ಬೆಂಗಳೂರು: ಸರ್ಕಾರಿ ನೌಕರರ ಮುಷ್ಕರದ ಬೆನ್ನಲ್ಲೇ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ಮಾ.24ರಿಂದ ಮುಷ್ಕರಕ್ಕೆ (Transport Employees Strike) ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಅವರು, 4 ಸಾರಿಗೆ ನಿಗಮಗಳ ನೌಕರರ ಸಂಘ ಹಾಗೂ ಅಧಿಕಾರಿಗಳ ಸಭೆಯನ್ನು ಬುಧವಾರ ನಡೆಸಿದರು. ಮುಷ್ಕರ ಮಾಡುವ ಮುನ್ನವೇ ನೌಕರರ ಮನವೊಲಿಸಲು ಸರ್ಕಾರದ ಪ್ರಯತ್ನಿಸಿದೆ. ಆದರೆ, ಶೇ.25 ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಷ್ಕರ ಖಚಿತ ಎಂದು ಸಾರಿಗೆ ನೌಕರರ ಸಂಘ ಎಚ್ಚರಿಕೆ ನೀಡಿದೆ.
ವಿಧಾನಸೌಧದಲ್ಲಿ ನಾಲ್ಕು ನಿಗಮದ ಎಂಡಿಗಳು ಹಾಗೂ ಸಾರಿಗೆ ನೌಕರರ ಸಂಘದ ಪದಾಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸಚಿವ ಶ್ರೀರಾಮುಲು ಮಾತನಾಡಿ, ನಾಲ್ಕು ನಿಗಮಗಳ ಎಂಡಿಗಳು ಹಾಗೂ ನೌಕರರ ಸಂಘದ ಜತೆ ಸಭೆ ಮಾಡಿದ್ದೇನೆ. 2017ರಿಂದ ವೇತನ ಪರಿಷ್ಕರಣೆ ಆಗಿರಲಿಲ್ಲ, ಇದೆಲ್ಲ ತಿಳಿಸುವ ಪ್ರಯತ್ನ ಆಗಿದೆ. ಅವರ ಡಿಮ್ಯಾಂಡ್ ಏನಿದೆ ಅದನ್ನು ಮುಖ್ಯಮಂತ್ರಿಗಳಿಗೆ ತಿಳಿಸುತ್ತೇನೆ. ಸಮಸ್ಯೆಯನ್ನು ಇನ್ನೆರಡು ದಿನದಲ್ಲಿ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಭರವಸೆ ನೀಡಿದರು.
ನಮ್ಮ ಎಲ್ಲ ನಿಗಮಗಳಲ್ಲಿ ನೌಕರರಿಗೆ ಸಂಬಳ ನಿಲ್ಲದಂತೆ ನೋಡಿಕೊಂಡಿದ್ದೇವೆ. ಶೇಕಡ 24ರಷ್ಟು ವೇತನ ಪರಿಷ್ಕರಣೆಗೆ ಅವರು ಬೇಡಿಕೆ ಇಟ್ಟಿದ್ದಾರೆ. ಆದರೆ ನಮ್ಮ ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ, ಈ ಬಗ್ಗೆ ಸಭೆಯಲ್ಲಿ ವಿವರಣೆ ನೀಡಿದ್ದೇನೆ. ಇನ್ನು ಎರಡು ದಿನಗಳಲ್ಲಿ ಸಿಎಂ ಬೊಮ್ಮಾಯಿ ಜತೆ ಸಭೆ ನಡೆಸಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಸಾರಿಗೆ ನೌಕರರ ಸಂಘದ ಅಧ್ಯಕ್ಷ ಅನಂತ ಸುಬ್ಬರಾವ್ ಮಾತನಾಡಿ, ಸಭೆಯಲ್ಲಿ ಯಾವುದೇ ಒಮ್ಮತದ ತೀರ್ಮಾನವಾಗಿಲ್ಲ, ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಮುಖ್ಯವಾಗಿ ಶೇ.25 ವೇತನ ಹೆಚ್ಚಳದ ಬಗ್ಗೆ ಚರ್ಚೆ ಮಾಡಲಾಗಿದೆ. ಕಳೆದ ಹಲವು 8 ವರ್ಷದಿಂದ ವೇತನ ಹೆಚ್ಚಳ ಆಗಿರಲಿಲ್ಲ. ಸರ್ಕಾರ ಶೇ.10 ಮಾತ್ರ ಹೆಚ್ಚಳ ಮಾಡುವುದಾಗಿ ಹೇಳುತ್ತಿದೆ. ಸರ್ಕಾರಿ ನೌಕರರಿಗೆ ಶೇ.17 ವೇತನ ಹೆಚ್ಚಳ ಮಾಡಲಾಗಿದ್ದು, ನಮ್ಮ ಬೇಡಿಕೆ ಶೇ.25 ಆಗಿದೆ. ಈ ಬೇಡಿಕೆಯನ್ನು ಸಿಎಂ ಜತೆ ಚರ್ಚಿಸಿ ಮುಂದಿನ ತೀರ್ಮಾನದ ಬಗ್ಗೆ ತಿಳಿಸುವುದಾಗಿ ಸಚಿವ ಶ್ರೀರಾಮುಲು ಹೇಳಿರುವುದಾಗಿ ತಿಳಿಸಿದರು.
ಬಿಎಂಟಿಸಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಇಂದಿನ ಸಭೆ ಕೇವಲ ಚೌಕಾಸಿ ಮಾಡಲು ನಡೆದ ಸಭೆ ಅಷ್ಟೆ, ನಮ್ಮ ಬೇಡಿಕೆಗಳನ್ನು ಅಧಿಕಾರಿಗಳು ಒಪ್ಪಿಲ್ಲ. ಸರ್ಕಾರಿ ನೌಕರರು ಮುಷ್ಕರ ಮಾಡಿದರೆ ಬೇಡಿಕೆ ಈಡೇರಿಸುತ್ತಾರೆ, ಆದರೆ ಸಾರಿಗೆ ನೌಕರರಿಗೆ ಶೇ.7 ರಿಂದ 10 ಅಷ್ಟೇ ಪರಿಷ್ಕರಣೆ ಎನ್ನುತ್ತಿದ್ದಾರೆ, ಇದಕ್ಕೆ ನಮ್ಮ ಸಹಮತವಿಲ್ಲ. ಒಂದು ವೇಳೆ ವೇತನ ಪರಿಷ್ಕರಣೆ ಆಗದಿದ್ದಲ್ಲಿ ಮಾರ್ಚ್ 24ರಿಂದ ಸಾರಿಗೆ ನೌಕರರು ಮತ್ತೆ ಬೀದಿಗಿಳಿದು ಮುಷ್ಕರ ನಡೆಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರಿ ನೌಕರರಿಗೆ ಮಧ್ಯಂತರ ಆದೇಶ ಮಾಡಿ ವೇತನ ಪರಿಷ್ಕರಣೆ ಮಾಡಿದ್ದಾರೆ. ನಾವು ನಿರೀಕ್ಷೆ ಮಾಡುವುದು ಲಿಖಿತ ರೂಪದ ಭರವಸೆ, ಯಾವುದೇ ಕಾರಣಕ್ಕೂ ಕೊಟ್ಟ ಮಾತು ತಪ್ಪಬಾರದು. ಈ ಚೌಕಾಸಿ ವೇತನ ಪರಿಷ್ಕರಣೆ ನಮಗೆ ಬೇಕಾಗಿಲ್ಲ. 6ನೇ ವೇತನ ಆಯೋಗ ವರದಿ ಅನ್ವಯ ನಮಗೆ ವೇತನ ಜಾರಿ ಆಗಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | Cabinet Meeting: ರಾಜ್ಯ ಸಂಪುಟ ಸಭೆ; ನೌಕರರ ಶೇ.17 ವೇತನ ಏರಿಕೆ, ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಅನುದಾನಕ್ಕೆ ಅಸ್ತು
ಸಾರಿಗೆ ನೌಕರರ ಬೇಡಿಕೆಗಳೇನು?
- 6ನೇ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡುವಂತೆ ಆಗ್ರಹ
- ಮುಷ್ಕರದ ಸಮಯದಲ್ಲಿ ನೌಕರರ ವಜಾ, ಅಮಾನತು, ಪೋಲಿಸ್ ಕೇಸ್ ಹಿಂಪಡೆಯಬೇಕು
- ನೌಕರರ ಸಂಘಕ್ಕೆ 23 ವರ್ಷಗಳಿಂದ ಚುನಾವಣೆ ಆಗಿಲ್ಲ, ಚುನಾವಣೆ ನಡೆಸಬೇಕು
- ಈ ಬಾರಿ ಕಾರ್ಮಿಕ ಸಂಘಟನೆಗಳ ಚುನಾವಣೆ ಮಾಡಲು ಒತ್ತಾಯ
- ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ವಿರೋಧ
- ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣೆ, ಖಾಸಗೀಕರಣಕ್ಕೆ ಆಕ್ಷೇಪ
- ಹೊರಗುತ್ತಿಗೆ ಆಧಾರದ ಮೇಲೆ ನೌಕರರ ನೇಮಕಕ್ಕೆ ವಿರೋಧ