Site icon Vistara News

Shivaji Statue: ಮತ್ತೆ ಎಂಇಎಸ್‌ ಪುಂಡಾಟ; ಮಾ. 19ರಂದು ಶಿವಾಜಿ ಪ್ರತಿಮೆ ಶುದ್ಧೀಕರಣ ಘೋಷಣೆ

MeS hooliganism again Shivaji statue to be cleaned on March 19 Shivaji Statue politics updates

ಬೆಳಗಾವಿ: ನಗರದಲ್ಲಿ ಎಂಇಎಸ್ ಪುಂಡಾಟಿಕೆ ಮತ್ತೆ ಶುರುವಾಗಿದೆ. ಕರ್ನಾಟಕ ಸರ್ಕಾರದ ಅನುದಾನದಿಂದ ನಿರ್ಮಾಣವಾದ ಶಿವಾಜಿ ಪ್ರತಿಮೆ ಎದುರು ನಿಂತು ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆಯನ್ನು ಕೂಗಿದ್ದಾರೆ. ಅಲ್ಲದೆ, ಶಿವಾಜಿ ಪ್ರತಿಮೆ ಶುದ್ಧೀಕರಣ ಕಾರ್ಯಕ್ರಮ ನಡೆಸುವುದಾಗಿಯೂ ಹೇಳಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮರಾಠಿ ಸಮುದಾಯದ ಮತ ಸೆಳೆಯಲು ಮುಂದಾಗಿದೆ. ‌

ಬೆಳಗಾವಿಯ ಐತಿಹಾಸಿಕ ರಾಜಹಂಸಗಡ ಕೋಟೆಗೆ ಎಂಇಎಸ್ ನಾಯಕರ ಭೇಟಿ ನೀಡಿದ್ದಲ್ಲದೆ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಎದುರು ನಿಂತು “ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಪ್ರದೇಶಗಳು ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಲೇಬೇಕು” ಎಂದು ನಾಡದ್ರೋಹಿ ಘೋಷಣೆಯನ್ನು ಕೂಗಿದ್ದಾರೆ.

ರಾಜಹಂಸಗಡ ಕೋಟೆಗೆ ಮಾಜಿ ಶಾಸಕ ಮನೋಹರ್ ಕಿಣೇಕರ್ ನೇತೃತ್ವದಲ್ಲಿ ಎಂಇಎಸ್ ಪುಂಡರ ತಂಡ ಭೇಟಿ ನೀಡಿದೆ. ಕಾಂಗ್ರೆಸ್, ಬಿಜೆಪಿ ನಾಯಕರಿಂದ ಛತ್ರಪತಿ ಶಿವಾಜಿ ಮಹಾರಾಜರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದ ಎಂಇಎಸ್‌ ಕಾರ್ಯಕರ್ತರು, ಎರಡೆರಡು ಬಾರಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Karnataka Elections : ಮರಾಠಿ ಓಲೈಕೆ ಡ್ಯಾಮೇಜ್‌ ಕಂಟ್ರೋಲ್‌; ಶಿವಾಜಿ ಬಳಿಕ ಈಗ ಬಸವೇಶ್ವರ ಮೂರ್ತಿ ಸ್ಥಾಪನೆ ಪ್ಲ್ಯಾನ್‌

ಮಾರ್ಚ್ 19ರಂದು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಶುದ್ಧೀಕರಣ ಹೆಸರಲ್ಲಿ ಕಾರ್ಯಕ್ರಮ ನಡೆಸುವುದಾಗಿ ಹೇಳಿರುವ ಎಂಇಎಸ್‌ ಕಾರ್ಯಕರ್ತರು, ಅಂದು ಶಿವಾಜಿ ಮಹಾರಾಜರ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಲು ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಇದಕ್ಕೂ ಮುನ್ನ ಸಿದ್ದೇಶ್ವರ ದೇವಸ್ಥಾನದಲ್ಲಿ ಅಭಿಷೇಕ ಮಾಡಲು ತೀರ್ಮಾನಿಸಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವಂತೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಊಟದ ವ್ಯವಸ್ಥೆ ಇರಲಿದೆ ಎಂದು ಹೇಳಿದ್ದಾರೆ.

ಏನಿದು ಪ್ರತಿಮೆ ವಿವಾದ?

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 50 ಲಕ್ಷ ರೂಪಾಯಿ ಅನುದಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಶಿವಾಜಿ ಪ್ರತಿಮೆ ಲೋಕಾರ್ಪಣೆ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ಮಧ್ಯೆ ಕ್ರೆಡಿಟ್ ವಾರ್ ಶುರುವಾಗಿತ್ತು. ಮಾ.2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅವರಿಂದ ಉದ್ಘಾಟನೆ ಮಾಡಿಸಿದ್ದರು. ಇದಕ್ಕೆ ಪ್ರತಿರೋಧ ಒಡ್ಡಿದ್ದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಾ.5ರಂದು ಅದ್ಧೂರಿ ಕಾರ್ಯಕ್ರಮ ಮಾಡಿ ಮತ್ತೊಮ್ಮೆ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದರು. ಇದಕ್ಕೆ ಛತ್ರಪತಿ ಶಿವಾಜಿ ಮಹಾರಾಜರ 13ನೇ ವಂಶಸ್ಥರನ್ನು ಅವರು ಕರೆಸಿದ್ದರು.

ಇದನ್ನೂ ಓದಿ: BY Vijayendra: ಸಿ.ಟಿ. ರವಿ ಹೇಳಿದ್ದು ಸರಿ ಇದೆ; ವಿಜಯೇಂದ್ರನಿಗಾದರೂ ಚುನಾವಣಾ ಸಮಿತಿಯಿಂದಲೇ ಟಿಕೆಟ್‌ ತೀರ್ಮಾನ: ಬಿಎಸ್‌ವೈ

ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಐತಿಹಾಸಿಕ ರಾಜಹಂಸಗಡ ಕೋಟೆ ಇದೆ. ಒಂದು ಲಕ್ಷಕ್ಕೂ ಅಧಿಕ ಮರಾಠ ಸಮುದಾಯದ ಮತಗಳು ಇಲ್ಲಿವೆ. ಮರಾಠಾ ಸಮುದಾಯದ ಮತ ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಜತೆ ಈಗ ಎಂಇಎಸ್ ಸಹ ಪೈಪೋಟಿಗೆ ಇಳಿದಿದೆ.

Exit mobile version