ವಿಜಯಪುರ: ಬಿಜೆಪಿಯಲ್ಲಿ ಯಾವುದೇ ರೀತಿಯ ಗುಂಪುಗಾರಿಕೆ ಇಲ್ಲ. ಇದೆ ಎನ್ನುವುದೆಲ್ಲ ಊಹಾಪೋಹ ಎಂದು ಸಚಿವ ಎಂಟಿಬಿ ನಾಗರಾಜು ಹೇಳಿದ್ದಾರೆ.
ನಗರದಲ್ಲಿ ಗುರುವಾರ ಮಾತನಾಡಿದ ಅವರು, ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಎಂಬುವುದು ಸತ್ಯಕ್ಕೆ ದೂರವಾದ ಮಾತು ಎಂದರಲ್ಲದೆ, ಪಕ್ಷದಲ್ಲಿ ವಲಸಿಗರ ವಿರುದ್ಧ ಯಾವುದೇ ಅಸಮಾಧಾನವಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ಒಂದೇ ಮನೆಯವರಂತೆ ಇದ್ದೇವೆ ಎಂದರು.
ಇದೇ ವೇಳೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರದ ಕುರಿತು ಪ್ರಸ್ತಾಪಿಸಿದ ಅವರು, ಯತ್ನಾಳ್ ಹಿರಿಯ ನಾಯಕರಾಗಿದ್ದಾರೆ. ಒಳ್ಳೆ ಶಾಸಕ, ಸಂಘಟನಾ ಚತುರ ಕೂಡ. ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಅವಕಾಶ ಸಿಗಬೇಕಾಗಿತ್ತು. ಮುಂದೆ ಸಚಿವ ಸಂಪುಟ ವಿಸ್ತರಣೆಯಾದರೆ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳುವರು ಎಂದರು.
ಈ ಹಿಂದೆ “ನಾನು ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದೆʼʼ ಎಂಬ ಹೇಳಿಕೆ ನೀಡಿದ್ದರ ಕುರಿತು ಸ್ಪಷ್ಟನೆ ನೀಡಿದ ಅವರು, ನಾನು ಆ ರೀತಿ ಹೇಳಿಲ್ಲ, ನೀವೇಕೆ ಪಕ್ಷ ಬಿಟ್ಟು ಹೋದ್ರಿ, ನಮ್ಮನ್ನು ಏಕೆ ಕೇಳಲಿಲ್ಲ ಎಂದು ಕಾರ್ಯಕರ್ತರು ಕೇಳಿದ್ದರು, ನಿಮ್ಮನ್ನೆಲ್ಲ ಕೇಳದೇ ಹೋಗಿದ್ದು ತಪ್ಪಾಯ್ತು ಎಂದು ಹೇಳಿದ್ದೆ ಎಂದು ಹೇಳಿದರು.
ಪಠ್ಯಕ್ರಮದಲ್ಲಿ ಹೆಡ್ಗೇವಾರ್ ಭಾಷಣ ಸೇರ್ಪಡೆ ಬಗ್ಗೆ ಪರ ವಿರೋಧ ಕುರಿತಂತೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಿಎಂ ಹಾಗೂ ಶಿಕ್ಷಣ ಸಚಿವರು ಅಂತಿಮ ತೀರ್ಮಾನಕೈಗೊಳ್ಳಲಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜು ತಿಳಿಸಿದರು.