ಸುವರ್ಣ ಸೌಧ, ಬೆಳಗಾವಿ: ವಿಸ್ತಾರವಾಗುತ್ತಿರುವ ಅಡಕೆ ಬೆಳೆ ಪ್ರದೇಶವನ್ನು ಗಮನಿಸಿದರೆ ಎಂದಾದರೊಂದು ದಿನ ಬೆಲೆ ಕುಸಿದು ಬೀಳುವ ಆತಂಕವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ. ವಿಧಾನಸಭೆಯಲ್ಲಿ, ಅಡಕೆಗೆ ಬಾಧಿಸುತ್ತಿರುವ ಎಲೆ ಚುಕ್ಕೆ ರೋಗದ ನಿಯಂತ್ರಣದ ಬಗ್ಗೆ ನಡೆದ ಚರ್ಚೆಯ ವೇಳೆ ಈ ವಿಚಾರವನ್ನು ಪ್ರಸ್ತಾಪಿಸಿದರು.
ಅತಿಯಾಗಿ ಅಡಕೆ ಬೆಳೆಗಾರರನ್ನು ಬಾಧಿಸುತ್ತಿರುವ ಎಲೆ ಚುಕ್ಕೆ ರೋಗ ನಿಯಂತ್ರಣದ ಪರಿಶೀಲನೆಗಾಗಿ ಕೇಂದ್ರ ಸರ್ಕಾರದ ವಿಜ್ಞಾನಿಗಳ ತಂಡವು ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದ್ದು, ತ್ವರಿತವಾಗಿ ಔಷಧ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಾಸಕ ಉಮಾನಾಥ್ ಕೋಟ್ಯಾನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಎಲೆ ಚುಕ್ಕೆ ರೋಗಕ್ಕೆ ಅಡಿಕೆ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ತುತ್ತಾಗುತ್ತಿದ್ದು, ಇತ್ತೀಚಿಗೆ ಈ ರೋಗ ಗಾಳಿ ಮೂಲಕ ಹೆಚ್ಚಾಗಿ ಹರಡುತ್ತಿದೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿಗಳು ಇತ್ತೀಚೆಗೆ ಕೆಲ ಅಡಕೆ ತೋಟಗಳಿಗೆ ಭೇಟಿ ನೀಡಿದ್ದು, ರೋಗ ನಿಯಂತ್ರಣದೊಂದಿಗೆ ಬೆಳೆಗಾರರ ನೆರವಿಗೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ವಿಜ್ಞಾನಿಗಳು ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳನ್ನು ಮಾಡುತಿದ್ದಾರೆಂದರು.
ಈಗಾಗಲೇ ರೋಗಕ್ಕೆ ತುತ್ತಾಗಿರುವ ತೋಟಗಳಿಗೆ ಒಂದು ಸುತ್ತಿನ ಔಷಧಿ ಸಿಂಪಡಿಸಲಾಗಿದ್ದು, ಬೆಳೆ ನಷ್ಟ ಆಗಿರುವವರಿಗೆ ಪರಿಹಾರ ನೀಡಲು ಯೋಜಿಸಲಾಗುತ್ತಿದೆ ಎಂದರು. ಈ ರೋಗದ ಔಷಧ ಕಂಡುಹಿಡಿಯುವ ಸಲುವಾಗಿಯೇ ತೋಟಗಾರಿಕೆ ವಿವಿಗಳಿಗೆ ರೂ.4 ಕೋಟಿಯಷ್ಟು ಹಣ ಬಿಡುಗಡೆ ಮಾಡಲಾಗಿದೆ ಹಾಗೂ ಏಲಕ್ಕಿ, ಕಾಳುಮೆಣಸು ಬೆಳೆಗಾರರ ಸಲಕರಣೆಗಳ ಖರೀದಿಗೆ ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ. ಸಹಾಯಧನವು ಪರಿಶಿಷ್ಟ ಜಾತಿ, ಪಂಗಡಗಳಿಗೆ ಶೇ.90 ಇದ್ದು ಸಾಮಾನ್ಯ ವರ್ಗಗಳಿಗೆ ಶೇ.70 ಇದೆ ಎಂದರು. ಅಡಕೆ ಕೋಯುವ ದೋಟಿಗಳ ಬೆಲೆ ಜಾಸ್ತಿಯಿದ್ದು, ಅವುಗಳ ಖರೀದಿಗಾಗಿ ರೂ.30 ಸಾವಿರದಷ್ಟು ಸಬ್ಸಿಡಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅತಿಯಾದ ರಾಸಾಯನಿಕ ಬಳಕೆ ಪರಿಣಾಮವೇ?
ಸಚಿವರಾದ ಸಿ.ಟಿ. ರವಿಯವರು ಪ್ರತಿಕ್ರಿಯಿಸಿ, ಅಡಿಕೆ ತೋಟಗಳಿಗೆ ಅತಿಯಾದ ರಾಸಾಯನಿಕ ಬಳಕೆಯಿಂದ ರೋಗ ಉಲ್ಬಣಗೊಂಡಿದೆ ಎಂದು ಹೇಳಲಾಗುತ್ತಿದೆ, ಈ ಕುರಿತು ವಿಜ್ಞಾನಿಗಳು ಸಮಗ್ರ ಅಧ್ಯಯನ ಮಾಡಿ ಪರಿಹಾರ ಸೂಚಿಸಬೇಕು ಎಂದರು.
ಸಂಶೋಧನಾ ಸಂಸ್ಥೆಗಳು ಏನು ಮಾಡುತ್ತಿವೆ? ಪರಿಹಾರ ಕೊಟ್ಟರೆ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ, ವಿಜ್ಞಾನಿಗಳು ಮೂಲ ಸಮಸ್ಯೆ ಗುರುತಿಸಿ ಪರಿಹಾರ ಒದಗಿಸಬೇಕೆಂದು ಶಾಸಕರಾದ ರಮೇಶ್ ಕುಮಾರ್ ಅವರು ಅಭಿಪ್ರಾಯಪಟ್ಟರು. ಗೃಹ ಸಚಿವರಾದ ಆರಗ ಜ್ಞಾನೇಂದ್ರ ಉತ್ತರಿಸಿ ತೋಟಗಾರಿಕಾ ಸಚಿವರ ಸಭೆಯಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು. ಅಡಕೆ ಬೆಳೆ ಪ್ರದೇಶ ಏಕಾಏಕಿಯಾಗಿ ಹೆಚ್ಚುತ್ತಿದ್ದು, ಇದರಿಂದ ಮುಂದೆ ಬೆಲೆ ಕುಸಿತದ ಆತಂಕವಿದೆ ಎಂದರು.
ಇದನ್ನೂ ಓದಿ | Shimoga News | ಕೇಂದ್ರ ಸರ್ಕಾರದ ಆಮದು ನೀತಿಯಿಂದ ಅಡಕೆ ಧಾರಣೆ ಕುಸಿತ: ರಮೇಶ್ ಹೆಗ್ಡೆ ಆರೋಪ