ಹಾವೇರಿ: ಹೆಣ್ಮಕ್ಕಳೇ ಸ್ಟ್ರಾಂಗು ಗುರು! ಎನ್ನುವ ರೀತಿ ಈಗ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ತುಂಬಿ ತುಳುಕುತ್ತಿದ್ದಾರೆ. ಶಕ್ತಿ ಯೋಜನೆಗೆ (Shakti Scheme) ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಉಚಿತ ಪ್ರಯಾಣ (Free Bus Service) ಲಭ್ಯವಾಗಿರುವುದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಪ್ರಯಾಣಕ್ಕೆ ಒಲವು ತೋರುತ್ತಿದ್ದಾರೆ. ಈ ಯೋಜನೆಗೆ ಸರ್ಕಾರ ರೂಪಿಸಿರುವ 50:50 ಆಸನದ ಫಾರ್ಮುಲಾ ಇನ್ನೂ ವರ್ಕೌಟ್ ಆಗುತ್ತಿಲ್ಲ. ಸೀಟು ಹಿಡಿಯಲು ನುಗ್ಗುವ ಮಹಿಳೆಯರು ಸಿಕ್ಕ ಸಿಕ್ಕ ಆಸನಗಳಲ್ಲಿ ಕೂರುತ್ತಿದ್ದಾರೆ. ಹೀಗಾಗಿ ಪುರುಷರಿಗೆ ಸೀಟ್ ಸಿಗದಂತೆ ಆಗುತ್ತಿದೆ. ಈಗ ಹಾವೇರಿಯಲ್ಲಿ ಸೀಟ್ ಹಿಡಿಯಲು ಪುರುಷರು ಡ್ರೈವರ್ ಸೀಟ್‌ನ ಡೋರ್ ಅನ್ನು ಬಳಸಿದ್ದಾರೆ. ಈ ವಿಡಿಯೊ ಈಗ ವೈರಲ್ (Video Viral) ಆಗಿದೆ.
ಬಸ್‌ನ ಹಿಂಬದಿ ಇರುವ ಮೇನ್ ಡೋರ್‌ನಿಂದ ಹೋಗಿ ಸೀಟ್ ಹಿಡಿಯೋಣ ಎಂದರೆ ಅಲ್ಲಿ ಬಹುಪಾಲು ಮಹಿಳೆಯರೇ ತುಂಬಿರುತ್ತಾರೆ. ಅವರ ನೂಕುನುಗ್ಗಲು ನಡುವೆ ಸಿಲುಕಿ ಒಳಗೆ ಹೋಗಿ ಸೀಟು ಹಿಡಿದು ಕೂರುವುದು ಅಸಾಧ್ಯ ಎಂಬ ತರ್ಕಕ್ಕೆ ಕೆಲವು ಗಂಡಸರು ಬಂದಂತೆ ಇದೆ. ಈ ಕಾರಣಕ್ಕೆ ಅವರು ವಾಮಮಾರ್ಗವನ್ನು ಅನುಸರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾವೇರಿ ಬಸ್ ನಿಲ್ದಾಣದಲ್ಲಿ ಸೀಟ್‌ಗಾಗಿ ಪರದಾಡಿದ ಪುರುಷ ಪ್ರಯಾಣಿಕರು ಡ್ರೈವರ್ ಸೀಟ್ ಬಳಿಯ ಡೋರ್ ಅನ್ನು ಹತ್ತಿ ಒಳ ನುಗ್ಗಿದ್ದಾರೆ. ಇದನ್ನು ಸಾರ್ವಜನಿಕರೊಬ್ಬರು ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ: Weather report: ವೀಕೆಂಡ್ ಅಂತ ಹೊರಗೆ ಹೋಗುವ ಮುನ್ನ ಎಚ್ಚರ; ಇಂದು ಇರಲಿದೆ ಮಳೆ ಅಬ್ಬರ
ಹಾವೇರಿಯಲ್ಲಿ ಸರ್ಕಾರಿ ಬಸ್ ಸಂಖ್ಯೆ ಕಡಿಮೆ ಇದೆ ಎನ್ನಲಾಗಿದೆ. ಇದೇ ಈಗ ಪ್ರಯಾಣಿಕರ ಪರದಾಟಕ್ಕೆ ಕಾರಣವಾಗಿದೆ. ಇರುವ ಬಸ್‌ಗಳಲ್ಲೇ ಹೋಗಬೇಕು. ಆ ಬಸ್ ತಪ್ಪಿಸಿಕೊಂಡರೆ ಮತ್ತೆ ತಕ್ಷಣಕ್ಕೆ ತಾವು ಹೋಗುವ ಮಾರ್ಗಕ್ಕೆ ಬಸ್ ಬರುವುದಿಲ್ಲ. ಕೊನೆಗೆ ಬರುವ ಬಸ್‌ಗೂ ಇದೇ ರೀತಿ ರಶ್ ಇರುತ್ತದೆ. ಹೀಗಾಗಿ ಸೀಟ್ ಹಿಡಿಯಬೇಕೆಂದರೆ ಯಾವುದಾದರೂ “ದುಸ್ಸಾಹಸ” ಮಾಡಲೇಬೇಕು. ಈ ಹಿನ್ನೆಲೆಯಲ್ಲಿ ಡ್ರೈವರ್ ಸೀಟಿನಿಂದ ಕೆಲವು ಮಹಾಪುರುಷರು ಹತ್ತಿ ಸೀಟ್ ಹಿಡಿದುಕೊಂಡಿದ್ದಾರೆ.
ಹಾವೇರಿಯಿಂದ ಹುಬ್ಬಳ್ಳಿಗೆ ಹೋಗುವ ಬಸ್ ಇದಾಗಿದೆ. ಪ್ರವೇಶ ಬಾಗಿಲಿನಿಂದ ಬಸ್ ಹತ್ತಲಾಗದ ಪುರುಷರು ಡ್ರೈವರ್ ಸೀಟ್ ಅನ್ನು ಬಳಸಿ ಬಸ್ ಹತ್ತಿದ್ದಾರೆ.
ಡ್ರೈವರ್ ಸೀಟ್‌ನಿಂದಲೇ ಹತ್ತಿದ ನಾರಿಯರು!
ಚಿಕ್ಕಬಳ್ಳಾಪು: ಚಿಂತಾಮಣಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜೂನ್ 21ರಂದು ಮಹಿಳೆಯರು ಡ್ರೈವರ್ ಸೀಟ್‌ನಿಂದ ಹತ್ತಿ ಸುದ್ದಿಯಾಗಿದ್ದರು. ಚಿಂತಾಮಣಿ ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆ ಜನರು ಓಡೋಡಿ ಬಂದಿದ್ದಾರೆ. ಎಲ್ಲರಿಗೂ ಸೀಟು ಹಿಡಿಯುವ ತವಕ. ಹೀಗಾಗಿ ಕೆಲವರು ಕಿಟಕಿ ಒಳಗಿನಿಂದ ಸೀಟ್ ಮೇಲೆ ತಮ್ಮ ಬ್ಯಾಗ್, ಕರ್ಚೀಫ್‌ಗಳನ್ನು ಒಗೆದರೆ, ಮತ್ತೆ ಕೆಲವರು ಡೋರ್ ಮೂಲಕ ಬೇಗ ಹೋಗಿ ಸೀಟ್ ಹಿಡಿಯುವ ದಾವಂತದಲ್ಲಿದ್ದರು. ಆದರೆ, ಈ ವೇಳೆ ಬುದ್ಧಿ ಉಪಯೋಗಿಸಿದ್ದ ಕೆಲವು ಮಹಿಳೆಯರು ಹೆಚ್ಚಿಗೆ ಸ್ಮಾರ್ಟ್ ಆಗಲು ಹೋಗಿ ಡ್ರೈವರ್ ಸೀಟ್ ಮೂಲಕ ಹತ್ತಿದ್ದರು. ಕೊನೆಗೆ ಸಿಬ್ಬಂದಿಯಿಂದ ಬೈಸಿಕೊಂಡಿದ್ದರು.
ಇನ್ನು ಬಸ್‌ನ ಮೇನ್ ಡೋರ್‌ನಿಂದ ಹೋದರೆ ಪ್ರಯೋಜನ ಇಲ್ಲ ಎಂದು ಲೆಕ್ಕ ಹಾಕಿದ ಕೆಲವು ಮಹಿಳೆಯರು ಸೀದಾ ಡ್ರೈವರ್ ಸೀಟ್ ಬಳಿಗೆ ಓಡಿದ್ದಾರೆ. ಅಲ್ಲಿ ಹೋದವರೇ ಡೋರ್ ಓಪನ್ ಮಾಡಿ ಅದರಿಂದ ಹತ್ತಲಾರಂಭಿಸಿದ್ದರು. ಹಾಗೂಹೀಗೂ ನಾಲ್ಕೈದು ಮಹಿಳೆಯರು ಅದರ ಮೂಲಕ ನುಗ್ಗಿಬಿಟ್ಟಿದ್ದರು. ಈ ವಿಚಾರ ತಿಳಿದ ಬಸ್ ನಿರ್ವಾಹಕ ಅಲ್ಲಿಗೆ ಬಂದು ಬೈದಿದ್ದು, ಮತ್ತೆ ಹತ್ತಲು ಮುಂದಾದ ಕೆಲವರನ್ನು ಕೆಳಗೆ ಇಳಿಸಿ ಕಳಿಸಿದ್ದರು.
ಇದನ್ನೂ ಓದಿ: Free Bus Service: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು; ಪ್ರವಾಸೋದ್ಯಮಕ್ಕೆ ಸಿಕ್ಕಿತು ʼಶಕ್ತಿʼ
ಚಿಂತಾಮಣಿಯಿಂದ ಬೆಂಗಳೂರು ಸೇರಿದಂತೆ ಹಲವು ಸ್ಥಳಗಳಿಗೆ ತೆರಳುವ ಬಸ್‌ಗಳಿಗೆ ಭಾರಿ ಬೇಡಿಕೆ ಬಂದಿದ್ದು, ಸಿಕ್ಕ ಸಿಕ್ಕ ಬಸ್‌ಗಳನ್ನು ಜನರು ಹತ್ತುತ್ತಿದ್ದಾರೆ. ಹೀಗಾಗಿ ಬಹುತೇಕ ಎಲ್ಲ ಬಸ್‌ಗಳು ತುಂಬಿ ತುಳುಕುತ್ತಿವೆ. ಇನ್ನು ಪ್ರಯಾಣಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.