ಉಡುಪಿ: ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಆರೋಪಿಗಳ ಬಂಧನವಾಗಿದ್ದು, ಮತ್ತಿಬ್ಬರು ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಘಟನೆಯ ಬಳಿಕ ಆರೋಪಿಗಳ ಪತ್ತೆಗೆ ಸರ್ಕಾರ ಕ್ಷಿಪ್ರವಾಗಿ ಕ್ರಮ ಕೈಗೊಂಡಿದೆ ಎಂದು ಸಚಿವ ಎಸ್.ಅಂಗಾರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಕರ್ನಾಟಕ ಮತ್ತು ಕೇರಳ ಗಡಿಭಾಗದಲ್ಲಿ 32 ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಪತ್ತೆಯಾದವರ ಆರೋಪಿಗಳ ಬಗ್ಗೆ ವಿವರ ನೀಡುತ್ತೇವೆ. ಕೇವಲ ಇಬ್ಬರಲ್ಲ ನಾಲ್ಕು ಜನರ ಪತ್ತೆ ಕಾರ್ಯ ನಡೆಯುತ್ತಿದೆ ಎಂದರು.
ಸಹಚರನ ಕೊಲೆಯಿಂದ ಸಹಜವಾಗಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಜು.25ರಂದು ನಾನು ದೆಹಲಿಗೆ ಹೋಗಿದ್ದೆ, 26ರಂದು ರಾತ್ರಿ ಘಟನೆ ನಡೆದಿದೆ. ಹೀಗಾಗಿ ಅಲ್ಲಿಂದ ಬೆಂಗಳೂರಿಗೆ ಬಂದು ಏನೇನು ಕ್ರಮ ಕೈಗೊಳ್ಳಬೇಕು ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇನೆ. ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದಾರೆ. ಮುಖ್ಯಮಂತ್ರಿ ಬೆಳ್ಳಾರೆಗೆ ಬಂದು ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರಿಂದ ಕಾರ್ಯಕರ್ತರು ಸಮಾಧಾನವಾಗಿದ್ದಾರೆ ಎಂದರು.
ವಾಸ್ತವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ. ಕೆಲವರು ರಾಜೀನಾಮೆ ಕೊಟ್ಟಿದ್ದಾರೆ, ಆದರೆ ರಾಜೀನಾಮೆ ಪರಿಹಾರವಲ್ಲ. ಹಂತಕರಿಗೆ ಸರಿಯಾದ ಶಿಕ್ಷೆ ಕೊಡುವುದೇ ಪರಿಹಾರ ಎಂದ ಅವರು, ಮಸೂದ್ ಮನೆಗೆ ಸಿಎಂ ಭೇಟಿ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ತಾರತಮ್ಯ ಮಾಡಿಲ್ಲ, ಮಸೂದ್ ವಿಚಾರದಲ್ಲಿ ಗಾಂಜಾ ಪ್ರಕರಣ ಇದೆ. ವೈಯಕ್ತಿಕ ಕಾರಣಕ್ಕೆ ಕೊಲೆ ಮಾಡಲಾಗಿದೆ. ಅದು ಪ್ರವೀಣ್ ರೀತಿಯ ಮರ್ಡರ್ ಅಲ್ಲ. ಮುಸ್ಲಿಂ, ಕ್ರಿಶ್ಚಿಯನ್, ಹಿಂದು ಎಂಬ ಭೇದ ಭಾವ ನಾವು ಮಾಡುವುದಿಲ್ಲ ಎಂದರು.
ಇದನ್ನೂ ಓದಿ | Praveen Nettaru | ಪ್ರವೀಣ್ ಹತ್ಯೆಗೆ ಬೆಂಗಳೂರು ಲಿಂಕ್, ಇಬ್ಬರು ಪೊಲೀಸ್ ವಶಕ್ಕೆ