Site icon Vistara News

Metro Mitra : ನಾಳೆಯಿಂದ ಕೆಲಸ ಶುರು ಮಾಡ್ತಾನೆ ಮೆಟ್ರೋ ಮಿತ್ರ; ಇನ್ನು ಮುಂದೆ ಆಟೋ ಹಿಡಿಯೋದು ಸುಲಭ

Metro mitra

ಬೆಂಗಳೂರು: ನೀವು ಮೆಟ್ರೋ ಪ್ರಯಾಣಿಕರೇ (Metro Commuters) ಅಥವಾ ಎಲ್ಲಿಂದಲಾದರೂ ಬೆಂಗಳೂರಿಗೆ ಬಂದಿದ್ದಾಗ ಮೆಟ್ರೋದಲ್ಲಿ ಓಡಾಟ ಮಾಡಿದವರೇ? ನಿಮಗೆ ಮೆಟ್ರೋ ಸ್ಟೇಷನ್‌ನಲ್ಲಿ (Metro Station) ಇಳಿದ ಕೂಡಲೇ ಆಟೋ ಹಿಡಿಯೋದು ಸಮಸ್ಯೆ ಆಗಿದೆಯಾ? ಕೆಲವರು ಬರಲ್ಲ ಅನ್ನೋದು, ಕೆಲವರು ಜಾಸ್ತಿ ರೇಟು ಕೇಳೋದು ಮೊದಲಾದ ಸಮಸ್ಯೆಯಾಗಿದೆಯಾ? ಹಾಗಿದ್ದರೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಬಲ್ಲ ಒಂದು ಹೊಸ ವ್ಯವಸ್ಥೆ ಜಾರಿಗೆ ಬರಲಿದೆ, ಅದುವೇ ಮೆಟ್ರೋ ಮಿತ್ರ! (Metro Mitra)

ಹೌದು, ಮೆಟ್ರೋ ಮಿತ್ರ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆಯೊಂದಿಗೆ ಬರುತ್ತಿದ್ದಾನೆ. ಇದನ್ನು ಬಳಸಿಕೊಂಡು ನೀವು ಆಟೋ ಬುಕ್‌ ಮಾಡಬಹುದು ಮತ್ತು ಸುಲಭದಲ್ಲಿ ನಿಮಗೆ ಬೇಕಾದ ಜಾಗವನ್ನು ತಲುಪಬಹುದು. ಇದಕ್ಕಾಗಿ ನೀವು ಯಾವುದೇ APP ಡೌನ್‌ಲೋಡ್‌ ಮಾಡುವ ಅವಶ್ಯಕತೆಯೂ ಇಲ್ಲ.

ಏನಿದು ಮೆಟ್ರೋ ಮಿತ್ರ?

ಮೆಟ್ರೋ ಮಿತ್ರ ಎನ್ನುವುದು ಮೆಟ್ರೋ ನಿಲ್ದಾಣಗಳಿಂದ ಒದಗಿಸಲಾಗುವ ಆಟೋ ಸೇವೆ. ‘ನಮ್ಮ ಯಾತ್ರಿ’ ಅಪ್ಲಿಕೇಶನ್‌ನ ಯಶಸ್ಸಿನ ನಂತರ ಬೆಂಗಳೂರಿನ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ARDU) ಈಗ ಸೆಪ್ಟೆಂಬರ್ 6ರಂದು ‘ಮೆಟ್ರೋ ಮಿತ್ರ’ ಅನ್ನು ಪ್ರಾರಂಭಿಸುತ್ತಿದೆ.

ಬೆಂಗಳೂರು ನಗರದ ಮೆಟ್ರೋ ನಿಲ್ದಾಣಗಳಿಂದ ಪ್ರಯಾಣಿಕರಿಗೆ ತಮಗೆ ಬೇಕಾದ ಜಾಗಕ್ಕೆ ತಲುಪಿಸಲು ಈ ಮೆಟ್ರೋ ಮಿತ್ರ ಸಹಾಯ ಮಾಡುತ್ತದೆ.

ಈ ನೂತನ ತಂತ್ರಜ್ಞಾನದ ಲಾಭ ಪಡೆಯಲು ಗ್ರಾಹಕರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ ಬದಲಿಗೆ ಅವರು ಕೇವಲ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸೇವೆಯನ್ನು ಪಡೆಯಬಹುದಾಗಿದೆ.

ಹಲವಾರು ಆಟೋ ಚಾಲಕರು ಕಡಿಮೆ- ದೂರ ಪ್ರಯಾಣಕ್ಕಾಗಿ ಸವಾರಿ ಮಾಡಲು ನಿರಾಕರಿಸುವುದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಾರೆ. ಇದರಿಂದ ಅವರು ಹೆಚ್ಚು ಹಣ ಕೊಟ್ಟು ಹೋಗಬೇಕಾಗುತ್ತದೆ. ಮೆಟ್ರೋ ಮಿತ್ರ ತಂತ್ರಜ್ಞಾನವು ಸಮಸ್ಯೆಯನ್ನು ಪರಿಹರಿಸಲಿದೆ.

ಮೆಟ್ರೋ ಮಿತ್ರ ಹೇಗೆ ಸಹಾಯ ಮಾಡುತ್ತಾನೆ?

‘ಮೆಟ್ರೊ ಮಿತ್ರ’ದಲ್ಲಿ ಬಳಸಲಾದ ತಂತ್ರಜ್ಞಾನವು ಗ್ರಾಹಕರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಬದಲಾಗಿ, ಪ್ರಯಾಣಿಕರು ಪ್ರಯಾಣವನ್ನು ಹುಡುಕಲು ಮೆಟ್ರೋ ನಿಲ್ದಾಣಗಳ ಹೊರಗೆ ಪ್ರದರ್ಶಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು.

ಪ್ರಯಾಣಿಕರು ಒಮ್ಮೆ QR ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ಅದು ಅವರನ್ನು ನಿಲ್ದಾಣದ 5 ​​ಕಿಮೀ ವ್ಯಾಪ್ತಿಯಲ್ಲಿ ಪ್ರಮುಖ ಹೆಗ್ಗುರುತುಗಳನ್ನು ಪಟ್ಟಿ ಮಾಡಲಾದ ಲಿಂಕ್‌ಗೆ ಕರೆದೊಯ್ಯುತ್ತದೆ. ಪ್ರಯಾಣಿಕರು ಲ್ಯಾಂಡ್‌ಮಾರ್ಕ್ ಅನ್ನು ಆಯ್ಕೆ ಮಾಡಿದ ನಂತರ ರೈಡ್ ಅನ್ನು ಬುಕ್ ಮಾಡಲು ಒಂದು-ಬಾರಿ ಪಾಸ್‌ವರ್ಡ್ (one time Password) ಬರುತ್ತದೆ. ಯಾವ ಆಟೋ ಚಾಲಕರು ಆಪ್‌ ಹೊಂದಿರುತ್ತಾರೋ ಅವರಿಗೆ ನೋಟಿಫಿಕೇಶನ್‌ ಹೋಗುತ್ತದೆ. ಅವರು ಸ್ಥಳಕ್ಕೆ ಬರುತ್ತಾರೆ ಮತ್ತು ನಿಮ್ಮನ್ನು ನೀವು ಹೇಳಿದ ಜಾಗಕ್ಕೆ ಕರೆದೊಯ್ಯುತ್ತಾರೆ.

ಇದನ್ನೂ ಓದಿ: Namma Metro: ವರ್ಷಾಂತ್ಯಕ್ಕೆ ಜಯದೇವ ಜಂಕ್ಷನ್‌ ಇಂಟರ್‌ಚೇಂಜ್‌ ಮೆಟ್ರೋ ನಿಲ್ದಾಣ ಆರಂಭ

ARDU ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಜೊತೆ ಸೇರಿ ಆರಂಭಿಸಿರುವ ಈ ಸೇವೆಯನ್ನು ಮುಂದೆ ವಾಟ್ಸಾಪ್ ಚಾಟ್‌ಬಾಕ್ಸ್‌ನೊಂದಿಗೆ ಕನೆಕ್ಟ್‌ ಮಾಡಲು ಚಿಂತನೆ ನಡೆಯುತ್ತಿದೆ.

ಮೆಟ್ರೋ ಮಿತ್ರದ ದೋಷಗಳೇನು?

ಮೆಟ್ರೋ ಮಿತ್ರ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ದೋಷಗಳೂ ಇವೆ. ಸದ್ಯಕ್ಕೆ ಇದು ಕೆಲವು ನಿರ್ದಿಷ್ಟ ಲ್ಯಾಂಡ್‌ ಮಾರ್ಕ್‌ಗಳನ್ನು ಮಾತ್ರ ತೋರಿಸುತ್ತದೆ. ಪ್ರಯಾಣಿಕರು ಅಲ್ಲಿನವರೆಗೆ ಪ್ರಯಾಣ ಮಾಡಬಹುದು. ಬಳಿಕ ಅವರ ಮನೆ, ಶಾಪ್‌ ಮತ್ತಿತರ ಕಡೆಗಳಿಗೆ ಹೋಗಲು ಬೇರೆ ವ್ಯವಸ್ಥೆ ಮಾಡಬೇಕಾಗುತ್ತದೆ.

ಬುಕ್‌ ಮಾಡಿದ ಕೂಡಲೇ ಸರ್ಕಾರ ವಿಧಿಸುವ ದರ ಪ್ರಕಟವಾಗುತ್ತದೆ. ಆದರೆ, ಇದಕ್ಕೆ ಈ ಸೇವೆ ಬಳಸಿದ್ದಕ್ಕೆ ಹತ್ತು ರೂ. ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.

Exit mobile version