Site icon Vistara News

Black Day | ಸಪ್ಪೆ ಮೆರವಣಿಗೆಗೆ ಎಂಇಎಸ್ ತೃಪ್ತಿ; ಶಿವಸೇನೆ ನಾಯಕ‌ರ ಗಡಿ ಪ್ರವೇಶ ಯತ್ನ ವಿಫಲ

Black Day

ಬೆಳಗಾವಿ: ರಾಜ್ಯೋತ್ಸವಕ್ಕೆ ಪ್ರತಿಯಾಗಿ ಎಂಇಎಸ್ ಪ್ರತಿ ವರ್ಷ ಬೆಳಗಾವಿಯಲ್ಲಿ ಕರಾಳ ದಿನ(Black Day) ಆಚರಿಸುತ್ತದೆ. ಪ್ರತಿ ವರ್ಷ ಮಹಾರಾಷ್ಟ್ರ ನಾಯಕರನ್ನು ಆಹ್ವಾನಿಸುತ್ತಿದ್ದ ಎಂಇಎಸ್ ನಾಯಕರು ಬೆಳಗಾವಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮೆರವಣಿಗೆ ಮಾಡುತ್ತಿದ್ದರು. ಆದರೆ ಎಂಇಎಸ್‌ನ ಈ ತಂತ್ರವನ್ನು ಜಿಲ್ಲಾಡಳಿತ ಹತ್ತಿಕ್ಕಿತು. ಮಹಾರಾಷ್ಟ್ರ ನಾಯಕರ ಗಡಿ ಪ್ರವೇಶವನ್ನು ಜಿಲ್ಲಾ ಪೊಲೀಸರು ವಿಫಲಗೊಳಿಸಿದ್ದರಿಂದ ಸಪ್ಪೆ ಮೆರವಣಿಗೆಗೆ ಎಂಇಎಸ್ ತೃಪ್ತಿ ಪಟ್ಟಿತು.

ಕರಾಳ ದಿನಾಚರಣೆ ಮೂಲಕ ಚುನಾವಣೆ ಸಂದರ್ಭದಲ್ಲಿ ಮುಗ್ಧ ಮರಾಠಿ ಭಾಷಿಕರ‌ನ್ನು ಪ್ರಚೋದಿಸಿ ರಾಜಕೀಯ ಲಾಭ ಪಡೆಯಲು ಎಂಇಎಸ್‌ ಯೋಜನೆ ರೂಪಿಸಿತ್ತು. ಅದರಂತೆ ಕುಂದಾನಗರಿಯಲ್ಲಿ ಒಂದೆಡೆ ಅದ್ಧೂರಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಇತ್ತು. ಮತ್ತೊಂದೆಡೆ ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಎಂಇಎಸ್ ಕರಾಳ ದಿನ ಆಯೋಜಿಸಿತ್ತು. ಬೆಳಗಾವಿಯ ಸಂಭಾಜೀ ಮೈದಾನದಿಂದ ಕರಾಳ ದಿನದ ಮೆರವಣಿಗೆಗೆ ಆರಂಭವಾಯಿತು. ಮೆರವಣಿಗೆ ಆರಂಭವಾಗುತ್ತಿದ್ದಂತೆ ಎಂಇಎಸ್ ಕಾರ್ಯಕರ್ತರು ಪುಂಡಾಟ ಶುರು ಮಾಡಿದರು.

ಇದನ್ನೂ ಓದಿ | Kannada Rajyotsava | ರಾಜ್ಯಾದ್ಯಂತ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ, ಭುವನೇಶ್ವರಿ ಮೆರವಣಿಗೆ

ಕಪ್ಪು ಬಟ್ಟೆ ಧರಿಸಿದ್ದ ಎಂಇಎಸ್ ಪುಂಡರು, ಬೆಳಗಾವಿ, ಬೀದರ್, ಬಾಲ್ಕಿ, ನಿಪ್ಪಾಣಿ,‌ ಖಾನಾಪುರ ‌ಸೇರಿ ಗಡಿಭಾಗಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿ ಉದ್ಧಟತನ ಪ್ರದರ್ಶನ ಮಾಡಿದರು. ನಾವು ಮಹಾರಾಷ್ಟ್ರಕ್ಕೆ ಸೇರುತ್ತೇವೆ ಇಲ್ಲವಾದರೆ ಜೈಲಿಗೆ ಹೋಗುತ್ತೇವೆ ಎಂದು ಘೋಷಣೆ ಕೂಗಿ, ಮಹಾರಾಷ್ಟ್ರ ನಾಯಕರ ಅನುಪಸ್ಥಿತಿಯಲ್ಲಿ ಸಪ್ಪೆ ಮೆರವಣಿಗೆ ನಡೆಸಿ ತೃಪ್ತಿ ಪಟ್ಟರು.

ಎಂಇಎಸ್ ಪುಂಡಾಟಿಕೆ ಹತ್ತಿಕ್ಕಲು ಬಿಗಿ ಪೋಲಿಸ್ ಬಂದೋಬಸ್ತ್ ಇತ್ತು. 200ಕ್ಕಿಂತಲೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಮರಾಠಾ ಮಂದಿರವರೆಗೆ ನಡೆದ ಮೆರವಣಿಗೆ ಬಳಿಕ ಸಭಾ ಕಾರ್ಯಕ್ರಮ ನಡೆಸಿದ ಪುಂಡರು ಬಳಿಕ ಮನೆಯತ್ತ ಹೆಜ್ಜೆ ಹಾಕಿದರು. ಎಂಇಎಸ್ ಕರಾಳ ದಿನದ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ವಿಶ್ವಕನ್ನಡ ಸಮ್ಮೇಳನ ಬೆಳಗಾವಿಯ ಎಲ್ಲ ಭಾಷಿಕರು ಯಶಸ್ವಿಗೊಳಿಸಿದ್ದಾರೆ. ಅಷ್ಟು ಅನೋನ್ಯತೆಯಿಂದ ಜನರು ಇಲ್ಲಿ ನೆಲೆಸಿದ್ದಾರೆ. ಕೆಲ ಕಿಡಿಗೇಡಿಗಳು ಕರಾಳ ದಿನ ಮಾಡ್ತಿದ್ದಾರೆ. ಅದಕ್ಕೆ ಆದ್ಯತೆ ನೀಡಬೇಡಿ ಎಂದರು.

ಒಂದು ಕಾಲದಲ್ಲಿ ಬೆಳಗಾವಿಯಲ್ಲಿ ಐವರು ಎಂಇಎಸ್ ಶಾಸಕರಿದ್ದರು. ಮಹಾನಗರ ಪಾಲಿಕೆಯೂ ಎಂಇಎಸ್ ವಶದಲ್ಲಿತ್ತು. ಈಗ ಸಂಪೂರ್ಣ ಸೋತು ಸುಣ್ಣವಾಗಿರುವ ಎಂಇಎಸ್ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದೆ. ಮೆರವಣಿಗೆಯಿಂದ ದೂರ ಉಳಿಯುವ ಮೂಲಕ ಯುವ ಸಮೂಹ ಎಂಇಎಸ್ ನಾಯಕರ ನಿರಾಸೆ ಮೂಡಿಸಿದಂತು ಸುಳ್ಳಲ್ಲ.

ರಾಜ್ಯ ಗಡಿ ಪ್ರವೇಶಕ್ಕೆ ಸಿಗದ ಅನುಮತಿ
ಎಂಇಎಸ್ ಮುಖಂಡರು ಮಹಾರಾಷ್ಟ್ರದ ಹಲವು ನಾಯಕರಿಗೆ ಆಹ್ವಾನ ನೀಡಿದ್ದರು. ಎಂಇಎಸ್ ‌ಮುಖಂಡರ ಆಹ್ವಾನಕ್ಕೆ ಮಹಾರಾಷ್ಟ್ರ ಬಹುತೇಕ ನಾಯಕರು ಸೊಪ್ಪು ಹಾಕಲಿಲ್ಲ. ಆದರೆ ಶಿವಸೇನೆ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ ದೇವಣೆ ಕರಾಳ ದಿನದಲ್ಲಿ ಭಾಗವಹಿಸಲು ನಿರ್ಧರಿಸಿದ್ದರು. ಕಾಗಲ್ ಮಾರ್ಗವಾಗಿ ಕುಗನೊಳ್ಳಿ ಚೆಕ್ ಪೋಸ್ಟ್‌ಗೆ ಬಂದ ವಿಜಯ ದೇವಣೆಗೆ ಬೆಳಗಾವಿ ‌ಪೊಲೀಸರು ಪ್ರವೇಶ ನೀಡಲಿಲ್ಲ. ಬಳಿಕ ಶಿನ್ನೊಳಿ ಮಾರ್ಗವಾಗಿ ಬೆಳಗಾವಿ ‌ಪ್ರವೇಶಕ್ಕೆ ಮುಂದಾದ ವಿಜಯ ದೇವಣೆ ಹಾಗೂ ಕಾರ್ಯಕರ್ತರಿಗೆ ನಗರ ಪೊಲೀಸರು ಅವಕಾಶ ಕೊಡಲಿಲ್ಲ. ಹೀಗಾಗಿ ರಸ್ತೆ ಮೇಲೆ ಕುಳಿತು ವಿಜಯ ಹೈಡ್ರಾಮಾ ಮಾಡಿ ಕೆಲಹೊತ್ತಿನ ಬಳಿಕ ಶಿವಸೇನೆ ಕಾರ್ಯಕರ್ತರು ವಾಪಸ್ ತೆರಳಿದ್ದರು.

ಇದನ್ನೂ ಓದಿ | Appu Namana | ಮಳೆಹನಿಗಳ ಮಂಗಳವೃಷ್ಟಿಯೊಂದಿಗೆ ಪುನೀತ್‌ ಮುಡಿಗೇರಿತು ಕರ್ನಾಟಕ ರತ್ನ ಪ್ರಶಸ್ತಿ

Exit mobile version