Site icon Vistara News

Minister Protest | ನೀರು ಬಿಡೋವರೆಗೂ ಕದಲಲ್ಲ ಎಂದ ಶ್ರೀರಾಮುಲು; ಸಿಎಂ, ಪಿಎಂ ವಿರುದ್ಧದ ಧರಣಿಯೇ ಎಂದ ಕಾಂಗ್ರೆಸ್‌!

bellary ramulu 3

ಬಳ್ಳಾರಿ: ತಾಲೂಕಿನ ಬಿಡಿ ಹಳ್ಳಿ ಬಳಿಯ ಎಲ್ಎಲ್‌ಸಿ ಕಾಲುವೆ ವಿಚಾರವಾಗಿ ಸರ್ಕಾರಿ ಆಡಳಿತ ಯಂತ್ರದ ನಿಧಾನಗತಿಗೆ ವಿರೋಧ ವ್ಯಕ್ತಪಡಿಸಿ (Minister Protest) ಸ್ಥಳದಲ್ಲೇ ಕುಳಿತಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ದುರಸ್ತಿ ಆಗುವವರೆಗೂ ಅಲ್ಲಿಂದ ಕದಲುವುದಿಲ್ಲ. ಕಳೆದ ೨೩ ದಿನಗಳಿಂದ ಕಾಲುವೆಗೆ ನೀರು ಹರಿಯುತ್ತಿಲ್ಲ. ಇಲ್ಲಿಂದ ನೀರು ಹೊರಗೆ ಹೋಗುವವರೆಗೆ ತಾವು ತೆರಳುವುದಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಇದಕ್ಕೀಗ ರಾಜಕೀಯ ಬಣ್ಣವೂ ದೊರೆತಿದ್ದು, ಡಬಲ್‌ ಎಂಜಿನ್‌ ಸರ್ಕಾರ ಹೊಂದಿರುವ ನೀವು ಈಗ ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ನೀರು ಬಿಟ್ಟ ಮೇಲೆಯೇ ಹೋಗೋದು
ನಾನಿಲ್ಲಿ ಜಿಲ್ಲಾ ಮಂತ್ರಿಯಾಗಿ ಬಂದಿದ್ದೇನೆ. ರಾಜಕಾರಣ ಮಾಡುತ್ತಿಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡುವ ಅಗತ್ಯವೂ ನನಗಿಲ್ಲ. ಕಳೆದ 23 ದಿನದಿಂದ ಕಾಲುವೆಗೆ ನೀರು ಬರುತ್ತಿಲ್ಲ ಎಂದು ಹೇಳಿರುವ ಶ್ರೀರಾಮುಲು, 1953ರಲ್ಲಿ ನಿರ್ಮಿಸಿದ ಸೇತುವೆ ಇದಾಗಿದೆ. ಈ ಬಾರಿ ಇತಿಹಾಸದಲ್ಲಿಯೇ ಅತಿ ಹೆಚ್ಚು ನೀರು ನದಿಯಲ್ಲಿ ಬಂದಿರುವುದರಿಂದ 10ನೇ ನಂಬರ್‌ನ ಪಿಲ್ಲರ್‌ಗೆ ಹಾನಿಯಾಗಿದೆ. 15ನೇ ನಂಬರ್‌ ಪಿಲ್ಲರ್‌ ನದಿಯಲ್ಲಿ ಕೊಚ್ಚಿ ಹೋಗಿದೆ. ನೂತನ ಸೇತುವೆಗೆ 400 ಕೋಟಿ ರೂಪಾಯಿ ಅನುದಾನ ಬೇಕು. ಶೇ. ೬0ರಷ್ಟು ಅನುದಾನವನ್ನು ಆಂಧ್ರ ಪ್ರದೇಶದ ಸರ್ಕಾರ ಕೊಡಬೇಕು. ಉಳಿದ ಶೇ. 40ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಕೊಡಬೇಕಿದೆ ಎಂದು ಮಾಹಿತಿ ನೀಡಿದರು.

ಈಗ ಕಾಲುವೆಗೆ ನೀರು ಹರಿಯದಿದ್ದರೆ ಎರಡೂ ರಾಜ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಎರಡು ರಾಜ್ಯದ 3 ಲಕ್ಷ ಎಕರೆ ಪ್ರದೇಶದ ಬೆಳೆಗಳು ಒಣಗುವ ಸಾಧ್ಯತೆ ಇದೆ. ಇನ್ನು ಮೂರು ದಿನದಲ್ಲಿ ನೀರು ಬಾರದಿದ್ದರೆ ಬೆಳೆ ಒಣಗುತ್ತದೆ. ಹೀಗಾಗಿ ಇಲ್ಲಿಂದ ನೀರು ಹರಿಯದ ವಿನಃ ನಾನು ಸ್ಥಳ ಬಿಟ್ಟು ಕದಲಲಾರೆ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.

ಇದನ್ನೂ ಓದಿ | ಪೆದ್ದ ನಾನಲ್ಲ, ಸಿದ್ದರಾಮಯ್ಯನೇ ಪೆದ್ದ: ದುಷ್ಟ ರಾಜಕಾರಣಿ, ಶಕುನಿ, ಸ್ವಾರ್ಥಿ ಎಂದೆಲ್ಲ ಬೈದ ಶ್ರೀರಾಮುಲು

ದುರಸ್ತಿ ಕಾಮಗಾರಿ ಪಕ್ಕದಲ್ಲಿಯೇ ವಾಸ್ತವ್ಯ
ಎಲ್ಎಲ್‌ಸಿ ಕಾಲುವೆ ದುರಸ್ತಿ ಹಿನ್ನೆಲೆಯಲ್ಲಿ ನೀರನ್ನು ಕಾಲುವೆಗೆ ಹರಿಯದಂತೆ ಬಂದ್‌ ಮಾಡಲಾಗಿತ್ತು. ಇದರಿಂದ ಲಕ್ಷಾಂತರ ಎಕರೆಯಲ್ಲಿನ ಬೆಳೆಗೆ ಹಾನಿಯಾಗುವ ಸಂಭವ ಇರುವುದರಿಂದ ನವೆಂಬರ್‌ ೧ರ ಮಂಗಳವಾರ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಸೀದಾ 12 ಗಂಟೆಗೆ ಕಾಮಗಾರಿ ಸ್ಥಳಕ್ಕೆ ಸಚಿವ ಶ್ರೀರಾಮುಲು ತೆರಳಿದ್ದರು. ಆದರೆ, ಕಾಮಗಾರಿ ತ್ವರಿತವಾಗಿ ಆಗುತ್ತಿಲ್ಲ ಎಂದು ಸಿಟ್ಟಾಗಿ ಅಲ್ಲಿಯೇ ವಾಸ್ತವ್ಯಕ್ಕೆ ಮುಂದಾದರು. ಎರಡು ಕ್ರೇನ್, 6 ಜೆಸಿಬಿ ಮತ್ತು 50 ಕಾರ್ಮಿಕರಿಂದ ರಾತ್ರಿಯೆಲ್ಲ ಕಾಮಗಾರಿ ನಡೆದಿದೆ. ಸಚಿವರೊಂದಿಗೆ ತಹಸೀಲ್ದಾರ್, ನೀರಾವರಿ ಇಲಾಖೆ ಅಧಿಕಾರಿಗಳ ಸಹಿತ ಸುಮಾರು 50ಕ್ಕೂ ಹೆಚ್ಚು ಮುಖಂಡರು ಮತ್ತು ರೈತರು ವಾಸ್ತವ್ಯ ಹೂಡಿದ್ದರು.

ಬೆಳಗ್ಗೆ ಎದ್ದ ಸಚಿವ ರಾಮುಲು ಬೆಳಗಿನ ನಿತ್ಯ ಕಾರ್ಯವನ್ನು ಅಲ್ಲಿಯೇ ಮುಗಿಸಿದರು. ಚಳಿಯಲ್ಲಿಯೇ ವೇದಾವತಿ ನದಿಯಲ್ಲಿ ಸ್ನಾನ ಮಾಡಿದರು. ನಂತರ ವಾಕ್ ಮಾಡುತ್ತಾ ಸುತ್ತಮುತ್ತಲು ಜಮೀನು ವೀಕ್ಷಣೆ ಮಾಡಿದರು.

ಬೆಳಗ್ಗೆ ೪ ಗಂಟೆಗೆ ಸ್ಥಳಕ್ಕಾಗಮಿಸಿದ ಶ್ರೀರಾಮುಲು
ಕಾಲುವೆ ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವವರೆಗೂ ಸ್ಥಳದಿಂದ ತೆರಳದಿರಲು ಶ್ರೀರಾಮುಲು ಪಟ್ಟು ಹಿಡಿದು ವಾಸ್ತವ್ಯ ಹೂಡಿದ್ದ ವಿಷಯ ತಿಳಿದ ಶಾಸಕ ನಾಗೇಂದ್ರ ಅವರು, ಬೆಳಗಿನ ಜಾವ ನಾಲ್ಕು ಗಂಟೆಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. 2-3 ದಿನಗಳ ಹಿಂದೆ ಕಾಮಗಾರಿ ಸ್ಥಳಕ್ಕೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಈ ಕ್ಷೇತ್ರದ ಮೇಲೆ ಶ್ರೀರಾಮುಲು ಸಹ ಕಣ್ಣಿಟ್ಟಿದ್ದಾರೆ. ಹೀಗಾಗಿ ಇಬ್ಬರೂ ಈ ಕಾಮಗಾರಿಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಸೇತುವೆಯ ಪಿಲ್ಲರ್ ಕುಸಿದು ಅ. 13ರಿಂದ ಕಾಲುವೆ ನೀರು ಬಂದಾಗಿತ್ತು.

ಇದನ್ನೂ ಓದಿ | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ ಇಬ್ಬರೂ ನರಿಗಳು; ಕುರಿಗಳ ಥರ ವೇಷ ಹಾಕ್ಕೊಂಡು ಬರ್ತಾರೆ ಅಷ್ಟೆ ಎಂದ ಶ್ರೀರಾಮುಲು

ವಾಣಿ‌‌ ವಿಲಾಸ ಸಾಗರದ ನೀರು ಮತ್ತು ಮಳೆಯಿಂದಾಗಿ ನದಿಗೆ ಹೆಚ್ಚಿನ ನೀರು ಹರಿದ‌ ಪರಿಣಾಮ 58 ಪಿಲ್ಲರ್‌ನಲ್ಲಿ 15ನೇ ನಂಬರ್‌ ಪಿಲ್ಲರ್ ಕೊಚ್ಚಿ‌ಹೋಗಿತ್ತು. ಈಗ ನೀರಿಲ್ಲದೆ ಮೋಕಾ, ಬೆಣಕಲ್ ಸೇರಿದಂತೆ ರಾಜ್ಯದ 13 ಹಳ್ಳಿಗಳಿಗೆ ನೀರು ಸರಬರಾಜಾಗಿಲ್ಲ. ಮೂರು ದಿನದ ಹಿಂದೆ ಭೇಟಿ ನೀಡಿ, ಅಧಿಕಾರಿಗಳಿಗೆ‌ ತ್ವರಿತ ಕಾಮಗಾರಿಗೆ ಸೂಚನೆ ನೀಡಿದ್ದೆ. ದುರಸ್ತಿಯ ನಂತರ ಹಂತ ಹಂತವಾಗಿ ನೀರು ಬಿಡಲಾಗುವುದು. ಈಗ ನೀರು ಬಿಡದಿದ್ದರೆ ರೈತರಿಗೆ ಸಾವಿರಾರು ಕೋಟಿ ರೂಪಾಯಿ ಹನಿಯಾಗಲಿದೆ. ನಿರ್ವಹಣೆಯಲ್ಲಿ ಸಮಸ್ಯೆಯಿಂದ ಹೀಗಾಗಿದೆ. ಇದರಲ್ಲಿ ರಾಜಕೀಯ ವಿಚಾರ ಇಲ್ಲ ಎಂದು ಶಾಸಕ ನಾಗೇಂದ್ರ ತಿಳಿಸಿದರು.

ರಾಜಕೀಯ ಬೇಡ- ನಾಗೇಂದ್ರ
ರೈತರ ಹಿತಕ್ಕಾಗಿ ಬಂದಿದ್ದೇವೆ. ಇಲ್ಲಿ ರಾಜಕೀಯ ಹುಡುಕಬೇಡಿ, ಕಾಂಗ್ರೆಸ್ ಪಕ್ಷವು ರೈತರೊಂದಿಗೆ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಶಕ್ತಿ ಬೇರೆ, ಅದಕ್ಕಾಗಿ ಬಂದಿದ್ದೇವೆ. ನೀರು ಬಿಡಿಸುವುದು ನಮ ಮೂಲ ಕರ್ತವ್ಯವಾಗಿದೆ. ಸ್ಥಳೀಯವಾಗಿ ಗುತ್ತಿಗೆದಾರರು ಮತ್ತು ಅಧಿಕಾರಿಗಳೊಂದಿಗೆ ಅ.28ರಂದು ನಾವು ಸಭೆ ನಡೆಸಿದ್ದೆವು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ‌ ಶಾಸಕ ಸೂರ್ಯನಾರಾಯಣ ರೆಡ್ಡಿ, ಆದೋನಿ ಶಾಸಕ ಸಾಯಿ ಪ್ರಸಾದ ರೆಡ್ಡಿ ಸೇರಿದಂತೆ ಇತರರು ಇದ್ದರು.

ಹೊಸ ಸೇತುವೆಗೆ ಆಂಧ್ರ ಸರ್ಕಾರ ಬದ್ಧ- ಗುಮ್ಮನೂರು ಜಯರಾಂ
ಹೊಸ ಸೇತುವೆ ನಿರ್ಮಾಣಕ್ಕೆ ಆಂಧ್ರ ಸರ್ಕಾರ ಬದ್ಧವಾಗಿದೆ. ನಮ್ಮ ಪಾಲಿನ ಅನುದಾನ ನೀಡಲು ನಾವು ಸಿದ್ಧವಿದ್ದೇವೆ. ನಮ್ಮ ಸರಕಾರ ರೈತರ ಪರವಾದ ನಿಲುವನ್ನು ತೆಗೆದು‌ಕೊಳ್ಳಲು ಸದಾ ಸಿದ್ಧವಿದೆ. ನಮ್ಮ ಸಿಎಂ ಜತೆಗೆ ಮಾತನಾಡಿ ಅನುದಾನ ಬಿಡುಗಡೆಗೆ ಮಾಡುತ್ತೇವೆ ಎಂದು ಆಂಧ್ರದ ಸಚಿವ ಗುಮ್ಮನೂರು ಜಯರಾಂ ಹೇಳಿದರು.

ಪ್ರತಿಭಟನೆ ಯಾರ ವಿರುದ್ಧ ಎಂದು ಕೇಳಿದ ಕಾಂಗ್ರೆಸ್‌
ಸಚಿವ ಶ್ರೀರಾಮುಲು ಧರಣಿ ನಡೆಸುತ್ತಿರುವ ಬಗ್ಗೆ ರಾಜ್ಯ ಕಾಂಗ್ರೆಸ್‌ ಟೀಕೆ ಮಾಡಿದ್ದು, ಇದು ಯಾರ ವಿರುದ್ಧ ಎಂದು ಪ್ರಶ್ನೆ ಮಾಡಿದೆ. ಈ ಕುರಿತು ಟ್ವೀಟ್‌ ಮಾಡಿರುವ ಕೆಪಿಸಿಸಿ, ಸಚಿವ ಶ್ರೀರಾಮುಲು ಅವರೇ ತಾವು ಧರಣಿ ನಡೆಸಿದ್ದು ಯಾರ ವಿರುದ್ಧ? ನಿಮ್ಮದೇ ಸರ್ಕಾರದ ವಿರುದ್ಧವೇ? ನಿಮ್ಮದೇ ಸಿಎಂ ವಿರುದ್ಧವೇ? ನಿಮ್ಮದೇ ಪ್ರಧಾನಿ ವಿರುದ್ಧವೇ? ಎಂದು ವ್ಯಂಗ್ಯ ಮಾಡಿದೆ.

ಕ್ಯಾಬಿನೆಟ್ ಸಚಿವರು ತಮ್ಮದೇ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸ್ಥಿತಿ ಒದಗಿದ್ದೇಕೆ? ತಮ್ಮ ಮಾತನ್ನು ಯಾರೂ ಕೇಳುತ್ತಿಲ್ಲವೇ? ಅಥವಾ ಇದು ಕೇವಲ ತಳ್ಳುವ ಸರ್ಕಾರವೇ? ಎಂದೂ ಸಹ ಕಾಂಗ್ರೆಸ್‌ ಪ್ರಶ್ನೆ ಮಾಡುವ ಮೂಲಕ ಸರ್ಕಾರದ ಕಾರ್ಯವೈಖರಿಯನ್ನು ಕಾಲೆಳೆದಿದೆ.

ಇದನ್ನೂ ಓದಿ | Election 2023 | ಬಿಜೆಪಿಯವರು ಕರೆದರೆ ಹೋಗಬೇಡಿ, ನಳಿನ್‌ ಕುಮಾರ್‌ ಕಟೀಲ್‌ ಒಬ್ಬ ಜೋಕರ್‌: ಸಿದ್ದರಾಮಯ್ಯ

Exit mobile version