ಶಶಿಧರ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ.
ಪ್ರಮುಖ ತನಿಖಾ ಸಂಸ್ಥೆಗಳು ಗಣಿ ನಾಡಿಗೆ ಬಂದರೂ ಗಣಿಗಾರಿಕೆ ವಿಚಾರದಲ್ಲಿ ಎದ್ದಿದ್ದ ಅಂತಾರಾಜ್ಯ ಗಡಿವಿವಾದ ಈವರೆಗೂ ಇತ್ಯರ್ಥವಾಗಿಲ್ಲ. ಸರ್ವೆ ಮಾಡಿ, ಬೌಂಡರಿ ಗುರುತಿಸಿ ಎರಡು ರಾಜ್ಯದ ಗಡಿಯಲ್ಲಿ ಬಿ೧ನಲ್ಲಿ ಬರುವ ೭ ಗಣಿ ಗುತ್ತಿಗೆಗಳ ಪ್ರದೇಶಗಳ ಬೌಂಡರಿ ಗುರುತಿಸುವಂತೆ ಸಿಇಸಿ(ಕೇಂದ್ರ ಉನ್ನತಾಧಿಕಾರ ಸಮಿತಿ) ರಾಜ್ಯದ ಗಣಿ ಇಲಾಖೆಯ ಕಾರ್ಯದರ್ಶಿಗಳಿಗೆ ಡಿ. ೯ರಂದು ಪತ್ರ ಬರೆದಿದೆ. ಇದರಿಂದಾಗಿ ಕಳೆದ ೧೪ ವರ್ಷಗಳಿಂದ ಗಡಿ ಒತ್ತುವರಿ ಮಾಡಿ ಗಣಿಗಾರಿಕೆ ಮಾಡಿರುವ ಆರೋಪಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.
ಸಂಪೂರ್ಣವಾಗಿ ಪರಿಹಾರವಾಗದ ಗಡಿ ವಿವಾದ
ಆಂಧ್ರ ಪ್ರದೇಶದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಪಾಲುದಾರಿಕೆಯ ಓಬಳಾಪುರ ಮೈನಿಂಗ್ ಕಂಪನಿ (ಓಎಂಸಿ) ಸೇರಿದಂತೆ ಇತರ ಗಣಿ ಕಂಪನಿಗಳು ಕರ್ನಾಟಕದ ಗಡಿಯನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ಮಾಡಿದ್ದಾರೆಂಬ ಆರೋಪ ಇತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಉನ್ನತಾಧಿಕಾರ ಸಮಿತಿಯು ಸುಪ್ರೀಂಕೋರ್ಟ್ ಸೂಚನೆಯ ಮೇರೆಗೆ ಸರ್ವೆ ಆಫ್ ಇಂಡಿಯಾದ ಮೂಲಕ ಕರ್ನಾಟಕ, ಆಂಧ್ರ ಪ್ರದೇಶದ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸರ್ವೆಯ ಅಧಿಕಾರಿಗಳು ಜಂಟಿ ಸರ್ವೆ ಮಾಡಿದ್ದರು. ಈ ವರದಿಯಲ್ಲಿ ಯಾವುದೇ ಒತ್ತುವರಿ ಯಾಗಿಲ್ಲ ಎಂದು ಪ್ರಸ್ತಾಪಿಸಲಾಗಿತ್ತು. ಇದನ್ನು ಎರಡು ರಾಜ್ಯದವರು ಒಪ್ಪಿಕೊಂಡಿದ್ದರು ಎಂದು ಹೇಳಲಾಗಿತ್ತು. ಇದರಿಂದಾಗಿ ರೆಡ್ಡಿ ಒಡೆತನದ ಓಎಂಸಿ ಆರಂಭಕ್ಕೆ ಕಾಲ ಸನ್ನಿಹಿತವಾಗಿದೆ ಎಂಬ ಸುದ್ದಿಯು ಹರಡಿತ್ತು. ಈಗ ಸಿಇಸಿ ಪತ್ರದಿಂದ ಅಂತಾರಾಜ್ಯ ಗಡಿ ವಿಚಾರ ಇನ್ನು ಸಂಪೂರ್ಣವಾಗಿ ಪರಿಹಾರವಾಗಿಲ್ಲ ಎಂಬ ಸತ್ಯ ಬಹಿರಂಗವಾಗಿದೆ.
ಸರ್ವೆ ವರದಿಗೆ ಅಪಸ್ವರ ಎದ್ದಿತ್ತು
ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿಯಲ್ಲಿ ಮಾಡಿರುವ ಜಂಟಿ ಸರ್ವೆ ವರದಿಯು ಸರಿಯಾಗಿಲ್ಲ. ೧೮೯೬ ಕಾಂಟೂರ್ ನಕ್ಷೆಯನ್ನು ಬಳಸದೆ, ಕೇವಲ ೧೯೭೪ ಟೋಪಾಶೀಟ್ ಬಳಕೆ ಮಾಡಿ ಸರ್ವೆ ಮಾಡಿದ್ದಾರೆ, ಇದರಿಂದಾಗಿ ಅಂತರಾಜ್ಯ ಗಡಿ ಗುರುತಿಸುವಿಕೆ ಸರಿಯಾಗಿಲ್ಲವೆಂದು ಟಿಎನ್ಆರ್ ಮೈನ್ಸ್ ಟಪಾಲ್ ಗಣೇಶ್ ಆರೋಪ ಮಾಡಿದ್ದರು. ಇದಲ್ಲದೆ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠದಲ್ಲಿ ಈ ವಿಚಾರವಿದೆ, ಅಲ್ಲಿ ನಾವು ಅರ್ಜಿ ಸಲ್ಲಿಸಿಲ್ಲ, ನಮ್ಮ ಅರ್ಜಿಯು ತ್ರಿಸದಸ್ಯ ಪೀಠದಲ್ಲಿ ಈ ವಿಚಾರವಿದೆ, ಅಲ್ಲಿಂದಲೇ ಗಡಿ ವಿಚಾರಕ್ಕೆ ಸರ್ವೆಗೆ ಸಿಇಸಿ ರಾಜ್ಯ ಸರಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂಬುದು ಟಪಾಲ್ ಗಣೇಶ ಅವರ ಮಾತಾಗಿದೆ.
ಅಂದಿನ ಡಿಸಿ ಸರ್ವೆಯ ಮಾಹಿತಿ ಕೇಳಿದ್ದರು?
ಅಂದಿನ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ೨೦೨೦ರಲ್ಲಿ ಅಂತಾರಾಜ್ಯ ಗಡಿ ಸರ್ವೆಗೆ ಸಹಿ ಮಾಡುವ ಪೂರ್ವದಲ್ಲಿ ಸರ್ವೆ ಮಾಡಿದ ಅಧಿಕಾರಿಗಳಿಗೆ ಪತ್ರ ಬರೆದು, ಸರ್ವೆಯಲ್ಲಿ ಅನುಸರಿಸಿದ ನಿಯಮಗಳೇನು, ಯಾವ ನಕ್ಷೆಯನ್ನು ಬಳಸಿ ಸರ್ವೆ ಮಾಡಲಾಗಿದೆ, ಸರ್ವೆಯಲ್ಲಿ ಅನುಸರಿಸಿದ ವಿಧಾನಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರೆ ಪರಿಶೀಲಿಸುವುದಾಗಿ ತಿಳಿಸಿದ್ದರು. ಈ ಪತ್ರದ ಪ್ರತಿಯು ವಿಸ್ತಾರ ನ್ಯೂಸ್ಗೆ ಲಭ್ಯವಾಗಿದೆ.
ಸಿಇಸಿ ಪತ್ರದಲ್ಲಿ ಏನಿದೆ?
ಸುಪ್ರೀಂಕೋರ್ಟ್ ಅಂತಾರಾಜ್ಯ ಗಡಿಗೆ ಸಂಬಂಧಿಸಿದಂತೆ ಸೆ.೨೮, ೨೦೨೨ರಂದು ಎರಡು ರಾಜ್ಯದ ಗಡಿಗಳನ್ನು ಗುರುತಿಸುವುದಕ್ಕೆ ಸೂಚಿಸಿತ್ತು. ಈ ವಿಚಾರವು ಸಿಇಸಿ ಡಿ.೭ರಂದು ಸಭೆ ಮಾಡಿ, ಚರ್ಚೆ ನಡೆಸಿತ್ತು. ಈ ಬಗ್ಗೆ ರಾಜ್ಯ ಸರಕಾರದ ಗಣಿ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದು ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಅಂತಾರಾಜ್ಯ ಗಡಿಯಲ್ಲಿ ಸರ್ವೆ ಮಾಡಿ, ಗಡಿಯಲ್ಲಿ ಬರುವ ಏಳು ಗಣಿ ಗುತ್ತಿಗೆಗಳ ಗಣಿ ಪ್ರದೇಶಗಳ ನಕ್ಷೆಯನ್ನು ಸಿದ್ಧಪಡಿಸುವಂತೆ ಸಿಇಸಿಯ ಸದಸ್ಯ ಕಾರ್ಯದರ್ಶಿ ಅಮರನಾಥ್ ಶೆಟ್ಟಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಅಂತಾರಾಜ್ಯ ಗಡಿಯಲ್ಲಿ ಏಳು ಲೀಸ್‌ಗಳು ಯಾವುವು?
ಸಿಇಸಿ ಪತ್ರದಲ್ಲಿ ತಿಳಿಸಿರುವಂತೆ ಏಳು ಗಣಿ ಗುತ್ತಿಗೆಗಳಲ್ಲಿ ರಾಜ್ಯದ ಗಡಿಯಲ್ಲಿ ಬರುತ್ತವೆ. ಟಿಎನ್ಆರ್, ಎಂಬಿಟಿ, ಇನ್ಟ್ರೇಡರ್ಸ್ ಮತ್ತು ನಾಮರತ್ನಯ್ಯ, ವಿಜಿಯಂ ಮೈನ್ಸ್, ಸುಗ್ಗಲಮ್ಮ ಗುಡ್ಡ ಮೈನಿಂಗ್ ಕಂಪನಿ, ಮತ್ತು ಬಳ್ಳಾರಿ ಮೈನಿಂಗ್ ಕಾರ್ಪೋರೇಷನ್,ಸೇರಿದಂತೆ ಇತರ ಗಣಿ ಗುತ್ತಿಗೆಗಳು ಬರುತ್ತದೆ. ಇಲ್ಲಿ ಸರ್ವೆ ಮಾಡುವುದರಿಂದ ಅಂತಾ ರಾಜ್ಯ ಗಡಿವಿವಾದಕ್ಕೆ ಅಂತಿಮ ತೆರೆಕಾಣುವ ಸಾಧ್ಯತೆ ಇದೆ. ಸರ್ವೆಯಲ್ಲಿ ೧೮೯೬ರ ನಕ್ಷೆಯನ್ನು ಬಳಕೆ ಮಾಡಬೇಕು ಮತ್ತು ೧೮೮೭ರ ಟ್ರಾವರ್ಸ್ ಡಾಟಾದಲ್ಲಿನ ಅಂಶಗಳು ೧೮೯೬ ನಕ್ಷೆಯನ್ನು ಹೋಲುತ್ತವೆ, ಇದನ್ನು ಬಳಸಿದರೆ ಗಡಿ ಸಮಸ್ಯೆ ಪರಿಹಾರವಾಗುತ್ತದೆ ಎಂಬ ವಿಚಾರವು ಗಣಿಮಾಲೀಕರಲಿದೆ.
ಟಪಾಲ್ ಗಣೇಶ್ ಹೇಳುವುದೇನು?
ಗಡಿ ಭಾಗದಲ್ಲಿ ಗಣಿ ಗುತ್ತಿಗೆ ಸರ್ವೆಗೆ ಕೇಂದ್ರ ಉನ್ನತಾಧಿಕಾರ ಸಮಿತಿಯು ರಾಜ್ಯ ಸರಕಾರದ ಗಣಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸರ್ವೆಯಲ್ಲಿ ೧೮೯೬ ನಕ್ಷೆಯನ್ನು ಬಳಸಿ, ಗಡಿ ಗುರುತು ಮಾಡಿದರೆ ಗಡಿ ಒತ್ತುವರಿ ಮಾಡಿ ಗಣಿಗಾರಿಕೆ ಮಾಡಿರುವ ಆರೋಪದ ಸತ್ಯಾಂತ ಹೊರಬರಲಿದೆ. ಈ ಹಿಂದೆ ೧೯೭೪ ಟೋಪೊಶೀಟ್ ಬಳಕೆ ಮಾಡಿ ಸರ್ವೆ ವರದಿ ಸಿದ್ಧಪಡಿಸಿರುವುದು ಸರಿಯಲ್ಲ ಎಂದು ಟಿಎನ್ಆರ್ ಗಣಿ ಕಂಪನಿ ಮಾಲೀಕರಾದ ಟಪಾಲ್ ಗಣೇಶ್ ಹೇಳಿದ್ದಾರೆ.
ಇದನ್ನೂ ಓದಿ | ಗಣಿಗಾರಿಕೆಗೆ ಸುಪ್ರೀಂಕೋರ್ಟ್‌ನ ಶಾಪವಿಮೋಚನೆ; ಹಲವು ನಿರ್ಬಂಧಗಳ ತೆರವು