Site icon Vistara News

MTB Nagaraj : ಹೊಸಕೋಟೆಯಲ್ಲಿ ಕವ್ವಾಲಿ ಆಯೋಜಿಸಿದ ಸಚಿವ ಎಂಟಿಬಿ; ಗಾಯಕರ ಮೇಲೆ ಹಣ ತೂರಿ ಖುಷಿಪಟ್ಟ ಮುಖಂಡರು

MTB Nagaraj

ಹೊಸಕೋಟೆ: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳ ನಾಯಕರು ಹಲವು ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ಹಿಂದುತ್ವ ಸಿದ್ಧಾಂತದ ಹಿನ್ನೆಲೆ ಹೊಂದಿರುವ ಬಿಜೆಪಿ ಪಕ್ಷದ ಸಚಿವ ಎಂಟಿಬಿ ನಾಗರಾಜ್ (MTB Nagaraj) ಕವ್ವಾಲಿ ಕಾರ್ಯಕ್ರಮ ಆಯೋಜನೆ ಮಾಡಿ, ಸ್ವತಃ ಟೋಪಿ ಹಾಕಿಕೊಂಡು ಭಾಗವಹಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಜತೆಗೆ ಈ ಕಾರ್ಯಕ್ರಮದಲ್ಲಿ ಗಾಯಕರ ಮೇಲೆ ಹಣ ತೂರಿದ್ದೂ ಸಹ ವಿವಾದದ ಕೇಂದ್ರಬಿಂದುವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕ್ಷೇತ್ರದಲ್ಲಿ ಸಚಿವ ಎಂಟಿಬಿ ನಾಗರಾಜ್ ಮತ್ತು ಕಾಂಗ್ರೆಸ್‌ ಶಾಸಕ ಬಚ್ಚೇಗೌಡ ನಡುವೆ ರಾಜಕೀಯ ಕೆಸರೆರಚಾಟ ಜೋರಾಗಿದೆ. ಈ‌ ಬಾರಿ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಇಬ್ಬರು ನಾಯಕರೂ ಪಣತೊಟ್ಟಿದ್ದಾರೆ. ಹೀಗಾಗಿ‌ ನಗರದಲ್ಲಿ ಸಚಿವ ಎಂಟಿಬಿ ನಾಗರಾಜ್ ಪುತ್ರ ನಿತಿನ್ ಪುರುಷೋತ್ತಮ್ ಮಿಂಚಿನ ಸಂಚಾರ ನಡೆಸುತ್ತ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

ಅದೇ ರೀತಿ ಹೊಸಕೋಟೆಯಲ್ಲಿ ಸೋಮವಾರ ಮುಸ್ಲಿಂ ಸಮುದಾಯದ ಮುಖಂಡರ ಓಲೈಕೆಗಾಗಿ ಕವ್ವಾಲಿ ಕಾರ್ಯಕ್ರಮವನ್ನು ಸಚಿವ ಎಂಟಿಬಿ ನಾಗರಾಜ್ ಕಡೆಯವರು ಆಯೋಜಿಸಿದ್ದರು. ಜತೆಗೆ ಕಾರ್ಯಕ್ರಮಕ್ಕೆ ಪ್ರಸಿದ್ಧ ಕವ್ವಾಲಿ ಗಾಯಕರಾದ ಸಲ್ಮಾನ್ ಆಲಿ ಮತ್ತ ರೈಸ್ ಸಾಬ್ರಿಯನ್ನು ಕರೆಸಿ ಚೆನ್ನಬೈರೆಗೌಡ ಕ್ರೀಡಾಂಗಣದಲ್ಲಿ ಕವ್ವಾಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಸಚಿವ ಎಂಟಿಬಿ ನಾಗರಾಜ್ ಮತ್ತು ಪುತ್ರ ನಿತಿನ್ ಪುರುಷೋತ್ತಮ್ ಭಾಗಿಯಾಗಿದ್ದರು.

ಇದನ್ನೂ ಓದಿ | C.M. Ibrahim | ನಗರದಲ್ಲಿ ನಾಯಿ ರೂಂ ಎಸಿಗೆ ಕರೆಂಟ್‌ ಇದೆ; ರೈತರ ಪಂಪ್‌ಸೆಟ್‌ಗೆ ಇಲ್ಲ: ಸಿ.ಎಂ. ಇಬ್ರಾಹಿಂ ವಾಗ್ದಾಳಿ

ಕವ್ವಾಲಿ ಕಾರ್ಯಕ್ರಮಕ್ಕೆ ಪ್ರಸಿದ್ಧ ಕವ್ವಾಲಿ ಗಾಯಕರನ್ನು ಆಹ್ವಾನಿಸಿದ್ದ ಕಾರಣ ಸಾವಿರಾರು ಜನರು ಮಧ್ಯರಾತ್ರಿವರೆಗೂ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದರು. ಗಾಯಕ ಹಾಗೂ ಸಚಿವರ ಪುತ್ರ ನಿತಿನ್ ಪುರುಷೋತ್ತಮ್ ಮೇಲೆ ಮುಸ್ಲಿಂ ಮುಖಂಡರು ದುಡ್ಡಿನ ಮಳೆ‌‌‌ ಸುರಿಸಿ, ಹಣದಿಂದ ದೃಷ್ಟಿ ತೆಗೆದರು. ಇದು ವಿವಾದಕ್ಕೆ ಕಾರಣವಾಗಿದೆ.

ಕಾರ್ಯಕ್ರಮದ ಉದ್ದಕ್ಕೂ ಸಚಿವ ಎಂಟಿಬಿ ನಾಗರಾಜ್ ಮತ್ತು ಪುತ್ರ ನಿತಿನ್ ಪುರುಷೋತ್ತಮ್ ಟೋಪಿ ಧರಿಸಿಯೇ ಭಾಗಿಯಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದರೆ, ಇತ್ತ ಬಿಜೆಪಿ ಸಚಿವರೇ ಕವ್ವಾಲಿ ಕಾರ್ಯಕ್ರಮ ಆಯೋಜನೆ ಮಾಡುವುದರ ಜತೆಗೆ ಟೋಪಿ ಧರಿಸಿ ಭಾಗವಹಿಸಿರುವುದು ಎಷ್ಟರ ಮಟ್ಟಿಗೆ ಸರಿ? ಚುನಾವಣೆಗಾಗಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಹಲವರು ಪ್ರಶ್ನೆ ಮಾಡಿದ್ದು, ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿದೆ.

ಈ ಬಗ್ಗೆ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯಿಸಿ, ನಮಗೆ ಎಲ್ಲ ಜಾತಿ, ಜನಾಂಗದವರು ಒಂದೇ. ಅವರು ಕರೆದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಅವರ ಮೇಲೆ ನಾನು ದುಡ್ಡು ಹಾಕಿಲ್ಲ, ಅವರ ಅಭಿಮಾನಿಗಳು ಗಾಯಕನ ಮೇಲೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಅನುಮತಿ ನೀಡುವಲ್ಲಿ ರಾಜಕೀಯ ಆರೋಪ
ಹೊಸಕೋಟೆ ನಗರದ ಚೆನ್ನಬೈರೆಗೌಡ ಕ್ರೀಡಾಂಗಣದಲ್ಲಿ ನಡೆದ ಕವ್ವಾಲಿ ಕಾರ್ಯಕ್ರಮ ಮೊದಲಿಗೆ ನಗರದ ಈದ್ಗಾ ಮೈದಾನದಲ್ಲಿ ನಡೆಸಲು ತೀರ್ಮಾನಿಸಿ ಹಲವು ಸಿದ್ಧತೆ ಮಾಡಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದ್ದ ಬೆನ್ನಲ್ಲೆ ಕೆಲವರು ಜಾಗ ಮತ್ತು ಕಾರ್ಯಕ್ರಮ ರದ್ದು ಮಾಡಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ಹೀಗಾಗಿ ಕೆಲಕಾಲ ಗೊಂದಲದ ವಾತಾವರಣ ‌ನಿರ್ಮಾಣವಾಗಿ, ಕೊನೆ ಕ್ಷಣದಲ್ಲಿ ಚೆನ್ನಬೈರೆಗೌಡ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿರುವ ಸಚಿವ ಎಂಟಿಬಿ ನಾಗರಾಜ್ ಪುತ್ರ ನಿತಿನ್ ಪುರುಷೋತ್ತಮ್ಹ, ಹಲವರು ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದರೂ, ಅದ್ಭುತವಾಗಿ ಕಾರ್ಯಕ್ರಮ ನಡೆದಿದೆ. ಅಡ್ಡಿಪಡಿಸಿದವರಿಗೆ ಮುಂದೆ ಗೊತ್ತಾಗುತ್ತದೆ ಎಂದು ಪರೋಕ್ಷವಾಗಿ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ | Karnataka Election : ಬಿಜೆಪಿಯ 9 ಗ್ಯಾರಂಟಿ ಯೋಜನೆಗಳನ್ನು ಬಿಡುಗಡೆ ಮಾಡಿದ ಕಾಂಗ್ರೆಸ್‌ !

Exit mobile version