ವಿಜಯನಗರ: ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ನೀಡಲಾಗಿರುವ ಪ್ರಶಸ್ತಿ ಪತ್ರದಲ್ಲಿ ಸಚಿವ ಆನಂದ್ ಸಿಂಗ್ ಅವರ ಪುತ್ರನ ಫೋಟೊ ಹಾಕಿರುವುದು ವಿವಾದಕ್ಕೊಳಗಾಗಿದೆ. ಸರ್ಕಾರಿ ಶಾಲೆಯ ಈ ಕ್ರಮವನ್ನು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.
ಹೊಸಪೇಟೆ ತಾಲೂಕಿನ ಪಾಪನಾಯಕನ ಹಳ್ಳಿಯಲ್ಲಿ ವಿಜಯನಗರ ಜಿಲ್ಲಾ ಪಂಚಾಯಿತಿ, ಹೊಸಪೇಟೆ ತಾಲೂಕು ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಆ.5 ಹಾಗೂ 6ರಂದು 48ನೇ ವಲಯ ಮಟ್ಟದ ಕ್ರೀಡಾಕೂಟ ಆಯೋಜಿಸಿದ್ದವು. ಕ್ರೀಡೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಲಾಗಿತ್ತು. ಆದರೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡಿರುವ ಪ್ರಶಸ್ತಿ ಪತ್ರದಲ್ಲಿ ಸಿದ್ದಾರ್ಥ್ ಸಿಂಗ್ ಫೋಟೋ ಮುದ್ರಿಸಿ ಪ್ರದಾನ ಮಾಡಲಾಗಿದೆ. ಇದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಅಷ್ಟೇ ಅಲ್ಲದೇ ಕೊಡುಗೆ ಸಿದ್ದಾರ್ಥ್ ಸಿಂಗ್, ಯುವ ಮುಖಂಡರು, ವಿಜಯನಗರ ಜಿಲ್ಲೆ, ಹೊಸಪೇಟೆ ಎಂದು ಪ್ರಶಸ್ತಿ ಪತ್ರದಲ್ಲಿಯೇ ಮುದ್ರಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ | ಕಾಂಗ್ರೆಸ್‌ನ ಅಮೃತ ಮಹೋತ್ಸವ ಪಾದಯಾತ್ರೆಯಿಂದ ರಾಜಕೀಯ ಲಾಭ ಸಹಜ ಎಂದ ಸಿದ್ದರಾಮಯ್ಯ
ಸರ್ಕಾರಿ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ನೀಡಿದ ಪ್ರಶಸ್ತಿ ಪತ್ರದಲ್ಲಿಯೂ ರಾಜಕಾರಣಿಗಳ ಹೆಸರು ಮುದ್ರಿಸಿರುವುದು ಎಷ್ಟರ ಮಟ್ಟಿಗೆ ಸರಿ. ಫೋಟೊ ಮುದ್ರಿಸುವಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ಬರಲಿಲ್ಲವೇ? ಇಷ್ಟೆಲ್ಲ ಬೆಳವಣಿಗೆಗೆ ಕಾರಣರಾದವರ ಮೇಲೆ ಈ ಕೂಡಲೇ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಅಗ್ರಹಿಸಿದ್ದಾರೆ.
ತಪ್ಪು ಮಾಡಿದವರ ವಿರುದ್ಧ ಕ್ರಮ ಎಂದ ಕ್ಷೇತ್ರ ಶಿಕ್ಷಣಾಧಿಕಾರಿ
ಕ್ರೀಡಾಕೂಟದಲ್ಲಿ ನಾನೂ ಭಾಗವಹಿಸಿದ್ದೆ. ಆದರೆ ಬೇರೆ ಕಾರಣದಿಂದ ಮಧ್ಯದಲ್ಲೆ ಕಾರ್ಯಕ್ರಮ ಬಿಟ್ಟು ಹೊರಟುಬಿಟ್ಟೆ. ನಾನಿಲ್ಲದ ವೇಳೆ ಅಂದಿನ ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಏಕಾಏಕಿ ಬಂದು ಪ್ರಶಸ್ತಿ ಪತ್ರ ಪ್ರದಾನ ಮಾಡಿದ್ದಾರೆ. ಅಂದು ಅಚಾನಕ್ಕಾಗಿ ನಡೆದ ಘಟನೆ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಈ ಘಟನೆಗೆ ಕಾರಣರಾದ ದೈಹಿಕ ಶಿಕ್ಷಕರು ಹಾಗೂ ಸ್ಥಳೀಯ ಮುಖಂಡರ ಮೇಲೆ ಕ್ರಮ ಕೈಗೊಳ್ಳುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ | ಸ್ಲೋ ಮೋಷನ್ ಸರಕಾರ: ಸಚಿವ ಮಾಧುಸ್ವಾಮಿ ಹೇಳಿಕೆಗೆ ಲಕ್ಷ್ಮಣ ಸವದಿ ತೇಪೆ