Site icon Vistara News

Milk Price: ಜನರ ಬದುಕಿನೊಂದಿಗೆ ಕಾಂಗ್ರೆಸ್‌ ಸರ್ಕಾರ ಚೆಲ್ಲಾಟ; ಹಾಲಿನ ದರ ಏರಿಕೆಗೆ ವಿಜಯೇಂದ್ರ ಆಕ್ರೋಶ

Milk Price

ಬೆಂಗಳೂರು: ಬೆಲೆ ಏರಿಸುವುದರಲ್ಲಿ ನಿಸ್ಸೀಮತನಕ್ಕೆ ಹೆಸರಾಗುತ್ತಿರುವ ಕಾಂಗ್ರೆಸ್‌ ಸರ್ಕಾರ ಜನ ಸಾಮಾನ್ಯರ ಮನೆಯಲ್ಲಿ ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಹಾಲು ದರವನ್ನು (Milk Price) ಉಕ್ಕಿಸಲು ಮುಂದಾಗಿದೆ. ಈ ಮೂಲಕ ರಾಜ್ಯದ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಇತ್ತ ಬಡವರಿಗೂ ಉಪಕಾರಿಯಾಗಲಿಲ್ಲ, ಹೈನುಗಾರಿಕೆ ಹಾಗೂ ಪಶುಸಂಗೋಪನೆ ಅವಲಂಬಿಸಿರುವ ರೈತರ ಬದುಕೂ ಹಸನಾಗಿಸಲಿಲ್ಲ. ಇದೀಗ ನಂದಿನಿ ಹಾಲಿನ ದರ ಹೆಚ್ಚಿಸಿ ಸದ್ಯ ಲೀಟರ್ ಹಾಲಿಗೆ ಇರುವ 42 ರೂಪಾಯಿ ದರವನ್ನು 2 ರೂ. 10 ಪೈಸೆ ಹೆಚ್ಚಳ ಮಾಡಲಾಗಿದೆ.

ಈ ರಾಜ್ಯದ ಜನರ ಬದುಕಿನೊಂದಿಗೆ ಚೆಲ್ಲಾಟವಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಕಳೆದು ಕೊಂಡಿದೆ. ಈ ಜನವಿರೋಧಿ ಸರ್ಕಾರ ಕೆಳಗಿಳಿಸುವವರೆಗೂ ಬಿಜೆಪಿಯ ಜನಪರ ಹೋರಾಟ ನಿರಂತರ ಸಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Milk Price: ನಂದಿನಿ ಹಾಲು ದರ ಏರಿಕೆ ಶಾಕ್‌; ಅರ್ಧ ಲೀಟರ್‌ಗೂ ₹2, ಒಂದು ಲೀಟರ್‌ಗೂ ₹2 ಬೆಲೆ ಏರಿಕೆ!

ತುರ್ತು ಪರಿಸ್ಥಿತಿ ಹೇರಿಕೆಯ ವಾರ್ಷಿಕೋತ್ಸವ ಸಂಭ್ರಮಿಸಲು ದರ ಏರಿಕೆ: ಅಶೋಕ್‌ ಕಿಡಿ

Petrol Diesel Price

ಹಾಲಿನ ದರ ಹೆಚ್ಚಳಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ. ಎಕ್ಸ್‌ನಲ್ಲಿ ಬೆಲೆ ಏರಿಕೆ ವಿರುದ್ಧ ಟ್ವೀಟ್ ಮಾಡಿರುವ ಅವರು, ತುರ್ತು ಪರಿಸ್ಥಿತಿ ಹೇರಿಕೆಯ ವಾರ್ಷಿಕೋತ್ಸವ ಸಂಭ್ರಮಿಸಲು ಕಾಂಗ್ರೆಸ್ ಸರ್ಕಾರ ನಂದಿನಿ ಹಾಲಿನ ದರವನ್ನ ಲೀಟರ್ಗೆ ಎರಡು ರೂಪಾಯಿ ಹೆಚ್ಚಳ ಮಾಡಿ ವಿಕೃತ ಸಂತೋಷ ಅನುಭವಿಸುತ್ತಿದೆ.

ಸಿಎಂ ಸಿದ್ದರಾಮಯ್ಯನವರೇ, ತಾವು ಅಧಿಕಾರಕ್ಕೆ ಬಂದ ಮೇಲೆ ಕೇವಲ 13 ತಿಂಗಳಿನಲ್ಲಿ ಹಾಲಿನ ದರವನ್ನ ಎರಡು ಬಾರಿ ಹೆಚ್ಚಿಸಿದ್ದೀರಿ. ಕಳೆದ ವರ್ಷ ಆಗಸ್ಟ್ ನಲ್ಲಿ 3 ರೂಪಾಯಿ ಹೆಚ್ಚಳವಾಗಿದ್ದ ಹಾಲಿನ ಬೆಲೆ, ಈಗ ಮತ್ತೊಮ್ಮೆ 2 ರೂಪಾಯಿ ಹೆಚ್ಚಾಗಿದೆ. ರಾಜ್ಯದ ಬಡವರು, ಮಾಧ್ಯಮ ವರ್ಗದ ಜನ ಈಗಾಗಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಗಗನಕ್ಕೇರಿರುವ ತರಕಾರಿ ಬೆಲೆಗಳಿಂದ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ ಮತ್ತೊಮ್ಮೆ ಬಡವರ ಗಾಯದ ಮೇಲೆ ಬರೆ ಎಳೆದಿದ್ದೀರಿ. ನಿಮಗೆ ಬಡವರು, ಮಾಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಿರಿ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | CM Siddaramaiah: ಡಿಸಿಎಂ ವಿಚಾರದಲ್ಲಿ ಮತ್ತೆ ಒಡೆದುಹೋದ ಕಾಂಗ್ರೆಸ್‌; ಸಿದ್ದು- ಡಿಕೆಶಿ ಬಣದ ನಡುವೆ ಡಿಶುಂ ಡಿಶುಂ

ಜನ ತಾಳ್ಮೆ ಕಳೆದುಕೊಳ್ಳುವ ಮೊದಲು ಕುರ್ಚಿ ಬಿಟ್ಟು ತೊಲಗಿ

ಹಾಲಿನ ದರ ಹೆಚ್ಚಳಕ್ಕೆ ರಾಜ್ಯ ಬಿಜೆಪಿ ಖಂಡಿಸಿದೆ. ಹಾಲು ಉತ್ಪಾದಕರಿಗೆ ಹಾಲಾಹಲ ನೀಡಿದ್ದ ಕಾಂಗ್ರೆಸ್ ಸರ್ಕಾರ ಈಗ ಗ್ರಾಹಕರಿಗೆ ಅಕ್ಷರಶಃ ಬೆಲೆಯೇರಿಕೆಯ ವಿಷವುಣಿಸುತ್ತಿದೆ. ಹಾಲು ಉತ್ಪಾದಕರಿಗೆ ಸಬ್ಸಿಡಿ ನೀಡದೆ ಭಂಡತನ ತೋರಿದ ಕಾಂಗ್ರೆಸ್‌ ಸರ್ಕಾರ, ಇದೀಗ ಏಕಾಏಕಿ ಹಾಲಿನ ದರವನ್ನು ಪ್ರತಿ ಲೀ.ಗೆ ₹2.10 ಏರಿಸಿ ಗಾಯದ ಮೇಲೆ ಬರೆ ಎಳೆಯುತ್ತಿದೆ.

ಸಿಎಂ ಸಿದ್ದರಾಮಯ್ಯ ಅವರೇ, ಹಾಲು ಉತ್ಪಾದಕರಿಗೆ ₹1087 ಕೋಟಿ ಸಬ್ಸಿಡಿ ಹಣವನ್ನು ನೀಡದೆ ಬಾಕಿ ಉಳಿಸಿಕೊಂಡಿರುವ ನೀವು, ಈಗ ಗ್ರಾಹಕರಿಗೆ ಬೆಲೆಯೇರಿಕೆ ಶಿಕ್ಷೆ ನೀಡಿರುವುದು ಯಾವ ಪುರುಷಾರ್ಥಕ್ಕೆ..!! ನಿಮ್ಮದು ಕೇವಲ ರೈತ ವಿರೋಧಿ ಸರ್ಕಾರ ಮಾತ್ರವಲ್ಲ, ನಿಮ್ಮದು ಜನ ವಿರೋಧಿ ಸರ್ಕಾರವೂ ಹೌದು. ಬೆಲೆಯೇರಿಕೆಯನ್ನೇ ಬಂಡವಾಳವನ್ನಾಗಿಸಿಕೊಂಡಿರುವ ನೀವು ಆಳಲು ಯೋಗ್ಯರಲ್ಲ ಎಂಬುದಂತೂ ಸಾಬೀತಾಗಿದೆ, ಜನ ತಾಳ್ಮೆ ಕಳೆದುಕೊಳ್ಳುವ ಮೊದಲು ಕುರ್ಚಿ ಬಿಟ್ಟು ತೊಲಗಿ ಎಂದು ಆಗ್ರಹಿಸಿದೆ.

Exit mobile version