Site icon Vistara News

Competitive Exam: ಒಂದೇ ದಿನ 3 ಸ್ಪರ್ಧಾತ್ಮಕ ಪರೀಕ್ಷೆ; ದಿನಾಂಕ ಬದಲಿಸುವಂತೆ ಪ್ರಿಯಾಂಕ್ ಖರ್ಗೆ ಮನವಿ

Minister Priyank kharge

ಬೆಂಗಳೂರು: ಒಂದೇ ದಿನ ಮೂರು ಸ್ಪರ್ಧಾತ್ಮಕ ಪರೀಕ್ಷೆ ನಿಗದಿಯಾಗಿರುವುದರಿಂದ ಅಭ್ಯರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಹೀಗಾಗಿ ಮೂರು ಪರೀಕ್ಷೆಗಳಿಗೆ (Competitive Exam) ಪ್ರತ್ಯೇಕ ದಿನಾಂಕ ನಿಗದಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಸಚಿವರು, ಕೆಪಿಎಸ್‌ಸಿ ಲೆಕ್ಕ ಪರಿಶೋಧನಾ ಇಲಾಖೆಯ ಲೆಕ್ಕ ಸಹಾಯಕರ 242 ಹುದ್ದೆ, ಸಹಕಾರ ಸಂಘಗಳ ನಿರೀಕ್ಷಕರ 47 ಹುದ್ದೆ ಹಾಗೂ ರಾಜ್ಯ ಪೊಲೀಸ್‌ ಇಲಾಖೆಯ 454 ಸಿವಿಲ್ ಕಾನ್‌ಸ್ಟೇಬಲ್‌ ಹುದ್ದೆಗಳ ನೇಮಕಾತಿ ಪರೀಕ್ಷೆ, ನವೆಂಬರ್‌ 5 ರಂದು ನಿಗದಿಯಾಗಿದೆ. ಇದರಿಂದ ಎರಡು ಮೂರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಪರೀಕ್ಷೆಗಾಗಿ ತಯಾರಿ ನಡೆಸಿರುವ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಅವರಿಗೆ ಅನುಕೂಲವಾಗಲು ಪರೀಕ್ಷೆ ದಿನಾಂಕವನ್ನು ಬದಲಿಸಬೇಕು ಎಂದು ಕೋರಿದ್ದಾರೆ.

ಇದನ್ನೂ ಓದಿ | RDWSD Recruitment 2023: ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯ 155 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಕಳೆದ 5 ವರ್ಷದಿಂದ ಹಲವಾರು ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯಾಗಿಲ್ಲ. ಆದ್ದರಿಂದ ಸಾವಿರಾರು ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಹಾಗೂ ವಯೋಮಿತಿಗೆ ತಕ್ಕಂತೆ ಸರಿಯಾಗಿ ಉದ್ಯೋಗ ಸಿಗದೇ ಈಗಾಗಲೇ ಅನ್ಯಾಯಕ್ಕೆ ಒಳಗಾಗಿದ್ದಾರೆ. ಈಗ ಒಂದೇ ದಿನ ಮೂರು ಪರೀಕ್ಷೆ ಇರುವುದರಿಂದ ಸರ್ಕಾರಿ ನೌಕರರಾಗಲು ವರ್ಷಗಟ್ಟಲೇ ತಯಾರಿ ನಡೆಸಿದ ಅಭ್ಯರ್ಥಿಗಳಿಗೆ ನಿರಾಸೆಯಾಗಿದೆ. ಪರೀಕ್ಷೆ ವೇಳಾಪಟ್ಟಿ ಬದಲಿಸುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಹೀಗಾಗಿ ಮೂರು ಪರೀಕ್ಷೆಗಳಿಗೆ ಪ್ರತ್ಯೇಕವಾಗಿ ದಿನಾಂಕ ನಿಗದಿ ಪಡಿಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸೂಚಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ನ. 19ರಂದು ಅನ್ನದಾತರ ಮಕ್ಕಳಿಗೆ ಉದ್ಯೋಗ ಮೇಳ

vokkaliga brigade job Fair

ಮೈಸೂರು: ಒಕ್ಕಲಿಗ ಯುವ ಬ್ರಿಗೇಡ್‌ ಹಾಗೂ ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ ವತಿಯಿಂದ ನವೆಂಬರ್‌ 19ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ʼಅನ್ನದಾತರ ಮಕ್ಕಳಿಗೆ ಉದ್ಯೋಗ ಮೇಳʼ (Job Fair) ವನ್ನು ನಗರದ ಹೆಬ್ಬಾಳ ಇಂಡಸ್ಟ್ರಿಯಲ್‌ ಎಸ್ಟೇಟ್‌ನ ಇನ್ಫೋಸಿಸ್‌ ಸಂಸ್ಥೆ ಹತ್ತಿರದ ಶ್ರೀ ಲಕ್ಷ್ಮೀಕಾಂತ ದೇವಸ್ಥಾನ ಆವರಣದ ಬಿಜಿಎಸ್‌ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭಾಭವನದಲ್ಲಿ ಆಯೋಜಿಸಲಾಗಿದೆ.

ರೈತ ಕುಟುಂಬಗಳ ನಿರುದ್ಯೋಗ ಯುವಕ, ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಲು, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದು ಸಂಪೂರ್ಣ ಉಚಿತವಾಗಿದ್ದು, ಪ್ರತಿ ಅಭ್ಯರ್ಥಿಯೂ 5 ಸಂಸ್ಥೆಗಳ ಸಂದರ್ಶನದಲ್ಲಿ ಭಾಗವಹಿಸಬಹುದು.

ಉದ್ಯೋಗ ಮೇಳದಲ್ಲಿ ಪ್ರಭೋದಿತ, ಮಹೀಂದ್ರಾ ಫೈನಾನ್ಸ್, ರಿಲಯನ್ಸ್‌ ಮಾರ್ಟ್‌, ಮ್ಯಾನ್‌ಪವರ್‌ ಗ್ರೂಪ್‌ ಸೇರಿ 50ಕ್ಕೂ ಕಂಪನಿಗಳು ಭಾಗವಹಿಸಲಿದ್ದು, 5000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಇವೆ. ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಹೆಸರು ನೋಂದಣಿ ಮಾಡಿಸಬೇಕು. ಹೆಚ್ಚಿನ ಮಾಹಿತಿಗಾಗಿ‌ ಮೋಹನ್: 9686564192, ರವಿಚಂದ್ರ: 9886943810, ಕಿರಣಕುಮಾರ: 8660569173 ಸಂಪರ್ಕಿಸಿ.

ಇದನ್ನೂ ಓದಿ | NIMHANS Recruitment 2023: ಖಾಲಿ ಇರುವ 161 ನರ್ಸಿಂಗ್‌ ಆಫೀಸರ್‌ ಹುದ್ದೆಗೆ ಅರ್ಜಿ ಸಲ್ಲಿಸಿ

ಎಸ್‌ಎಸ್‌ಎಲ್‌ಸಿ, ಪಿಯುಸಿ, ಯಾವುದೇ ಪದವಿ (ಪಾಸ್‌/ಫೇಲ್‌), ಐಟಿಐ, ಡಿಪ್ಲೊಮಾ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್‌, ಎನ್‌ಟಿಟಿ, ಟಿಸಿಎಚ್‌, ಬಿ.ಇಡಿ, ಎಂ.ಇಡಿ ಶಿಕ್ಷಣ ಪಡೆದ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮೇಳದಲ್ಲಿ ಭಾಗವಹಿಸಬಹುದು.

Exit mobile version