ಚಿಕ್ಕಬಳ್ಳಾಪುರ: ನಂದಿ ಬೆಟ್ಟಕ್ಕೆ (Nandi Hill) ಬರುವ ಪ್ರವಾಸಿಗರಿಗೆ ಗುಡ್ ನ್ಯೂಸ್ ಬಂದಿದೆ. ನಂದಿ ಬೆಟ್ಟದವರೆಗೆ ಮೆಮು ರೈಲುಗಳ ಸಂಚಾರ (MEMU train service) ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ.
ಡಿಸೆಂಬರ್ 11ರಿಂದ ಮೆಮು ರೈಲು ಸೇವೆ ಆರಂಭಿಸಲಿದೆ. ಇನ್ನು ಮುಂದೆ ನೀವು ನಂದಿಬೆಟ್ಟಕ್ಕೆ ಮೆಮು ರೈಲಿನಲ್ಲಿ ಪ್ರಯಾಣ ಮಾಡಬಹುದು. ಚಿಕ್ಕಬಳ್ಳಾಪುರಕ್ಕೆ (Chikkaballapura) ಮೆಮು ರೈಲು ವಿಸ್ತರಣೆಗೆ ನೈರುತ್ಯ ರೈಲ್ವೇ ನಿರ್ಧರಿಸಿದೆ.
ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ನಂದಿ ಹಿಲ್ಸ್ ವಿಶ್ವವಿಖ್ಯಾತ ವಾರಾಂತ್ಯದ ತಾಣವಾಗಿದೆ. ಇದೀಗ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಚಿಕ್ಕಬಳ್ಳಾಪುರಕ್ಕೆ ಮೆಮು ರೈಲು ವಿಸ್ತರಣೆಯಾಗುತ್ತಿದೆ. ಯಶವಂತಪುರ ಕಂಟೋನ್ಮೆಂಟ್‌ನಿಂದ ಚಿಕ್ಕಬಳ್ಳಾಪುರಕ್ಕೆ ರೈಲು ಸಂಚರಿಸಲಿದೆ.
ಯಲಹಂಕ -ಚಿಕ್ಕಬಳ್ಳಾಪುರ ನಡುವಿನ ವಿದ್ಯುದೀಕರಣ 2022 ಮಾರ್ಚ್‌ನಲ್ಲಿ ಮುಕ್ತಾಯವಾಗಿತ್ತು. ಕಾರಣಾಂತರಗಳಿಂದ ಈ ಮಾರ್ಗದಲ್ಲಿ ವಿದ್ಯುತ್ ರೈಲುಗಳ ಸಂಚಾರ ವಿಳಂಬವಾಗಿತ್ತು. ಇದೀಗ ನಂದಿಬೆಟ್ಟದ ತಪ್ಪಲಿನಲ್ಲಿರುವ ನಂದಿ ಗ್ರಾಮದ ನಿಲ್ದಾಣದಲ್ಲಿ ಮೆಮು ರೈಲು ನಿಲುಗಡೆಗೆ ಒಪ್ಪಿಗೆ ನೀಡಲಾಗಿದೆ.
ಆದರೆ ಬೆಳಗ್ಗೆ ಸೂರ್ಯೋದಯ ನೋಡಲು ಹೋಗುವವರಿಗೆ ಈ ಸೇವೆ ಲಭ್ಯವಿರುವುದಿಲ್ಲ. ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ (Isha foundation) ನೋಡಲು ಹೋಗುವ ಪ್ರವಾಸಿಗರಿಗೂ ಈ ಸೇವೆ ಅನುಕೂಲವಾಗಲಿದೆ.
MEMU ಎಂಬುದು ʼಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ʼ ಎಂಬುದರ ಸಂಕ್ಷಿಪ್ತ ರೂಪ. ಭಾರತೀಯ ರೈಲ್ವೆಯಲ್ಲಿ MEMU ಎಂಬುದು ವಿದ್ಯುಚ್ಚಾಲಿತ ಮಲ್ಟಿಪಲ್ ಯೂನಿಟ್ ರೈಲು. ಇದು ನಗರ ಮತ್ತು ಉಪನಗರ ಪ್ರದೇಶಗಳನ್ನು ಸಂಪರ್ಕಿಸುವ ಸಾಮಾನ್ಯ EMU ರೈಲುಗಳಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ಮತ್ತು ಮಧ್ಯಮ ದೂರದ ಮಾರ್ಗಗಳಿಗೆ ಸೇವೆ ಸಲ್ಲಿಸುತ್ತದೆ.
ಇದನ್ನೂ ಓದಿ: Nandi Hills | ವರ್ಷದ ಕೊನೆಯ ದಿನ ಹೊಸ ವರ್ಷಾಚರಣೆಗೆ ನಂದಿ ಬೆಟ್ಟಕ್ಕೆ ನೋ ಎಂಟ್ರಿ