದುಹೋದ ತಾಯಿಯ ಕಟುಕ ಮನಸ್ಸನ್ನು ಜನ ಖಂಡಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ