Site icon Vistara News

Medical Negligence : ಮೂರ್ಮೂರು ಬಾರಿ ಅನಸ್ತೇಷಿಯಾ ಕೊಟ್ಟ ವೈದ್ಯರು; ಕೋಮಾಗೆ ಜಾರಿದವ ಮೃತ್ಯು

vignesh Medical Negligence

ಬೆಂಗಳೂರು: ಖಾಸಗಿ ಆಸ್ಪತ್ರೆಯ ವೈದ್ಯರ ಯಡವಟ್ಟಿಗೆ ಯುವಕನೊಬ್ಬ (Medical Negligence) ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ. ನಿರಂತರ 6 ವರ್ಷ ಕೋಮಾದಲ್ಲಿದ್ದು ನರಕ ಯಾತನೆ ಅನುಭವಿಸಿ ಈಗ ಪ್ರಾಣ ಬಿಟ್ಟಿದ್ದಾನೆ. ವಿಘ್ನೇಶ್ (20) ಮೃತ ದುರ್ದೈವಿ.

ವಿಘ್ನೇಶ್‌ ಹರ್ನಿಯಾ ಚಿಕಿತ್ಸೆಗೆಂದು ಸುಬ್ರಹ್ಮಣ್ಯನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ತೆರಳಿದ್ದ. 2017ರ ಏಪ್ರಿಲ್ 4ರಂದು ವಿಘ್ನೇಶ್‌ ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ವೈದ್ಯರು ಶಸ್ತ್ರಚಿಕಿತ್ಸೆ ಸಮಯದಲ್ಲಿ ಮೂರು ಬಾರಿ ಅನಸ್ತೇಷಿಯ ನೀಡಿದ್ದಾರೆ. ಅನಸ್ತೇಷಿಯ ನೀಡಿದಾಗಿನಿಂದ ವಿಘ್ನೇಶ್‌ ಪ್ರಜ್ಞೆಯನ್ನೇ ಕಳೆದುಕೊಂಡಿದ್ದ. ಅದೇ ಕ್ಷಣದಿಂದ ಕೋಮಾಗೆ ಜಾರಿದ್ದ.

ಕುಟುಂಬಸ್ಥರು ಘಟನೆ ಸಂಬಂಧ ಬನಶಂಕರಿ ಪೊಲೀಸರಿಗೆ ದೂರನ್ನು ನೀಡಿದ್ದರು. ಈ ವೇಳೆ ಚಿಕಿತ್ಸೆ ವೆಚ್ಚ ಭರಿಸುವುದಾಗಿ ವೈದ್ಯರು ಹೇಳಿದ್ದರು. ಕುಟುಂಬಸ್ಥರು ಚಿಕಿತ್ಸೆಗೆಂದು‌ 19 ಲಕ್ಷ ರೂ. ಖರ್ಚು ಮಾಡಿದ್ದರು. ಆದರೆ ಆಸ್ಪತ್ರೆ ಆಡಳಿತ ಮಂಡಳಿ ಐದು ಲಕ್ಷ ರೂ. ನೀಡಿ ಕೈತೊಳೆದುಕೊಂಡಿದೆ. ಉಳಿದ ಚಿಕಿತ್ಸಾ ವೆಚ್ಚ ಕೂಡ ನೀಡದೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

6 ವರ್ಷಗಳ ಕೋಮಾದಲ್ಲಿದ್ದ ವಿಘ್ನೇಶ್‌ 2024 ಜನವರಿ 3ರಂದು ಮೃತಪಟ್ಟಿದ್ದಾನೆ. ಆಸ್ಪತ್ರೆ ವೈದ್ಯರ ಯಡವಟ್ಟು ಸಂಬಂಧ ಪೋಷಕರು ಮತ್ತೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಬನಶಂಕರಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Udupi News : ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದು ಬಾವಿಗೆ ಬಿದ್ದ ಭಕ್ತ!

ಆರೋಗ್ಯ ವಿಮೆ ಯಾವಾಗ ಖರೀದಿಸಬೇಕು?

ಪ್ರತಿಯೊಬ್ಬರೂ ಸೂಕ್ತ ಜೀವ ವಿಮೆ ಪಾಲಿಸಿಯನ್ನು ಹೊಂದಿರಬೇಕು. ಇದು ಕುಟುಂಬದ ಆಧಾರ ಸ್ತಂಭದಂತೆ ಇರುವ ಸದಸ್ಯರ ಅಗಲಿಕೆಯ ಸಂದರ್ಭ, ಸಂಸಾರದ ಆರ್ಥಿಕ ಭದ್ರತೆಯನ್ನು ನೋಡಿಕೊಳ್ಳುತ್ತದೆ. ಆದರೆ ಅಷ್ಟೇ ಮಹತ್ವದ ಮತ್ತೊಂದು ವಿಮೆಯೂ ಅಗತ್ಯ. ಅದು ಯಾವುದು ಎಂದರೆ ಆರೋಗ್ಯ ವಿಮೆ. (Medical Insurance) ಕುಟುಂಬದ ಸದಸ್ಯರು ಅನಾರೋಗ್ಯಕ್ಕೀಡಾದಾಗ ಆಸ್ಪತ್ರೆಯ ಖರ್ಚು ವೆಚ್ಚಗಳು ದೊಡ್ಡ ಬಿಲ್‌ ಆಗಬಹುದು. ಅಂಥ ಸಂದರ್ಭ ಆರೋಗ್ಯ ವಿಮೆ ಇದ್ದರೆ ನಿಶ್ಚಿಂತೆಯಿಂದ ಇರಬಹುದು.

ಆರೋಗ್ಯದ ಸಮಸ್ಯೆಗಳು ಯಾವುದೇ ಪೂರ್ವ ಸೂಚನೆಯೂ ಇಲ್ಲದೆ ಬರುತ್ತವೆ. ಒಂದು ವೇಳೆ ಗಂಭೀರ ಖಾಯಿಲೆಗಳು ಬಂದರೆ, ಇಡೀ ಜೀವಮಾನದ ಉಳಿತಾಯ ಖರ್ಚಾಗಬಹುದು. ಅಥವಾ ಹಣದ ಕೊರತೆ ತೀವ್ರವಾಗಿ ಕಾಡಬಹುದು. ಹೀಗಾಗಿ ಪರ್ಸನಲ್‌ ಫೈನಾನ್ಸ್‌ ವಿಚಾರಗಳಲ್ಲಿ ಆರೋಗ್ಯ ವಿಮೆ ಅತ್ಯಂತ ಮಹತ್ವದ್ದು.

ನೀವು ನಿಮ್ಮ ಕುಟುಂಬದ ಸದಸ್ಯರ ಆರೋಗ್ಯವನ್ನು ಸಂರಕ್ಷಿಸಲು ಮತ್ತು ನಿಮ್ಮ ಉಳಿತಾಯದ ಹಣವನ್ನು ರಕ್ಷಿಸಲು, ಉತ್ತಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಇಡೀ ಕುಟುಂಬಕ್ಕೆ ಆರೋಗ್ಯ ವಿಮೆಯ ಕವರೇಜ್‌ ಅಗತ್ಯ. ಕುಟುಂಬದ ಪ್ರತಿ ಸದಸ್ಯರಿಗೂ ಸಮಗ್ರ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಮುಖ್ಯ. ವೈದ್ಯಕೀಯ ಸೌಲಭ್ಯಗಳು ಹೆಚ್ಚಾದಂತೆ ಹೆಲ್ತ್‌ ಕೇರ್‌ ಕುರಿತ ವೆಚ್ಚಗಳೂ ಹೆಚ್ಚುತ್ತವೆ. ಅಂಥ ಸಂದರ್ಭದಲ್ಲಿ ಹೆಲ್ತ್‌ ಇನ್ಷೂರೆನ್ಸ್‌ ಕೈ ಹಿಡಿಯುತ್ತದೆ. ಆರೋಗ್ಯ ವಿಮೆ ಹೊಂದಿರುವವರು ನಿಯಮಿತವಾಗಿ ವೈದ್ಯಕೀಯ ಸೇವೆಯನ್ನು ಪಡೆಯಬಹುದು. ಇವತ್ತಿನ ದಿನಗಳಲ್ಲಿ ಹೆಚ್ಚೆಚ್ಚು ಜನ ಆರೋಗ್ಯ ವಿಮೆಗಳನ್ನು ಪಡೆಯುತ್ತಿದ್ದಾರೆ. ಹೀಗಿದ್ದರೂ ನಮ್ಮ ಜನಸಂಖ್ಯೆಯನ್ನು ಹೋಲಿಸಿದರೆ, ಆರೋಗ್ಯ ವಿಮೆಯನ್ನು ಪಡೆಯದವರು ಹೆಚ್ಚು. ಮುಖ್ಯವಾಗಿ ಬಡವರು ಇದರಿಂದ ವಂಚಿತರಾಗಿದ್ದಾರೆ. ಸರ್ಕಾರದ ಮಟ್ಟದಲ್ಲಿ ಇರುವ ಆರೋಗ್ಯ ವಿಮೆ ಯೋಜನೆಗಳ ಬಗ್ಗೆ ಜನ ಜಾಗೃತಿಯೂ ಕಡಿಮೆ. ಆದ್ದರಿಂದ ಮೆಡಿಕಲ್‌ ಇನ್ಷೂರೆನ್ಸ್‌ಗಳ ಬಗ್ಗೆ ಹಾಗೂ ಅಫರ್ಡಬಲ್‌ ಹೆಲ್ತ್‌ ಇನ್ಷೂರೆನ್ಸ್‌ಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ.

ಆರೋಗ್ಯ ವಿಮೆಯನ್ನು ಖರೀದಿಸಲು ಬಯಸುವವರು ಮೊದಲ ಹೆಜ್ಜೆಯಾಗಿ ತಮ್ಮ ಅಗತ್ಯಗಳನ್ನು ಅರಿತುಕೊಳ್ಳಬೇಕು. ಆರೋಗ್ಯ ವಿಮೆ ಬಗ್ಗೆ ಒಂದು ಸೂಕ್ತವಾದ ಪ್ಲಾನ್‌ ಮಾಡಿಕೊಳ್ಳಬೇಕು. ವ್ಯಕ್ತಿಗತವಾಗಿ ನಿಮಗೊಬ್ಬರಿಗೆ ಅಗತ್ಯವಿದೆಯೇ, ಇಡೀ ಕುಟುಂಬಕ್ಕೆ ಅಗತ್ಯ ಇದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಹಾಗೂ ಎರಡೂ ಪರಿಸ್ಥಿತಿಗಳಲ್ಲಿ ಅದಕ್ಕೆ ತಗಲುವ ವೆಚ್ಚ, ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಬೇಕು.

ಈ ಎಲ್ಲ ಮಾಹಿತಿಗಳನ್ನು ಪಡೆಯಲು ಒಂದು ಸರಳ ವಿಧಾನ ಇದೆ. ನಿಮ್ಮ ಆಯ್ಕೆಯ ವಿಮೆ ಸಂಸ್ಥೆಯ ವೆಬ್‌ ಸೈಟ್‌ನಲ್ಲಿ ಈ ಕುರಿತ ವಿವರಗಳನ್ನು ಸರ್ಚ್‌ ಮಾಡಬಹುದು. ಎಲ್ಲ ಪ್ರಮುಖ ವಿಮೆ ಕಂಪನಿಗಳೂ ಆನ್‌ಲೈನ್‌ನಲ್ಲಿ ಅಸ್ತಿತ್ವದಲ್ಲಿದ್ದು, ಮಾಹಿತಿ ಪಡೆಯುವುದು ಈಗ ಸುಲಭ. ನೀವು ವೇತನದಾರರಾಗಿದ್ದರೆ ನಿಮ್ಮ ಕಂಪನಿಯೇ ಹೆಲ್ತ್‌ ಇನ್ಷೂರೆನ್ಸ್‌ ಪ್ರೊಟೆಕ್ಷನ್‌ ನೀಡಬಹುದು. ಅದು ಸಾಕಾಗದಿದ್ದರೆ ಪ್ರತ್ಯೇಕವಾಗಿ ಹೆಲ್ತ್‌ ಇನ್ಷೂರೆನ್ಸ್‌ ಖರೀದಿಸುವುದು ಸೂಕ್ತ.

ವೈದ್ಯಕೀಯ ವೆಚ್ಚಗಳು ಪ್ರತಿ ವರ್ಷ ಹೆಚ್ಚುತ್ತಿರುವುದರಿಂದ ಆದಷ್ಟು ಬೇಗ ಆರೋಗ್ಯ ವಿಮೆ ಖರೀದಿಸುವುದು ಸೂಕ್ತ. ಎಳೆಯ ವಯಸ್ಸಿನಲ್ಲಿ ಆರೋಗ್ಯ ವಿಮೆ ಮಾಡಿದರೆ ಪ್ರಯೋಜನವೂ ಹೆಚ್ಚು. ಏಕೆಂದರೆ ಒಟ್ಟಾರೆಯಾಗಿ ವಿಮೆಯ ಖರ್ಚು ವೆಚ್ಚ ಕಡಿಮೆಯಾಗುತ್ತದೆ. ಹೆಲ್ತ್‌ ಇನ್ಷೂರೆನ್ಸ್‌ ಪ್ರೀಮಿಯಂ ವೆಚ್ಚಗಳು ವ್ಯಕ್ತಿಯ ವಯಸ್ಸನ್ನು ಆಧರಿಸಿವೆ. ವಯಸ್ಸು ಹೆಚ್ಚಾದಷ್ಟೂ ಪ್ರೀಮಿಯಂ ದುಬಾರಿಯಾಗುತ್ತದೆ. ಆದ್ದರಿಂದ ಸಣ್ಣ ವಯಸ್ಸಿನಲ್ಲಿ ಖರೀದಿಸಿದರೆ ಪ್ರೀಮಿಯಂ ಖರ್ಚು ಕೂಡ ಕಡಿಮೆಯಾಗಿರುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version