ಬೆಂಗಳೂರು: ಜೂನ್ 19ರಂದು ಭಾರತ ಹಾಗೂ ದಕ್ಷಿಣ ಆಫ್ರಿಕ ನಡುವಿನ ಟಿ 20 ಸರಣಿಯ 5ನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ನೋಡಲು ಹೋಗುವವರಿಗೆ ಒಂದು ಸಿಹಿ ಸುದ್ದಿ. ಮ್ಯಾಚ್ ಮುಗಿದು ತಡವಾಗುತ್ತದೆ, ವಾಪಸ್ ಬರುವುದು ಹೇಗೆ ಎಂಬ ಆತಂಕವನ್ನು ಬೆಂಗಳೂರು ಮೆಟ್ರೊ ದೂರ ಮಾಡಿದೆ. ಬೆ೦ಗಳೂರು ಮೆಟ್ರೊ ರೈಲು ನಿಗಮವು ವಾಣಿಜ್ಯ ಸಂಚಾರವನ್ನು 2022 ಜೂನ್ 20ರ ಮುಂಜಾನೆಯವರೆಗೆ ವಿಸ್ತರಿಸಿದೆ.
ಬಹುಕಾಲದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರಿಯ ಟಿ20 ಪಂದ್ಯ ನಡೆಯುತ್ತಿದೆ. ಈ ಕಾರಣಕ್ಕೆ ಜನ ಈ ಪಂದ್ಯ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಈ ಪಂದ್ಯ ರಾತ್ರಿ 7 ಗಂಟೆಗೆ ಆರಂಭವಾಗಲಿದ್ದು, ಮುಗಿಯುವಾಗ ನಡುರಾತ್ರಿ ಆಗಬಹುದು. ಆ ಸಮಯದಲ್ಲಿ ಸಾರ್ವಜನಿಕರಿಗೆ ಸಂಚಾರ ಅನುಕೂಲವಾಗುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮವು ಜೂನ್ 19ರ ರಾತ್ರಿ 1 ಗಂಟೆವರೆಗೂ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.
ಬೈಯಪ್ಪನಹಳ್ಳಿ,-ಕೆಂಗೇರಿ, ನಾಗಸಂದ್ರ-ರೇಪ್ಮೆ ಸ೦ಸ್ಥೆ ನಿಲ್ದಾಣಗಳಿಂದ ಕೊನೆಯ ರೈಲು ಜೂನ್ 20ರ ಮುಂಜಾನೆ 1 ಗಂಟೆಗೆ ಹೊರಡಲಿದೆ. ಅಂದರೆ ಜೂನ್ 19ರ ರಾತ್ರಿ 1 ಗಂಟೆಗೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜಿಸ್ಟಿಕ್‌ನಿಂದ ಎಲ್ಲ ನಾಲ್ಕು ದಿಕ್ಕಿಗೆ ಮು೦ಜಾನೆ 1.30 ಗ೦ಟೆಗೆ ರೈಲುಗಳು ಹೊರಡಲಿದೆ. ನಡುರಾತ್ರಿ ಉಂಟಾಗುವ ಟ್ರಾಫಿಕ್ ಸಮಸ್ಯೆಯನ್ನು ತಡೆಯಲು ಹಾಗೂ ಸಾರ್ವಜನಿಕರಿಗೆ ಪ್ರಯಾಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸೌಲಭ್ಯವನ್ನು ನೀಡಲಾಗಿದೆ.
ಪೇಪರ್ ಟಿಕೆಟ್ ಖರೀದಿ ಕಡ್ಡಾಯ
ಬಿಎಂಆರ್‌ಸಿಎಲ್ ರಿಟರ್ನ್ ಜರ್ನಿ ಪೇಪರ್ ಟಿಕೆಟುಗಳನ್ನು ನೀಡಲಿದ್ದು, ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ 19ನೇ ಜೂನ್ 2022ರ ಮಧ್ಯಾಹ್ನ 3.00 ಗಂಟೆಯಿಂದ ಮಾರಾಟಕ್ಕೆ ಲಭ್ಯವಿರುತ್ತದೆ. ಇದರ ಬೆಲೆ ರೂ 50/- ಆಗಿರುತ್ತದೆ.
ಈ ಟಿಕೆಟ್ ಪಡೆದವರು ಜೂನ್ 19ರ ರಾತ್ರಿ 10:00 ಗಂಟೆಯ ನ೦ತರ ಹಾಗೂ ಜೂನ್ 20, 2022ರ ವಿಸ್ತೃತ ಅವಧಿಯಲ್ಲಿ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಬಹುದು. ಈ ಟಿಕೆಟ್ ಕೇವಲ ಒ೦ದು ಪ್ರಯಾಣಕ್ಕೆ ಮಾತ್ರ ಮಾನ್ಯವಾಗಿರುತ್ತದೆ.
ಯಾವುದೇ ಮೆಟ್ರೊ ರೈಲು ನಿಲ್ದಾಣದಿ೦ದ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣಕ್ಕೆ ಪ್ರಯಾಣಿಸಲು ಸ್ಮಾರ್ಟ್ ಕಾರ್ಡ್ ಹಾಗೂ ಟೋಕನ್ ಗಳನ್ನು ಬಳಸಬಹುದು. ಮ್ಯಾಚ್ ಮುಗಿದ ಬಳಿಕ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದಿಂದ ಉಳಿದ ಯಾವುದೇ ಮೆಟ್ರೊ ನಿಲ್ದಾಣಕ್ಕೆ ಪ್ರಯಾಣಿಸುವವರು ಪೇಪರ್ ಟಿಕೆಟ್ ಪಡೆಯುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: ಮನೆ ಬಾಗಿಲಿಗೆ ಮೆಟ್ರೋ : ಶೀಘ್ರವೇ ಓಡಾಡಲಿದೆ ನಿಯೋ ರೈಲು