ಗದಗ: “ಲೋಕಾಯುಕ್ತ ನಿಶ್ಯಕ್ತಗೊಳಿಸಲು ಎಸಿಬಿ ಸೃಷ್ಟಿಸಿದ್ದೇ ಸಿದ್ದರಾಮಯ್ಯ. ಅವರ ಮೇಲಿನ ಭ್ರಷ್ಟಾಚಾರ ಆರೋಪದಿಂದ ರಕ್ಷಿಸಿಕೊಳ್ಳಲು ಎಸಿಬಿ ರಚನೆ ಮಾಡಿದ್ದಾರೆ. ಹಾಸಿಗೆ ದಿಂಬು ಖರೀದಿಯಲ್ಲೂ 100% ಭ್ರಷ್ಟಾಚಾರ ಎಸಗಿದ್ದಾರೆ” ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಆರೋಪಿಸಿದ್ದಾರೆ.
ಗದಗ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಬಿ.ಸಿ.ಪಾಟೀಲ್ ಭಾನುವಾರ ಗದಗ ಜಿಲ್ಲೆಯ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮಾತನಾಡಿದರು. ಬಿಜೆಪಿ ಸರಕಾರದ ಮೇಲೆ 40% ಭ್ರಷ್ಟಾಚಾರ ಆರೋಪ ಮಾಡಿರುವ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧವೂ ಬಿ.ಸಿ.ಪಾಟೀಲ್ ಕಿಡಿ ಕಾರಿದರು.
‘ಕೆಂಪಣ್ಣ’ ಒಬ್ಬ ಹುಚ್ಚ: ಬಿ.ಸಿ.ಪಾಟೀಲ
ʻʻಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವನೊಬ್ಬ ಹುಚ್ಚ. ಸಾಕ್ಷ್ಯಾಧಾರ ಇಲ್ಲದೇ ಕಳೆದೊಂದು ವರ್ಷದಿಂದ ಆರೋಪ ಮಾಡುತ್ತಿದ್ದಾರೆ. ಇದನ್ನು ಹುಚ್ಚುತನವಲ್ಲದೇ ಬೇರೇನು ಹೇಳಬೇಕು. ಅವನೊಬ್ಬ ಹುಚ್ಚ” ಎಂದರು. ಮೇಲಿಂದ ಮೇಲೆ ಹುಚ್ಚ ಎಂದು ಜರಿದರು.
ಕಾಂಗ್ರೆಸ್ ನಲ್ಲಿ ಉತ್ಸವಗಳೇ ನಡೆಯುತ್ತಿವೆ
ದಲಿತೋತ್ಸವ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್, “ಕಾಂಗ್ರೆಸ್ ನಲ್ಲಿ ಉತ್ಸವಗಳೇ ನಡೆಯುತ್ತಿವೆ. ಸಿದ್ರಾಮೋತ್ಸವ, ಡಿಕಶಿ ಉತ್ಸವ, ಜಮೀರ್ ಉತ್ಸವ, ಜಿ.ಪರಮೇಶ್ವರ ಉತ್ಸವಗಳೇ ನಡೆಯೋದು. ನಮ್ಮದು ಜನಸ್ಪಂದನ ಕಾರ್ಯಕ್ರಮʼʼ ಎಂದರು.
ಎಚ್.ಕೆ. ಪಾಟಿಲ್ ವಿರುದ್ಧ ಅಸಮಾಧಾನ
ತಾಲೂಕಿನ ಕುರ್ತುಕೋಟಿ ಗ್ರಾಮದ ಬೆಳೆ ಹಾನಿ ಪ್ರದೇಶಕ್ಕೆ ಬಿ.ಸಿ. ಪಾಟೀಲ್ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ಸ್ಥಳೀಯ ಶಾಸಕ ಎಚ್.ಕೆ. ಪಾಟೀಲ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಜರುಗಿದೆ. ಎಚ್.ಕೆ. ಪಾಟೀಲರು ಕಾಂಗ್ರೆಸ್ ಕಾರ್ಯಕರ್ತರ ಹೊಲಗಳಿಗಷ್ಟೇ ಭೇಟಿ ನೀಡುತ್ತಾರೆ ಎಂದು ನೋವು ತೋಡಿಕೊಂಡರು.
‘ಬಿ’ ಕೆಟಗಿರಿ ಪರಿಗಣಿಸಿ ಮಳೆಯಿಂದ ಹಾಳಾದ ಜಮೀನುಗಳನ್ನು ‘ಬಿ’ ಕೆಟಗರಿ ಎಂದು ಪರಿಗಣಿಸಿ. ‘ಸಿ’ ಕೆಟಗರಿಯಲ್ಲಿ ಕೇವಲ 50 ಸಾವಿರ ಪರಿಹಾರ ಮಾತ್ರ ಸಿಗುತ್ತದೆ ಎಂದು ರೈತರು ಅಳಲು ತೋಡಿಕೊಂಡರು.
ನಾನೇ ಪೊಲೀಸ್ ಗಿರಿ ಮಾಡ್ಬೇಕಾ?
ನೆರೆ ಪ್ರದೇಶಗಳ ಭೇಟಿ ವೇಳೆ ಟ್ರಾಫಿಕ್ ಕ್ಲೀಯರ್ ಮಾಡುವ ಮೂಲಕ ಸಚಿವ ಬಿಸಿ ಪಾಟೀಲ್ ಪೊಲೀಸರಂತೆಯೂ ಕೆಲಸ ಮಾಡಿದರು! “ನಾನೇ ಪೊಲೀಸ್ ಗಿರಿ ಮಾಡ್ಬೇಕುʼʼ ಎನ್ನುತ್ತ ಕಾರಿನಿಂದ ಕೆಳಗಿಳಿದ ಸಚಿವರು ಕಾರ್ಯಕರ್ತರ ಕಾರುಗಳ ಕ್ಲಿಯರ್ ಮಾಡಿಸಿದರು. “ಯಾರಪ್ಪ ಡ್ರೈವರ್, ಮೊದಲು ಕಾರು ತೆಗೆಯಿರಿʼʼ ಎನ್ನುತ್ತಲೇ ಕಾರಿಂದ ಇಳಿದರು. ಅಂತೂರು ಬೆಂತೂರು ಹೊರ ವಲಯದಲ್ಲಿ ನೆರೆ ಪ್ರದೇಶ ವೀಕ್ಷಣೆ ವೇಳೆ ಈ ಪ್ರಸಂಗ ಜರುಗಿತು.
ಸಚಿವರ ಕಾರಿಗೆ ಮುತ್ತಿಗೆ: ನಮ್ಮೂರಿಗೆ ಬನ್ನಿ ಎಂದು ಆಗ್ರಹ
ಗದಗ ಸಮೀಪದ ಕುರ್ತಕೋಟಿ ಗ್ರಾಮದ ವೀಕ್ಷಣೆ ಮಾಡಿ ತೆರಳುತ್ತಿದ್ದ ಸಚಿವ ಬಿ.ಸಿ. ಪಾಟೀಲ್ ಅವರ ಕಾರಿಗೆ ಅಂತೂರು-ಬೆಂತೂರು ಗ್ರಾಮಸ್ಥರು ಘೇರಾವ್ ಹಾಕಿ ತಮ್ಮೂರಿಗೆ ಕರೆದುಕೊಂಡ ಹೋದ ಪ್ರಸಂಗ ಜರುಗಿತು. ಸಚಿವ ಬಿಸಿ ಪಾಟೀಲ್ ಕಾರಿಗೆ ಮುತ್ತಿಗೆ ಹಾಕಿದ ಅಂತೂರು ಬೆಂತೂರು ಗ್ರಾಮಸ್ಥರು, ʻʻಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಮಧ್ಯದಲ್ಲೇ ಮರಳಿದರೆ ಹೇಗೆ? ನಮ್ಮೂರಿಗೂ ಬನ್ನಿʼʼ ಎಂದು ಪಟ್ಟು ಹಿಡಿದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಗ್ರಾಮಕ್ಕೆ ಸಚಿವರು ತೆರಳಿದರು.
- ಗದಗ ಜಿಲ್ಲೆಯಲ್ಲಿ ಮಳೆಗೆ 817 ಕೋಟಿ ಹಾನಿ, ಇಬ್ಬರೂ ಪೊಲೀಸರು ಸೇರಿ 7 ಸಾವು. SDRF ನಿಯಮದಂತೆ ಪರಿಹಾರ.
- ನೀರಿನಲ್ಲಿ ಕೊಚ್ಚಿ ಹೋಗಿ ಸಾವಿಗೀಡಾದ ಪೊಲೀಸರಿಗೆ ಒಟ್ಟು ತಲಾ 50 ಲಕ್ಷ ರೂ. ಪರಿಹಾರ. ಇಂದು 5 ಲಕ್ಷ ವಿತರಣೆ.
- 93 ಸಾವಿರ ಹೆಕ್ಟೇರ್ ಬೆಳೆ ನಾಶ. ಅದರಲ್ಲಿ 76 ಸಾವಿರ ಹೆಕ್ಟೇರ್ ಪ್ರದೇಶದ ಸಮೀಕ್ಷೆ, ಪರಿಹಾರ ತಂತ್ರಾಂಶದಲ್ಲಿ ಅಳವಡಿಕೆ
- ನಮ್ಮೂರಿಗೂ ಬನ್ನಿ ಎಂದು ಸಚಿವ ಬಿ.ಸಿ.ಪಾಟೀಲ ಕಾರಿಗೆ ಗ್ರಾಮಸ್ಥರ ಮುತ್ತಿಗೆ. ಗ್ರಾಮಸ್ಥರ ಮನವಿಗೆ ಸಚಿವರ ಸ್ಪಂದನೆ