Site icon Vistara News

Seperate state | ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಮೊಳಗಿಸಿದ ಆನಂದ್‌ ಸಿಂಗ್‌: ತೀವ್ರ ಪ್ರತಿರೋಧ

ಆನಂದ್‌ ಸಿಂಗ್

ವಿಜಯನಗರ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಸ್ಥಾಪನೆ (Seperate state) ಆಗಬೇಕು ಅನ್ನೋ ಕೂಗು ಇಂದು ನಿನ್ನೆಯದಲ್ಲ. ಅದರಲ್ಲೂ ಪ್ರಮುಖವಾಗಿ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದೆ ಎಂಬ ಕಾರಣಕ್ಕಾಗಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಕು ಎಂದು ಮಾಜಿ ಸಚಿವ ಉಮೇಶ್ ಕತ್ತಿ ಬೇರೆ ಬೇರೆ ಸಂದರ್ಭಗಳಲ್ಲಿ ಒತ್ತಾಯಿಸುತ್ತಿದ್ದರು. ಈಗ ಬಿಜೆಪಿ ಸರ್ಕಾರದ ಮತ್ತೊಬ್ಬ ಕ್ಯಾಬಿನೆಟ್ ಮಂತ್ರಿ ಆನಂದ್ ಸಿಂಗ್ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್‌ ಮುಗಿಬಿದ್ದಿದೆ.

ಗುರುವಾರ ವಿಜಯನಗರದಲ್ಲಿ ನಡೆದ ನೂತನ ಬಿಜೆಪಿ ಕಚೇರಿ ಭೂಮಿ ಪೂಜೆ ಕಾರ್ಯಕ್ರಮದ ವೇಳೆ ಮಾತನಾಡಿದ ಸಚಿವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆದ್ರೆ ವಿಜಯನಗರವೇ ಅದಕ್ಕೆ ರಾಜಧಾನಿ ಆಗಲಿದೆ ಎಂದು ಹೇಳಿದರು. ಇದು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗನ್ನು ಮತ್ತೆ ಮುನ್ನೆಲೆಗೆ ತಂದಂತೆ ಎಂದು ವ್ಯಾಖ್ಯಾನಿಸಲಾಗಿದೆ.

ಸಚಿವ ಆನಂದ್ ಸಿಂಗ್ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಆಗಬೇಕು ಅಂತ ಹೇಳಿದ ಸುದ್ದಿ ವೈರಲ್ ಆಗ್ತಿದ್ದಂತೆ ರಾಜ್ಯಾದ್ಯಂತ ಆನಂದ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತ ಆಗ್ತಿದೆ. ಚುನಾವಣೆ ಹೊತ್ತಿನಲ್ಲಿ ಜನರನ್ನ ಮಾನಸಿಕವಾಗಿ ತಮ್ಮತ್ತ ಸೆಳೆಯಲು ಬಿಜೆಪಿ ಕುತಂತ್ರ ನಡೆಸಿದೆ. ಉತ್ತರ ಕರ್ನಾಟಕದ ಜನರ ಬಿಜೆಪಿಯತ್ತ ಸೆಳೆಯಲು ಮಾಡ್ತಿರೋ ಗಿಮಿಕ್ ಅಷ್ಟೇ ಅಂತ ನಾನಾ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ.

ಜೊತೆಗೆ ಆನಂದ್ ಹೇಳಿಕೆ ರಾಜ್ಯದ ಹಲವು ಕಡೆ ವಿರೋಧ ಕೂಡಾ ವ್ಯಕ್ತವಾಗುತ್ತಿದ್ದು, ಸಿಎಂ ಬೊಮ್ಮಾಯಿ ಉತ್ತರ ಕೊಡಬೇಕು. ಈ ಕುಡಲೇ ಆನಂದ್ ಸಿಂಗ್ ರಾಜೀನಾಮೆ ಪಡೆಯಬೇಕು ಎಂದೆಲ್ಲ ಆಗ್ರಹಿಸಲಾಗಿದೆ.

ಕನ್ನಡ ಪರ ಸಂಘಟನೆಗಳ ಆಕ್ರೋಶ
ಪ್ರತ್ಯೇಕ ರಾಜ್ಯದ ಕೂಗು ಮೊಳಗಿಸಿದ ಸಚಿವ ಆನಂದ್‌ ಸಿಂಗ್‌ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಿವಿ ಹಿಂಡಿ ಬುದ್ಧಿ ಹೇಳಲಿ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಆಗ್ರಹಿಸಿದ್ದಾರೆ.
ʻʻಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬಗ್ಗೆ ಸಚಿವ ಆನಂದ್ ಸಿಂಗ್ ಹೇಳಿಕೆ ದುರದೃಷ್ಟಕರ. ಅವರಿಗೆ ಕರ್ನಾಟಕ ಏಕೀಕರಣದ ಕಲ್ಪನೆ ಇಲ್ಲ. ಹಂಚಿಹೋಗಿದ್ದ ಕರ್ನಾಟಕ ಪ್ರದೇಶ ಹೇಗೆ ಒಂದಾಯ್ತು ಎಂಬುದು ತಿಳಿದಿಲ್ಲ. 19ನೇ ಶತಮಾನದ ಆರಂಭದಿಂದ ನಮ್ಮ ಹಿರಿಯರು ಹೋರಾಟ ಮಾಡಿ 1956ರಲ್ಲಿ ಕನಸು ನನಸು ಮಾಡಿಕೊಂಡರು ಸಚಿವ ಆನಂದ ಸಿಂಗ್‌ನಂತವರಿಗೆ ಅದರ ಪರಿಕಲ್ಪನೆಯೇ ಇಲ್ಲʼʼ ಎಂದು ಚಂದರಗಿ ಹೇಳಿದ್ದಾರೆ.

ʻʻಈ ಹಿಂದೆ ದಿವಂಗತ ಉಮೇಶ್ ಕತ್ತಿ ಅವರಿಂದ ಸಾಕಷ್ಟು ವಾದ ವಿವಾದ ಆಗಿತ್ತು. ಅಖಂಡ ಕರ್ನಾಟಕ ಕಲ್ಪನೆ ಇದ್ದವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬಗ್ಗೆ ಮಾತನಾಡಲ್ಲ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡೋದಾದ್ರೆ ಸಚಿವ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟ ಮಾಡಿ. ಈ ವಿಷಯದಲ್ಲಿ ಹತ್ತು ಶಾಸಕರಾದರೂ ನಿಮಗೆ ಬೆಂಬಲ ಕೊಡ್ತಾರಾ ನೋಡೋಣ. ಅದೇ ವಿಚಾರದಲ್ಲಿ ಮತ್ತೊಮ್ಮೆ ಚುನಾವಣೆಗೆ ಆರಿಸಿ ಬನ್ನಿʼʼ ಎಂದು ಚಂದರಗಿ ಸವಾಲು ಹಾಕಿದ್ದಾರೆ.

ಇದನ್ನೂ ಓದಿ | Deepavali Gift | ಸ್ಥಳೀಯ ಜನಪ್ರತಿನಿಧಿಗಳಿಗೆ ಸಚಿವ ಆನಂದ್‌ ಸಿಂಗ್‌ ಗಿಫ್ಟ್‌: 1 ಲಕ್ಷ ರೂ. ನಗದು, ಅರ್ಧ ಕೆಜಿ ಬೆಳ್ಳಿ!


Exit mobile version