ಬೆಳಗಾವಿ: 75ನೇ ಜನ್ಮದಿನ ಸಂಭ್ರಮದಲ್ಲಿರುವ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಘೋಷಿಸಬೇಕು, ಯಾವ ಕಾರಣಕ್ಕೆ ಜನ್ಮದಿನ ಸಂಭ್ರಮಾಚರಣೆ ಆಗುತ್ತಿದೆ ಗೊತ್ತಿಲ್ಲ, ಏನು ಕೊಡುಗೆ ಕೊಟ್ಟಿದ್ದಾರೆ ತಿಳಿಯದು ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ.
ನಗರದಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ, ಸಿದ್ದರಾಮಯ್ಯ ನೂರಕ್ಕೆ ನೂರು ರಿಟೈರ್‌ಮೆಂಟ್ ಪಡೆಯಬೇಕು, ಔಟ್‌ಡೇಟೆಡ್ ಮಾಡಲ್‌ಗಳು ಎಲ್ಲಾ ಆಯಿತು, ಏನೋ ಐದು ವರ್ಷ ಜನ ಇವರ ಭಾರ ಹೊತ್ತರು. ಏನಿದು ಇವರ ಮೋಜು ಮಸ್ತಿ ? ಯಾವ ಕಾರಣಕ್ಕೆ ಸಿದ್ದರಾಮೋತ್ಸವ ಆಚರಣೆ ಎಂದು ಕಿಡಿಕಾಡಿದರು.
ಯಾವ ಕಾರಣಕ್ಕೆ ಜನ್ಮದಿನ ಸಂಭ್ರಮಾಚರಣೆ ಆಗುತ್ತಿದೆ ಗೊತ್ತಿಲ್ಲ, ಅವರು ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಸಿದ್ದರಾಮಯ್ಯ ಸಿಎಂ ಹಿಂದೆ ಆಗಿಬಿಟ್ಟಿದ್ದಾರೆ, ಇನ್ನುಮುಂದೆ ಆಗಲ್ಲ. ಭಗವಂತ ಆಯುರಾರೋಗ್ಯ ಎಲ್ಲ ಕರುಣಿಸಲಿ ಎಂದು ಜನ್ಮದಿನಕ್ಕೆ ಹೃದಯಪೂರ್ವಕ ಶುಭಾಶಯಗಳು ಎಂದು ಕೋರುತ್ತಲೇ ಸಿದ್ದರಾಮೋತ್ಸವ ಅಪ್ರಸ್ತುತ, ಅವರು ನಿವೃತ್ತಿ ಘೋಷಣೆ ಮಾಡಲಿ ಹೇಳದರು.
ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡ ಪಕ್ಷ, ಪ್ರಸ್ತುತವಾದ ಪಕ್ಷ ಅಲ್ಲ. ಅದಕ್ಕೆ ವಿಚಾರ, ಧ್ಯೇಯೋದ್ದೇಶಗಳ ಸ್ಪಷ್ಟತೆ ಇಲ್ಲ, ಅಧಿಕಾರಕ್ಕಾಗಿ ಹಾತೊರೆಯುವಂತಹ ಕಾಂಗ್ರೆಸ್ ನಾಯಕರು ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡಲು ಮೂಲಪುರುಷರು, ಕಾರಣಕರ್ತರು ಎಂದ ಅವರು, ರಾಹುಲ್ ಗಾಂಧಿ ಒಗ್ಗಟ್ಟಿನ ಜಪ ವಿಚಾರ ಪ್ರತಿಕ್ರಿಯಿಸಿ, ಅವರ ಪಕ್ಷ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕಲ್ಲವೇ? ಅವರ ಪಕ್ಷ ಸಂಪೂರ್ಣ ನೆಲೆ, ವಿಶ್ವಾಸ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಕೆಲವೇ ವರ್ಷಗಳಲ್ಲಿ ಮ್ಯೂಸಿಯಂ ಸೇರಿಕೊಳ್ಳುತ್ತದೆ ಎಂದರು.
ಸಿದ್ದರಾಮಯ್ಯ, ಡಿಕೆಶಿ ಒಂದಾಗುತ್ತಾರಾ ಎಂಬ ಪ್ರಶ್ನೆಗೆ ಸ್ಪಂದಿಸಿ, ಯಾವ ತತ್ವ, ಯಾವ ಮೌಲ್ಯದ ಮೇಲೆ ಒಂದಾಗುತ್ತಾರೆ? ಎಲ್ಲರೂ ನಾನು ಸಿಎಂ ನಾನು ಸಿಎಂ ಎಂದು ಅರ್ಜಿ ಹಾಕುತ್ತಿದ್ದಾರೆ. ವಯಸ್ಸಾದವರು, ಯುವಕರು, ಮಧ್ಯಮ ವಯಸ್ಸಿನವರು ಅರ್ಜಿ ಹಾಕಿದ್ದಾರೆ. ಈಗಿನ ಕಾಲಕ್ಕೆ ಇವರೆಲ್ಲ ಸಂಪೂರ್ಣವಾಗಿ ಅಪ್ರಸ್ತುತ, ಸಿದ್ದರಾಮಯ್ಯ ಮಾರ್ಗದರ್ಶಿಗಳಾಗಿ ಆಶೀರ್ವಾದ ಮಾಡಿಕೊಂಡು ಇರಬೇಕು ಎಂದು ಹೇಳಿದರು.
ಇದನ್ನೂ ಓದಿ | ಸಿದ್ದರಾಮೋತ್ಸವ ವೇದಿಕೆಯಲ್ಲಿ ಸಾಮೂಹಿಕ ನಾಯಕತ್ವದ ಮಂತ್ರ ಪಠಿಸಿದ ಡಿ.ಕೆ ಶಿವಕುಮಾರ್