Site icon Vistara News

Mining menace : ಗಣಿಗಾರಿಕೆಯಿಂದ ದೇವರಿಗೂ ಸಂಕಷ್ಟ? ಐತಿಹಾಸಿಕ ಕುಮಾರಸ್ವಾಮಿ ದೇವಸ್ಥಾನ ಸುತ್ತ ಭೂಅಗೆತ ವಿರೋಧಿಸಿ ಪಿಐಎಲ್

Sandur kumaraswamy temple

#image_title

ಶಶಿಧರ ಮೇಟಿ, ವಿಸ್ತಾರ ನ್ಯೂಸ್‌, ಬಳ್ಳಾರಿ
ಗಣಿಗಾರಿಕೆಯಿಂದ ಜನರು ನಲುಗಿ (Mining menace) ಹೋಗಿದ್ದು ಆಯಿತು. ಇದೀಗ ದೇವರಿಗೂ ಸಂಕಷ್ಟ ಎದುರಾಗಿದೆ! ಇದು ಆಶ್ಚರ್ಯವಾದರೂ ಸತ್ಯ. ಸಂಡೂರಿನ ಬೆಟ್ಟ ಗುಡ್ಡಗಳ ಮಧ್ಯದಲ್ಲಿರುವ 8-10ನೇ ಶತಮಾನದ ಐತಿಹಾಸಿಕ ಮತ್ತು ಧಾರ್ಮಿಕ ಪ್ರಸಿದ್ಧ ಕುಮಾರಸ್ವಾಮಿ ದೇವಸ್ಥಾನ ಗಣಿಗಾರಿಕೆಯಿಂದ ಅಕ್ಷರಶಃ ಆತಂಕ ಎದುರಿಸುತ್ತಿದೆ. ಕೊನೆಗೆ ಸಾರ್ವಜನಿಕರೇ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿ, ದೇವಸ್ಥಾನದ ರಕ್ಷಣೆಗೆ ಮುಂದಾಗಿದ್ದಾರೆ.

ಜನರ ಭಾವನೆಗೆ ಬೆಲೆ ಕೊಡದ ಜನಪ್ರತಿನಿಧಿಗಳು

ಕೇಂದ್ರ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಕುಮಾರಸ್ವಾಮಿ ದೇವಸ್ಥಾನದ ಸುತ್ತಲೂ ಗಣಿಗಾರಿಕೆ ಪ್ರದೇಶವಿದೆ. ಅದಿರು ಹೊರತೆಗೆಯಲು ಬಳಸುವ ಸ್ಫೋಟಕ ವಸ್ತುಗಳಿಂದ ದೇವಸ್ಥಾನಕ್ಕೆ ಧಕ್ಕೆಯಾಗುತ್ತಿದೆ, ಈ ಕಾರಣದಿಂದಾಗಿ ಪರಿಸರ ವಾದಿಗಳು ಮತ್ತು ದೇವಸ್ಥಾನದ ಭಕ್ತರು, ಜನರು ಮೂರು ಪಕ್ಷಗಳ ಮುಖಂಡರಿಗೆ ಮತ್ತು ಮುಖ್ಯಮಂತ್ರಿಗಳಿಗೆ ದೇವಸ್ಥಾನದ ರಕ್ಷಣೆಗೆ ಮನವಿ ಮಾಡಿದರೂ, ಪ್ರಯೋಜನವಾಗದ ಹಿನ್ನೆಲೆಯಲ್ಲಿ ದೇವಸ್ಥಾನದ ರಕ್ಷಣೆಗೆ ಜನಸಂಗ್ರಾಮ ಪರಿಷತ್ತಿನ ಶ್ರೀಶೈಲ ಆಲ್ದಳ್ಳಿ, ಮೂಲಿಮನಿ ಈರಣ್ಣ ಸೇರಿದಂತೆ ಐದು ಜನರು ಪಿಐಎಲ್ ಮೂಲಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಕುಮಾರಸ್ವಾಮಿ ದೇವಸ್ಥಾನದ ವೈಭವ

2 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಕ್ಕೆ ಮನವಿ

ದೇವಸ್ಥಾನದ ಸುತ್ತಲಿನ 2 ಕಿ.ಮೀ.ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಬಾರದು, ಇದು ದೇವಸ್ಥಾನಕ್ಕೆ ಧಕ್ಕೆಯಾಗುವ ಜೊತೆಗೆ ಪರಿಸರ ಮತ್ತು ಪ್ರಾಣಿ ಸಂಕುಲ ನಾಶಕ್ಕೆ ಕಾರಣ ವಾಗುತ್ತಿದೆ. ಇಲ್ಲಿ ಶಿವನ ಮಗ ಕಾರ್ತಿಕೇಯದ ಮೊದಲ ವಾಸ ಪ್ರದೇಶ ಎಂಬ ನಂಬಿಕೆಯಿಂದಾಗಿ ಜನರಿಗೆ ದೇವಸ್ಥಾನದೊಂದಿಗೆ ಭಾವನಾತ್ಮಕ ನಂಟು ಇದೆ. ಐತಿಹಾಸಿಕ ದೇವಸ್ಥಾನ ಆಗಿರುವುದರಿಂದ ದೇವಸ್ಥಾನ ರಕ್ಷಣೆ ಮಾಡಬೇಕೆಂದು ಪಿಐಎಲ್‌ನ ಪ್ರಮುಖ ಮನವಿಯಾಗಿದೆ.

ಬೆಟ್ಟದ ಮೇಲಿರುವ ದೇವಸ್ಥಾನ

ನೋಟಿಸ್ ಜಾರಿ ಮಾಡಿದ ನ್ಯಾಯಾಲಯ

ಪಿಐಎಲ್‌ನಲ್ಲಿ ಸರಕಾರದ ಸಂಬಂಧಪಟ್ಟ ಇಲಾಖೆಗಳು, ಕೇಂದ್ರ ಪುರಾತತ್ವ ಇಲಾಖೆ ಮತ್ತು ದೇವಸ್ಥಾನದ ಸುತ್ತಮುತ್ತಲಿರುವ ಐದು ಗಣಿ ಕಂಪನಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವೀಕರಿಸಿ, ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿ, ನಾಲ್ಕು ವಾರಗಳ ಗಡುವು ನೀಡಿತ್ತು. ಇದೀಗ ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆಗೆ ಬರಲಿದೆ.

ದೇವಸ್ಥಾನದ ರಕ್ಷಣೆಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದಾರೆ ಸಾರ್ವಜನಿಕರು.

ಇದನ್ನೂ ಓದಿ : Stone Mining: ಹೊಸನಗರ ಮಾರಿಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ತಾತ್ಕಾಲಿಕ ಸ್ಥಗಿತಕ್ಕೆ ಆದೇಶ

Exit mobile version