ಬೆಂಗಳೂರು: ಬೆಂಗಳೂರಿನ ಮುದ್ದಿನ ಪಾಳ್ಯದ ಕಿಂಗ್ಸ್ ಕ್ಲಬ್‌ನಲ್ಲಿ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಹಾಗೂ ನಟ ಸೃಜನ್ ಲೋಕೇಶ್ ತಂಡದ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಸೋಮವಾರ (ಅ.೩೧) ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದರೂ ಈಗ ಏನೂ ನಡೆದೇ ಇಲ್ಲ ಎಂದು ಹೇಳಲಾಗುತ್ತಿದೆ.
ಮುದ್ದಿನ ಪಾಳ್ಯದ ಕಿಂಗ್ಸ್ ಕ್ಲಬ್‌ನಲ್ಲಿ ಅಪ್ಪು ಕಪ್‌ಗಾಗಿ ಬ್ಯಾಡ್ಮಿಂಟನ್ ಟೂರ್ನಮೆಂಟ್ ಅನ್ನು ಆಯೋಜನೆ ಮಾಡಲಾಗಿರುವ ಹಿನ್ನೆಲೆಯಲ್ಲಿ ನಿತ್ಯವೂ ಸೃಜನ್ ಲೋಕೇಶ್ ಟೀಮ್‌ನವರು ಅಭ್ಯಾಸಕ್ಕಾಗಿ ಕ್ಲಬ್‌ಗೆ ಬರುತ್ತಿದ್ದರು. ಅದರಂತೆ ಕಳೆದ ಸೋಮವಾರವೂ ಪ್ರಾಕ್ಟಿಸ್ ಮಾಡುತ್ತಿದ್ದಾಗ, ಅರುಣ್ ಸೋಮಣ್ಣ ತಂಡದವರು ಅದೇ ಕ್ಲಬ್‌ನಲ್ಲಿ ಪಾರ್ಟಿ ಮಾಡಿ ಜೋರಾಗಿ ಮಾತನಾಡುತ್ತಾ ದಾಂಧಲೆ ಎಬ್ಬಿಸಿದ್ದಾರೆಂದು ಹೇಳಲಾಗಿದೆ.
ಈ ವೇಳೆ ಅಭ್ಯಾಸ ನಿರತರಾಗಿದ್ದ ಸೃಜನ್ ತಂಡದವರು ತಮಗೆ ಅಡಚಣೆಯಾಗುತ್ತಿದೆ ಎಂದು ಕಾರಣ ನೀಡಿ, ಅರುಣ್ ಸೋಮಣ್ಣ ಅವರನ್ನು ಪ್ರಶ್ನಿಸಿದ್ದರು. ಈ ವೇಳೆ ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ಎರಡೂ ತಂಡದವರು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಆಗ ಮಧ್ಯಪ್ರವೇಶ ಮಾಡಿದ ಕಿಂಗ್ಸ್ ಕೋರ್ಟ್‌ನ ಮ್ಯಾನೇಜ್ಮೆಂಟ್‌ನವರು ಅವರಿಬ್ಬರ ಜಗಳ ಬಿಡಿಸಿದ್ದಾರೆ ಎನ್ನಲಾಗಿದೆ. ಆ ಸಂದರ್ಭದಲ್ಲಿ ನಟ ಸೃಜನ್ ಲೋಕೇಶ್ ಕೂಡ ಇದ್ದರೆಂದು ಹೇಳಲಾಗಿದೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಲಾಟೆ ಮಾಡಿಕೊಂಡಿದ್ದ ಎರಡೂ ಗುಂಪು ಹಾಗೂ ಕಿಂಗ್ಸ್ ಕ್ಲಬ್‌ನ ಆಡಳಿತ ಮಂಡಳಿ ಸೇರಿ ಯಾರು ದೂರು ನೀಡಿಲ್ಲ ಎಂದು ತಿಳಿದು ಬಂದಿದೆ. ಜತೆಗೆ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾದ ಗಂಪು ಗಲಾಟೆಯ ದೃಶ್ಯವನ್ನೂ ಸಿಸಿಟಿವಿಯಿಂದ ಮ್ಯಾನೇಜ್ಮೆಂಟ್ ಡಿಲೀಟ್ ಮಾಡಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಇದನ್ನು ಆಡಳಿತ ಮಂಡಳಿಯವರು ನಿರಾಕರಿಸಿದ್ದಾರೆ.
ಗುಂಪು ಗಲಾಟೆಗೆ ಟ್ವಿಸ್ಟ್
ಬ್ಯಾಡ್ಮಿಂಟನ್ ಟೂರ್ನಮೆಂಟ್ ಅಭ್ಯಾಸದಲ್ಲಿ ನಿರತರಾಗಿದ್ದ ವಿಕಾಸ್ ಎಂಬುವವರು ಗಲಾಟೆಯೇ ನಡೆದಿಲ್ಲ ಎಂದು ಟ್ವಿಸ್ಟ್ ಕೊಟ್ಟಿದ್ದಾರೆ. ಇವರು ಅರುಣ್ ಸೋಮಣ್ಣ ಹಾಗೂ ಸೃಜನ್ ಇಬ್ಬರಿಗೂ ಪರಿಚಿತರಾಗಿದ್ದು, ಗಲಾಟೆ ನಡೆದಿದೆ ಎಂಬುದು ಸತ್ಯಕ್ಕೆ ದೂರ ಎಂದು ಹೇಳಿದ್ದಾರೆ. ಅಲ್ಲದೆ, ಅವರಿಬ್ಬರಿಗೂ ಪರಿಚಯವೇ ಇಲ್ಲ ಎಂದಿದ್ದಾರೆ.
ಗಲಾಟೆ ನಡೆದಿದೆ ಎನ್ನಲಾಗುತ್ತಿರುವ ದಿನ ಅರುಣ್ ಸೋಮಣ್ಣ ಸ್ಥಳದಲ್ಲಿಯೇ ಇರಲಿಲ್ಲ. ನಾವು ನಮ್ಮ ಪಾಡಿಗೆ ಅಪ್ಪು ಕಪ್‌ಗಾಗಿ ಪ್ರಾಕ್ಟೀಸ್ ಮಾಡುತ್ತಿದ್ದೆವು. ಆ ದಿನ ತಡರಾತ್ರಿ ಆಗಿತ್ತು. ಜತೆಗೆ ಮಳೆ ಬರುತ್ತಿದ್ದ ಕಾರಣಕ್ಕೆ ನಾನೇ ಅರುಣ್ ಅವರ ಪಿಎಗೆ ಕಾಲ್ ಮಾಡಿದ್ದೆ. ಅವರಿಂದ ಡ್ರಾಪ್ ಹಾಕಿಸಿಕೊಳ್ಳಲು ಕಾರು ಕೇಳಿದ್ದೆ. ನಮ್ಮ ಇತರೆ ಆಟಗಾರರಿಗೂ ಸೃಜನ್ ಅವರು ಮನೆಗೆ ಹೋಗಲು ವ್ಯವಸ್ಥೆ ಮಾಡಿಕೊಟ್ಟರು. ಅಲ್ಲಿ ಯಾವ ಗಲಾಟೆ ಆಗಿಲ್ಲ, ಹೇಗೆ ಈ ಸುದ್ದಿ ಹರಡಿದೆ ಎಂಬುದೇ ಗೊತ್ತಿಲ್ಲ ಎಂದು ವಿಕಾಸ್ ತಿಳಿಸಿದ್ದಾರೆ.
ಅರುಣ್ ಸೋಮಣ್ಣ ಬೆಳವಣಿಗೆ ಸಹಿಸದವರು ಹೀಗೆ ಮಾಡಿರಬಹುದು
ಅರುಣ್ ಸೋಮಣ್ಣ ಅವರ ರಾಜಕೀಯ ಬೆಳವಣಿಗೆ ನೋಡಲು ಆಗದೇ ಇರುವವರು ಹೀಗೆ ಮಾಡಿರಬಹುದು. ಯುವ ಮೊರ್ಚಾದಲ್ಲಿ ಅವರೊಟ್ಟಿಗೆ ನಾನು ಕೆಲಸ ಮಾಡಿಕೊಂಡು ಬಂದಿದ್ದೇನೆ. ವಿರೋಧ ಪಕ್ಷದವರ ಕೈವಾಡ ಇರಬೇಕು ಎಂದು ವಿಕಾಸ್ ಆರೋಪಿಸಿದ್ದಾರೆ.
ಇದನ್ನೂ ಓದಿ | Viral post | ವಿಮಾನದಲ್ಲಿ ಆತ ಆಕೆಯ ಚಿತ್ರ ಬಿಡಿಸಿದ, ಮುಂದೆ ನಡೆದದ್ದೇನು!