ಬೆಂಗಳೂರು: ಬರಹಗಾರರು ಮತ್ತು ಪ್ರಕಾಶಕರ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ನಿಯೋಗದಿಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ (Madhu Bangarappa) ಅವರಿಗೆ ನಗರದಲ್ಲಿ ಮಂಗಳವಾರ ಮನವಿ ಸಲ್ಲಿಸಲಾಯಿತು.
ಈ ವೇಳೆ ಪ್ರತಿಕ್ರಿಯಿಸಿರುವ ಸಚಿವ ಮಧು ಬಂಗಾರಪ್ಪ, ಪ್ರಕಾಶನ ರಂಗ ಇತರ ರಾಜ್ಯಗಳಲ್ಲಿ ಉತ್ತಮ ಸ್ಥಿತಿಯಲ್ಲಿದ್ದು, ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ದುಸ್ಥಿತಿಯಲ್ಲಿದೆ. ಈ ಸಮಸ್ಯೆಗಳನ್ನು ನಾನು ಅಧ್ಯಯನ ಮಾಡಿ ಕ್ರಮೇಣ ಓದುವ ಸಂಸ್ಕೃತಿಯನ್ನು ಬಲಪಡಿಸುವ ಕ್ಷೇತ್ರದ ಸಮಸ್ಯೆಗಳಿಗೆ ಆದ್ಯತೆಯ ಮೇಲೆ ಪರಿಹಾರ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಮೂರು ವರ್ಷಗಳಿಂದ ಪುಸ್ತಕಗಳನ್ನು ಖರೀದಿಸಿಲ್ಲ
2020ರಿಂದ ಮೂರು ವರ್ಷಗಳು ಪುಸ್ತಕಗಳನ್ನು ಖರೀದಿಸಿಲ್ಲ. ಇದರಿಂದಾಗಿ ರಾಜ್ಯದ ಎಲ್ಲೆಡೆ ಹೊಸ ಕೃತಿಗಳಿಂದ ಓದುಗರು ವಂಚಿತರಾಗಿದ್ದಾರೆ. ಬಿಬಿಎಂಪಿ ಗ್ರಂಥಾಲಯ ಕರ ಎಂದು 450 ಕೋಟಿ ರೂಗಳನ್ನು ಸಂಗ್ರಹಿಸಿದೆ. ಇದನ್ನು ಸಂಬಂಧಿಸಿದ ಇಲಾಖೆಗೆ ಹಸ್ತಾಂತರಿಸಿಲ್ಲ. ಇದರಿಂದಾಗಿ ಪ್ರಕಾಶನ ಉದ್ಯಮ ಕಂಗಾಲಾಗಿದೆ ಎಂದು ಪ್ರಕಾಶಕರ ಸಂಘ ಸಚಿವರ ಗಮನಕ್ಕೆ ತಂದಿದೆ.
ಪುಸ್ತಕ ಪ್ರಕಟಣೆಯ ವೆಚ್ಚ ಇಂದು ಗಗನಕ್ಕೇರಿದೆ. ಆದರೆ ಸಗಟು ಖರೀದಿಯಲ್ಲಿ ಮಾತ್ರ ಹಳೆಯ ದರವನ್ನೇ ನಿಗದಿಪಡಿಸಿದ್ದಾರೆ. ಹೆಚ್ಚಿರುವ ಕಾಗದ, ಇಂಕ್, ಮುದ್ರಣ ಬೆಲೆ, ಜಿಎಸ್‌ಟಿಯಿಂದಾಗಿ ಪ್ರಕಾಶನ ರಂಗ ತತ್ತರಿಸಿದೆ. ಆದ್ದರಿಂದ ಒಂದು ಪುಟದ ಬೆಲೆಯನ್ನು ಇನ್ನೂ 40 ಪೈಸೆ ಹೆಚ್ಚಳ ಮಾಡಬೇಕು ಎಂದು ಸಂಘ ಮನವಿ ಮಾಡಿದೆ.
ಕನ್ನಡ ಪುಸ್ತಕಗಳನ್ನು ಖರೀದಿಸಲು ಈಗ ಮಂಡಿಸಲಿರುವ ಬಜೆಟ್‌ನಲ್ಲಿ 25 ಕೋಟಿ ರೂ.ಗಳನ್ನು ಮೀಸಲಿಡಬೇಕು ಎಂದು ಸಂಘ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ನಿಡಸಾಲೆ ಪುಟಸ್ವಾಮಯ್ಯ, ಕಾರ್ಯದರ್ಶಿ ಆರ್. ದೊಡ್ಡೇಗೌಡ, ಹಿರಿಯ ಪ್ರಕಾಶಕರಾದ ನಿತಿನ್ ಶಾ, ಜಿ.ಎನ್. ಮೋಹನ್, ಮಾನಸ, ಬಿ.ಕೆ. ಸುರೇಶ್, ನಿಡಸಾಲೆ ವಿಜಯ್ ನಿಯೋಗದಲ್ಲಿದ್ದರು.