Site icon Vistara News

Karnataka govt: ದೇವರಾಜ ಅರಸು ನಿಗಮದಲ್ಲಿ ಮಧ್ಯವರ್ತಿಗಳ ಹಾವಳಿ: ಫಲಾನುಭವಿಗಳ ಬಳಿಯೇ ಹೋಗುತ್ತಾರೆ ಹುಷಾರ್!

devaraj urs backward classes corporation

ಬೆಂಗಳೂರು: ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ನೀಡುವ ‘ಸ್ವಯಂ ಉದ್ಯೋಗ ವೈಯಕ್ತಿಕ ಸಾಲ’ ಯೋಜನೆಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕುವಂತೆ ಹಿಂದುಳಿದ ವರ್ಗಗಳ ಕಲ್ಯಾಣ (Karnataka govt) ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿ ಸೂಚನೆ ನೀಡಿದರು. ಪ್ರತಿ ಜಿಲ್ಲೆಯಲ್ಲಿ ನೇರ ಸಾಲ ಯೋಜನೆಗೆ ಮಧ್ಯವರ್ತಿಗಳು ಹುಟ್ಟುಕೊಂಡಿದ್ದಾರೆ. ಫಲಾನುಭವಿಗಳಿಗಿಂತ ಮೊದಲೇ ಮಧ್ಯವರ್ತಿಗಳು ಫಲಾನುಭವಿಗಳ ಬಳಿ ಹೋಗುತ್ತಾರೆ. ಈ ಮಧ್ಯವರ್ತಿಗಳ ಹಾವಳಿಗೆ ಮೊದಲು ಕಡಿವಾಣ ಹಾಕಬೇಕು. ನೇರ ಸಾಲದಲ್ಲಿ ನೀಡಲಾಗುವ 50 ಸಾವಿರ ರೂ. ಹಣವನ್ನು ಒಬ್ಬ ಫಲಾನುಭವಿಗೆ ನೀಡಿದರೂ ಆ ಹಣ ಫಲಾನುಭವಿಗೆ ನೇರ ಉಪಯೋಗಕ್ಕೆ ಬರಬೇಕು. ಈ ಯೋಜನೆಗೆ ಹೊಸ ರೂಪ ನೀಡಿ. ಕಂತಿನ ರೂಪದಲ್ಲಾದರೂ ಫಲಾನುಭವಿಗಳಿಗೆ ಹಣ ತಲುಪುವಂತೆ ಆಗಬೇಕು ಎಂದು ಹೇಳಿದರು.

ಇದನ್ನೂ ಓದಿ: Koppala News : ಸ್ಥಳೀಯವಾಗಿಯೇ ಅಕ್ಕಿ ಖರೀದಿಸಲು ಸಿಎಂ ಬಳಿ ಪ್ರಸ್ತಾಪ: ಸಚಿವ ಶಿವರಾಜ ತಂಗಡಗಿ

ರೈತರಿಗೆ ಅನುಕೂಲ ಮಾಡಿಕೊಡಿ: ಗಂಗಾ ಕಲ್ಯಾಣ ಯೋಜನೆಯಡಿ ಮೂರು ವರ್ಷದಲ್ಲಿ 19,862 ಕೊಳವೆ ಬಾವಿ ಕೊರೆಯಲು ಗುರಿ ಹಾಕಿಕೊಳ್ಳಲಾಗಿದ್ದು, ಕೇವಲ ಒಂದು ಸಾವಿರ ಕೊಳವೆ ಬಾವಿ ಕೊರೆದಿರುವುದಕ್ಕೆ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗಂಗಾ ಕಲ್ಯಾಣ ಯೋಜನೆಯಿಂದ ಸಾವಿರಾರು ರೈತರಿಗೆ ಉಪಯೋಗವಾಗಲಿದೆ. ಮೊದಲ ಹಂತದಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಆದ್ಯತೆ ನೀಡಿ, ಹಾಕಿಕೊಂಡಿರುವ ಯೋಜನೆಯಂತೆ ಕೊಳವೆ ಬಾವಿ ಕೊರೆದು ಪೂರ್ಣಗೊಳಿಸುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೆಲವೊಂದು ನಿಗಮಗಳು ಸ್ವಂತ ಕಟ್ಟಡ ಇಲ್ಲದೇ, ಖಾಸಗಿ ನಿವೇಶನಕ್ಕೆ ಲಕ್ಷಾಂತರ ರುಪಾಯಿ ಬಾಡಿಗೆ ಕಟ್ಟುವುದನ್ನು ಅಧಿಕಾರಿಗಳು ಸಚಿವರು ಗಮನಕ್ಕೆ ತಂದರು‌. ಇದರಿಂದ ಅಸಮಾಧಾನಗೊಂಡ ಸಚಿವ ಶಿವರಾಜ್ ತಂಗಡಗಿ, ಅನವಶ್ಯಕವಾಗಿ ಇಂತಹದ್ದಕ್ಕೆ ದುಂದು ವೆಚ್ಚ ಮಾಡುವುದು ಸರಿಯಲ್ಲ. ಸ್ವಂತ ಕಟ್ಟಡದಲ್ಲೇ ನಿಗಮಗಳಿಗೆ ಸ್ಥಳ ಒದಗಿಸಿ ಬಾಡಿಗೆಗೆ ಒದಗಿಸುವ ಇಂತಹ ಹಣವನ್ನು ಇತರ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವುದರಿಂದ ಉಪಯುಕ್ತವಾಗಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ತುಳಸಿ ಮದಿನೇನಿ, ಆಯುಕ್ತ ಕೆ.ದಯಾನಂದ್, ದೇವರಾಜ ಅರಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಾಂತರಾಜು, ಉಪ್ಪಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಕೆ.ಜಗದೀಶ್ ಕುಮಾರ್, ಅಧಿಕಾರಿಗಳಾದ ಮಧುಸೂದನ್ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Exit mobile version