ಬೆಂಗಳೂರು: ಲಂಚ ಪ್ರಕರಣದಲ್ಲಿ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮಾಡಾಳ್ ಸಿಕ್ಕಿಬಿದ್ದಿರುವುದು ರಾಜ್ಯ ಸರ್ಕಾರಕ್ಕೆ ಮುಜುಗರ ತರಿಸಿದೆ. ಈ ಬಗ್ಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಕೂಡ ಒಪ್ಪಿಕೊಂಡಿದ್ದು, ಮಾಡಾಳ್ ಲಂಚ ಪ್ರಕರಣದಿಂದ (Lokayukta Raid) ಸರ್ಕಾರ, ಪಕ್ಷಕ್ಕೆ ಮುಜುಗರ ಆಗಿದೆ ಎಂದು ಹೇಳಿದ್ದಾರೆ.
ಮಾಡಾಳ್ ಪುತ್ರನನ್ನು ಹುದ್ದೆಯಿಂದ ಅಮಾನತು ಮಾಡದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿ, ಲೋಕಾಯುಕ್ತರು ಅಮಾನತಿಗೆ ಶಿಫಾರಸು ಮಾಡಿದರೆ ಅಥವಾ 48 ಗಂಟೆಗೂ ಹೆಚ್ಚು ಬಂಧನದಲ್ಲಿದ್ದರೆ ಸರ್ಕಾರವು ಮಾಡಾಳ್ ವಿರೂಪಾಕ್ಷಪ್ಪ ಮಗನನ್ನು ಅಮಾನತು ಮಾಡಬಹುದು ಎಂದು ಹೇಳಿದ್ದಾರೆ.
ಶಾಸಕ ಕೋರ್ಟ್‌ಗೆ ಗುರುವಾರ ಹಾಜರಾಗಬೇಕಿದೆ
ಲಂಚ ಸ್ವೀಕಾರ ಆರೋಪದಲ್ಲಿ ಕಳೆದ ವಾರ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ನಾಪತ್ತೆಯಾಗಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾರ್ಚ್ 7ರಂದು ಕೋರ್ಟ್‌ನಲ್ಲಿ ಜಾಮೀನು ದೊರೆಯುತ್ತಿದ್ದಂತೆಯೇ ಚನ್ನಗಿರಿಯಲ್ಲಿ ದೊಡ್ಡ ಮಟ್ಟದ ಮೆರವಣಿಗೆಯೊಂದಿಗೆ ಪ್ರತ್ಯಕ್ಷರಾಗಿದ್ದರು. ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆಯಾದರೂ 48 ಗಂಟೆ ಒಳಗೆ ಕೋರ್ಟ್ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಈ 48 ಗಂಟೆಗಳ ಅವಧಿ ಗುರುವಾರ (ಮಾ.9) ಮಧ್ಯಾಹ್ನದ ಹೊತ್ತಿಗೆ ಮುಕ್ತಾಯಗೊಳ್ಳಲಿದ್ದು, ಅದಕ್ಕೂ ಮುನ್ನ ಅವರು ಕೋರ್ಟ್‌ಗೆ ಹಾಜರಾಗಬೇಕಾಗಿದೆ.
ಇದನ್ನೂ ಓದಿ | Lokayukta Raid: ರೈತರ ಆದಾಯವನ್ನು ನೂರಾರು ಪಟ್ಟು ಹೆಚ್ಚಿಸಿದ ಪ್ರಧಾನಿಗೆ ಅಭಿನಂದನೆಗಳು: ಕಾಂಗ್ರೆಸ್ ಟ್ವೀಟ್
ಇತ್ತ ಕಳೆದ ಏಳೆಂಟು ದಿನಗಳಿಂದ ಜೈಲಿನಲ್ಲಿರುವ ಮಾಡಾಳ್ ಪುತ್ರ ಪ್ರಶಾಂತ್ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರಾದರೂ ತ್ವರಿತ ವಿಚಾರಣೆಗೆ ಕೋರ್ಟ್ ಒಪ್ಪಲಿಲ್ಲ. ಲೋಕಾಯುಕ್ತರಿಗೆ ಆಕ್ಷೇಪ ಸಲ್ಲಿಕೆಗೆ ಅವಕಾಶ ಕೊಟ್ಟು ಮುಂದಿನ ವಿಚಾರಣೆಯನ್ನು ಮಾರ್ಚ್ 13ಕ್ಕೆ ನಿಗದಿಪಡಿಸಲಾಗಿದೆ.