ಬೆಂಗಳೂರು: ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಡೆಸಲುದ್ದೇಶಿಸಿದ್ದ ಜನೋತ್ಸವಕ್ಕೆ ಮತ್ತೆ ಚಾಲನೆ ನೀಡಲಾಗಿದ್ದು, ದೊಡ್ಡಬಳ್ಳಾಪುರದಲ್ಲಿ ಜನೋತ್ಸವ(Janotsava) ಆಯೋಜಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿನ ಸಿಎಂ ನಿವಾಸದಲ್ಲಿ ನಡೆದ ಈ ಪೂರ್ವಭಾವಿ ಸಭೆಯಲ್ಲಿ ಸಚಿವರು, ಶಾಸಕರು, ಪಕ್ಷದ ಪ್ರಮುಖರು ಭಾಗವಹಿಸಿದ್ದರು.
ಯಡಿಯೂರಪ್ಪ ಸರ್ಕಾರದ ಎರಡು ವರ್ಷ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರದ ಒಂದು ವರ್ಷದ ಸಾಧನೆಯನ್ನು(ಬಿಜೆಪಿ ಸರ್ಕಾರದ 3 ವರ್ಷದ ಸಾಧನೆ) ಜನರ ಮುಂದೆ ಇರಿಸಿ ಸಾಧನೆಗಳನ್ನು ಬಿಂಬಿಸುವ ಕಾರ್ಯಕ್ರಮವಾದ ಜನೋತ್ಸವವನ್ನು ಆಗಸ್ಟ್ 28ರಂದು ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲು ದಿನಾಂಕ ನಿಗದಿಪಡಿಸಲಾಗಿದೆ.
ದಕ್ಷಿಣ ಕನ್ನಡದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಜುಲೈ 28ರಂದು ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಜನೋತ್ಸವವನ್ನು ರದ್ದುಪಡಿಸಲಾಗಿತ್ತು. ಇದೀಗ ಮತ್ತೆ ಜನೋತ್ಸವ ಕಾರ್ಯಕ್ರಮ ಮಾಡಲು ಸಿದ್ಧವಾಗಿರುವ ರಾಜ್ಯ ಬಿಜೆಪಿ ಸರ್ಕಾರ, ಪಕ್ಷದ ರಾಷ್ಟ್ರೀಯ ಮುಖಂಡರನ್ನು ಆಹ್ವಾನಿಸುವ ಉದ್ದೇಶ ಹೊಂದಿದೆ.
ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳ ಬಿಜೆಪಿ ಮುಖಂಡರು, ಶಾಸಕರು ಮಾಜಿ ಶಾಸಕರು, ಸಚಿವರಾದ ಆರ್.ಅಶೋಕ್, ಮುನಿರತ್ನ, ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಭೈರತಿ ಬಸವರಾಜ್, ಶಾಸಕ ಮಸಾಲೆ ಜಯರಾಮ್, ಮಾಜಿ ಶಾಸಕ ವೈ.ಸಂಪಂಗಿ, ಮಂಜುನಾಥಗೌಡ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ | ಜನೋತ್ಸವ | ವಿವಿಧೆಡೆ ರ‍್ಯಾಲಿ ಮಾಡಲು ಒಪ್ಪದ ದೊಡ್ಡಬಳ್ಳಾಪುರ ಜನ; ಆಗಸ್ಟ್ 28ರಂದು ಕಾರ್ಯಕ್ರಮ