ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಹೊಸ ಮೀಟರ್ ಟ್ಯಾಕ್ಸಿ ಸೇವೆ (Meter Taxi) ಆರಂಭವಾಗಿದೆ. ಬಜಾಜ್ ಕ್ಯೂಟ್ (ಕ್ವಾಡ್ರಿಸೈಕಲ್) ವಾಹನಕ್ಕೆ ಸಾರಿಗೆ ಇಲಾಖೆ ದರ ನಿಗದಿ ಮಾಡಿದ್ದು, ಮೌಲ್ಯಮಾಪನ ಇಲಾಖೆ ಸೂಚಿಸಿರುವ ಮೀಟರ್ ಅಳವಡಿಸಿ ವಾಹನಗಳಿಗೆ ಸೋಮವಾರದಿಂದ ಚಾಲನೆ ನೀಡಲಾಗುತ್ತಿದೆ.
ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ಎಂಬ ಹೊಸ ಮಾದರಿಯ ವಾಹನವು 2019ರಲ್ಲಿ ಮಾರುಕಟ್ಟೆಗೆ ಬಂದಿತಾದರೂ, ಇದಕ್ಕೆ ಸಾರಿಗೆ ಇಲಾಖೆಯಿಂದ ದರ ನಿಗದಿಪಡಿಸಿರಲಿಲ್ಲ. ಕೇವಲ ಉಬರ್ ಸಂಸ್ಥೆಗೆ ಅವಲಂಬಿತರಾಗಿ ಚಾಲಕರು ಸೇವೆ ನೀಡುತ್ತಿದ್ದರು.
ಹಾಗಾಗಿ 2020ರ ಡಿಸೆಂಬರ್‌ನಲ್ಲಿ ಚಾಲಕರ ಸಂಘಟನೆಗಳು ಈ ವಾಹನಗಳಿಗೆ ಮೀಟರ್ ದರ ನಿಗದಿಪಡಿಸಿ ಕೊಡಲು ಸಾರಿಗೆ ಇಲಾಖೆಗೆ ಮನವಿ ಮಾಡಿದ್ದವು. ಇದರಿಂದ ಈ ವಾಹನ ಚಾಲಕ ಮಾಲೀಕರು ಮೀಟರ್ ಅಳವಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಾಗಲು ದಾರಿ ಮಾಡಿಕೊಡುವಂತೆ ತಿಳಿಸಿದ್ದವು.
ಇದೀಗ ಹಲವು ಅಡೆತಡೆಗಳ ದಾಟಿ, ಸತತ ಎರಡು ವರ್ಷಗಳ ಬಳಿಕ 2023ರ ಮಾರ್ಚ್ 20ರಂದು ಸಾರಿಗೆ ಇಲಾಖೆ ದರ ನಿಗದಿ ಪಡಿಸಿಕೊಟ್ಟಿತ್ತು. ಈ ದರದ ಪ್ರತಿಯನ್ನು ಮೌಲ್ಯಮಾಪನ ಇಲಾಖೆಗೆ ಸಲ್ಲಿಸಿ ಅವರಿಂದಲೂ ಸಹ ಅನುಮತಿ ದೊರೆತಿದೆ. ಇನ್ನು ರಾಜ್ಯದಲ್ಲಿ ಓಡಾಡುವ ಬಜಾಜ್ ಸಂಸ್ಥೆಯ ಕ್ಯೂಟ್ ಮೀಟರ್ ಟ್ಯಾಕ್ಸಿಗೆ ಪ್ರತಿ ಕಿ.ಮೀ.ಗೆ 16 ರೂಪಾಯಿ ಹಾಗೂ 4 ಕಿ.ಮೀ.ವರೆಗೆ 60 ರೂಪಾಯಿ ಕನಿಷ್ಠ ದರವನ್ನು ನಿಗದಿ ಮಾಡಲಾಗಿದೆ.
ಇದನ್ನೂ ಓದಿ: SSLC Exam 2023: ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಪ್ರಕ್ರಿಯೆ ಆರಂಭ; ಮೇ 2ನೇ ವಾರದಲ್ಲಿ ಫಲಿತಾಂಶ ಪ್ರಕಟ
ಬಜಾಜ್ ಸಂಸ್ಥೆಯ ಅಧ್ಯಕ್ಷ ಮೀಟರ್ ಟ್ಯಾಕ್ಸಿಗೆ ಫ್ಲಾಗ್ ಆಫ್ ಮಾಡುವ ಮೂಲಕ ಸಾರ್ವಜನಿಕ ಸೇವೆಗೆ ಚಾಲನೆ ನೀಡಲಿದ್ದಾರೆ. ಸ್ವಾವಲಂಬಿಗಳಾಗಿ ದುಡಿಯಲು ಹೊರಟಿರುವ ಚಾಲಕರಿಗೆ ಶುಭಕೋರಲಿದ್ದಾರೆ.