Site icon Vistara News

Praveen Nettaru | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಎನ್‌ಐಎಗೆ ವಹಿಸಿ ಕೇಂದ್ರ ಗೃಹ ಇಲಾಖೆ ಆದೇಶ

Praveen Nettaru

ಬೆಂಗಳೂರು: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿ ಬೆಳ್ಳಾರೆ ನಿವಾಸಿ ಪ್ರವೀಣ್ ನೆಟ್ಟಾರು(Praveen Nettaru) ಹತ್ಯೆ ಪ್ರಕರಣದ ತನಿಖೆಯನ್ನು ವಹಿಸಿಕೊಳ್ಳಲು ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ದಳಕ್ಕೆ ಆದೇಶಿಸಿದೆ.

ಭಾರತ ಸರ್ಕಾರದ ಅಧೀನ ಕಾರ್ಯದರ್ಶಿ ವಿಪುಲ್ ಅಲೋಕ್ ಆಗಸ್ಟ್‌ 3 ರಂದು, ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕರಿಗೆ ಪತ್ರ ಬರೆದು ಆದೇಶಿಸಿದ್ದಾರೆ. ಭಾರತ ಸರ್ಕಾರದ ಗೃಹ ಸಚಿವಾಲಯವು ಈ ಅದೇಶವನ್ನು ಹೊರಡಿಸಿದ್ದು, ಅದರ ಪ್ರತಿಯನ್ನು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಡಿಜಿಪಿ ಕರ್ನಾಟಕ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.‌

ಇದನ್ನೂ ಓದಿ | ಕೇಕ್‌ ತಂದು ಕೊಟ್ಟು ಲಾಕ್‌ ಆದರು: ಇದು ಪ್ರವೀಣ್‌ ಕೊಲೆ ಆರೋಪಿಗಳ ಬಂಧನದ ರೋಚಕ ಸ್ಟೋರಿ

ಈ ಪ್ರಕರಣವು ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ-2008ರ ಅಡಿಯಲ್ಲಿ ಬರುವ ಅಪರಾಧ ಎಂಬ ಅಭಿಪ್ರಾಯಕ್ಕೆ ಕೇಂದ್ರ ಸರ್ಕಾರ ಬಂದಿದೆ. ಅಪರಾಧದ ಗಂಭೀರತೆ ಮತ್ತು ಅದರ ಅಂತಾರಾಜ್ಯ ಪರಿಣಾಮಗಳನ್ನು ಪರಿಗಣಿಸಿ ಅದನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ-2008ರ ಪ್ರಕಾರ ತನಿಖೆಗೆ ಒಳಪಡಿಸುವ ಅಗತ್ಯವಿದೆ.

ಆದ್ದರಿಂದ, ಈಗ, ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ, 2008ರ ಸೆಕ್ಷನ್ 8 ರೊಂದಿಗೆ ಓದಲಾದ ಸೆಕ್ಷನ್ 6ರ ಉಪ-ವಿಭಾಗ (4) ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸುವ ಮೂಲಕ, ಕೇಂದ್ರ ಸರ್ಕಾರವು ಈ ಮೂಲಕ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಮೇಲೆ ಹೇಳಿದ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶಿಸುತ್ತದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಏನಿದು ಪ್ರಕರಣ?
ಪ್ರವೀಣ್ ನೆಟ್ಟಾರು ಅವರು ಬೆಳ್ಳಾರೆಯ ಮಾಸ್ತಿ ಕಟ್ಟೆ ಎಂಬಲ್ಲಿ ಅಕ್ಷಯ ಫ್ರೆಶ್‌ ಚಿಕನ್ ಫಾರ್ಮ್ ಎಂಬ ಕೋಳಿ ಅಂಗಡಿಯನ್ನು ನಡೆಸುತ್ತಿದ್ದರು. ಜು.26 ರಂದು ರಾತ್ರಿ ಪ್ರವೀಣ್ ಬೈಕ್‌ನಲ್ಲಿ ಮನೆಗೆ ಹೊರಡಲು ಸಿದ್ಧರಾಗಿದ್ದಾಗ ಬೈಕ್ ವೊಂದರಲ್ಲಿ ಮುಸುಕು ಧರಿಸಿಕೊಂಡು ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಳಿಂದ ದಾಳಿ ಮಾಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರವೀಣ್ ಅವರನ್ನು ಕೂಡಲೇ ಪುತ್ತೂರಿನ ಬೊಳ್ವಾರ್‌ನಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಈ ಬಗ್ಗೆ ಪ್ರವೀಣ್ ಅವರ ಅಂಗಡಿಯಲ್ಲಿ ಕೋಳಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಮಧು ಕುಮಾರ್ ರಾಯನ್ ಎಂಬುವವರು ನೀಡಿದ ದೂರಿನ ಅನ್ವಯ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ | Amit Shah in state | ಪ್ರವೀಣ್‌ ನೆಟ್ಟಾರು ಹತ್ಯೆ, ಪ್ರತಿಭಟನೆಗಳಿಂದ ಬಿಜೆಪಿಗೆ ಭಾರಿ ಡ್ಯಾಮೇಜ್‌, ಅಮಿತ್‌ ಶಾ ಕಿಡಿ

Exit mobile version