ಬೆಂಗಳೂರು: ಕರ್ನಾಟಕಕ್ಕೆ ಬಂಡವಾಳ ಆಕರ್ಷಿಸುವ ಉದ್ದೇಶದೊಂದಿಗೆ ಮುಂಬೈಗೆ ಎರಡು ದಿನಗಳ ಅಧಿಕೃತ ಭೇಟಿ ನೀಡಿರುವ ರಾಜ್ಯದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (MB Patil) ಅವರು, ಮಂಗಳವಾರ ಹಲವು ದೈತ್ಯ ಕಂಪನಿಗಳ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು.
ತಮ್ಮ ಪ್ರವಾಸದ ಮೊದಲ ದಿನದಂದು ಅವರು ಮಹೀಂದ್ರಾ, ಜಿಂದಾಲ್ ಸ್ಟೀಲ್ ವರ್ಕ್ಸ್ (ಜೆಎಸ್‌ಡಬ್ಲ್ಯು), ಟಾಟಾ, ಬ್ಲ್ಯಾಕ್ ಸ್ಟೋನ್ ಮತ್ತು ಆರ್‌ಪಿಜಿ ಗ್ರೂಪ್‌ನ ಪ್ರಮುಖರನ್ನು ಭೇಟಿ ಮಾಡಿ, ರಾಜ್ಯದಲ್ಲಿರುವ ಹೂಡಿಕೆಗೆ ಪೂರಕವಾದ ನೀತಿ, ಉತ್ತೇಜನ, ಪ್ರೋತ್ಸಾಹನಾ ಕ್ರಮಗಳು, ವಿಶೇಷ ರಿಯಾಯಿತಿಗಳು, ಸೌಲಭ್ಯಗಳೆಲ್ಲವನ್ನೂ ವಿವರಿಸಿದರು.
ಈ ಮಹತ್ವಾಕಾಂಕ್ಷಿ ಮಾತುಕತೆಯಲ್ಲಿ ಮಹೀಂದ್ರಾ ಸಮೂಹದ ಪರವಾಗಿ ಅದರ ಅಂಗಸಂಸ್ಥೆಗಳಾದ ಆಟೋ ಆ್ಯಂಡ್ ಫಾರಂ ವಿಭಾಗದ ಅಧ್ಯಕ್ಷ ವಿನೋದ್ ಸಹಾಯ್, ಜಿಂದಾಲ್ ಸಮೂಹದ ಅಧ್ಯಕ್ಷ ಸಜ್ಜನ್ ಜಿಂದಾಲ್ ಮತ್ತು ಪಾರ್ಥ ಜಿಂದಾಲ್, ಟಾಟಾ ಸಮೂಹದ ಮುಖ್ಯಸ್ಥ ಎನ್. ಚಂದ್ರಶೇಖರನ್, ಆರ್ ಪಿಜಿ ಸಮೂಹದ ಉಪಾಧ್ಯಕ್ಷ ಅನಂತ್ ಗೊಯೆಂಕ ಪಾಲ್ಗೊಂಡಿದ್ದರು. ಸಚಿವರು ಬುಧವಾರ ಕೂಡ ಬಿರ್ಲಾ ಮತ್ತು ರಿಲಯನ್ಸ್ ಉದ್ಯಮ ಸಮೂಹ ಸೇರಿದಂತೆ ಹಲವು ಕಂಪನಿಗಳ ಪ್ರಮುಖರನ್ನು ಭೇಟಿ ಮಾಡಲಿದ್ದಾರೆ.
ಇದನ್ನೂ ಓದಿ | Lakshmi Hebbalkar: ಸ್ಮೃತಿ ಇರಾನಿ ಭೇಟಿಯಾದ ಲಕ್ಷ್ಮೀ ಹೆಬ್ಬಾಳ್ಕರ್: ಅನುದಾನ ಬಿಡುಗಡೆಗೆ ಮನವಿ
ಸಚಿವ ಪಾಟೀಲ್‌ರು ಇತ್ತೀಚೆಗೆ ರಾಜ್ಯಕ್ಕೆ ಬಂಡವಾಳ ಆಕರ್ಷಿಸಬೇಕೆಂಬ ಉದ್ದೇಶದೊಂದಿಗೆ ಅಮೆರಿಕಕ್ಕೆ 12 ದಿನಗಳ ಭೇಟಿ ನೀಡಿ, 25ಕ್ಕೂ ಹೆಚ್ಚು ಕಂಪನಿಗಳ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದರು. ಈ ಉಪಕ್ರಮದಿಂದಾಗಿ ರಾಜ್ಯಕ್ಕೆ 25 ಸಾವಿರ ಕೋಟಿ ರೂ. ಮೊತ್ತದ ಹೂಡಿಕೆ ಖಾತ್ರಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಈ ಸಂದರ್ಭದಲ್ಲಿ ಉದ್ಯಮಿಗಳೊಂದಿಗೆ ಮಾತನಾಡಿದ ಅವರು, `ಕರ್ನಾಟಕವು ಅತ್ಯುತ್ತಮವಾದ ಕೈಗಾರಿಕಾ ನೀತಿಯನ್ನು ಹೊಂದಿದ್ದು, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ವಿದ್ಯುನ್ಮಾನ, ಸೆಮಿ ಕಂಡಕ್ಟರ್ ಉತ್ಪಾದನೆ, ಆರೋಗ್ಯ ಸೇವೆಗಳು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ, ಮಾನವ ಸಂಪನ್ಮೂಲ ಅಭಿವೃದ್ಧಿ, ನೈಸರ್ಗಿಕ ಸಂಪನ್ಮೂಲ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ವಿದೇಶಿ ನೇರ ಹೂಡಿಕೆ ಆಕರ್ಷಣೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ಸಂಶೋಧನೆ, ಆವಿಷ್ಕಾರ ಮತ್ತು ನಾವೀನ್ಯತೆ ಸೂಚ್ಯಂಕದಲ್ಲಿ ಕೂಡ ಗಮನಾರ್ಹ ಜಾಲವನ್ನು ಹೊಂದಿದೆ. ಹೀಗಾಗಿ, ಈಗಾಗಲೇ ರಾಜ್ಯದಲ್ಲಿ ಹೂಡಿಕೆ ಮಾಡಿರುವ ಕಂಪನಿಗಳು ಮತ್ತಷ್ಟು ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಬೇಕು’ ಎಂದು ಕೋರಿದರು.
ಅಲ್ಲದೆ, `ರಾಜ್ಯ ಸರ್ಕಾರವು ಬೆಂಗಳೂರಿನ ಸಮೀಪದಲ್ಲಿ ಅತ್ಯಾಧುನಿಕ ಮತ್ತು ವಿಶ್ವ ದರ್ಜೆಯ ಜ್ಞಾನ, ಆರೋಗ್ಯ, ಸಂಶೋಧನೆ ಮತ್ತು ನಾವೀನ್ಯ ಸಿಟಿ (ಕೆಎಚ್ಐಆರ್ ಸಿಟಿ)ಯನ್ನು 2,000 ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿಸುತ್ತಿದೆ. ಇದರ ಜತೆಯಲ್ಲೇ ಮೂಲಸೌಕರ್ಯ ಅಭಿವೃದ್ಧಿಗೂ ಆದ್ಯತೆ ಕೊಡುತ್ತಿದೆ. ಒಂಬತ್ತು ಉದ್ಯಮ ವಲಯಗಳನ್ನು ಗುರುತಿಸಿದ್ದು, ಅವುಗಳ ರಚನಾತ್ಮಕ ಅಭಿವೃದ್ಧಿಗೆ ವಿಷನ್ ಗ್ರೂಪ್ಸ್ ರಚಿಸಲಾಗಿದೆ’ ಎಂದು ಅವರು ವಿವರಿಸಿದರು.
ಬಿಯಾಂಡ್ ಬೆಂಗಳೂರು ಸೇರಿದಂತೆ ಹಲವು ಉಪಕ್ರಮಗಳ ಮೂಲಕ ರಾಜ್ಯದ ಎಲ್ಲ ಭಾಗಗಳಲ್ಲಿ ಕೈಗಾರಿಕಾ ಬೆಳವಣಿಗೆ ಆಗಬೇಕೆಂಬ ಗುರಿ ಇಟ್ಟುಕೊಂಡಿದೆ. ಜತೆಗೆ ಉದ್ಯಮಿಗಳಿಗೆ ಯಾವುದೇ ಅಡಚಣೆ ಇಲ್ಲದೆ ಏಕಗವಾಕ್ಷಿ ವಿಧಾನದಲ್ಲಿ ಅಗತ್ಯ ಅನುಮತಿಗಳನ್ನೆಲ್ಲ ನೀಡಲಾಗುತ್ತಿದೆ ಎಂದು ಅವರು ಮನದಟ್ಟು ಮಾಡಿಕೊಟ್ಟರು.
ಇದನ್ನೂ ಓದಿ | Christmas 2023: ಕ್ರಿಸ್‌ಮಸ್ ಹಬ್ಬಕ್ಕೆ 1000 ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್ ಸೇವೆ
ರಾಜ್ಯ ಸರ್ಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಇದ್ದರು.