ಹಾಸನ: ಅವಳಿಗಿನ್ನೂ ೧೬ ವರ್ಷ. ಆಗಲೇ ಮನೆಯವರು ಆಕೆಯ ಮದುವೆಯನ್ನು ನಿಶ್ಚಯ ಮಾಡಿದ್ದರು. ಈ ನಡುವೆ ಆಕೆ ಮದುವೆ ನಿಶ್ಚಯವಾಗಿದ್ದ ಹುಡುಗನ ಜತೆಗೇ ದೇವಸ್ಥಾನಕ್ಕೆ ಹೋದವಳು ಈಗ ಪ್ರಾಣ ಕಳೆದುಕೊಂಡಿದ್ದಾಳೆ. ಜತೆಗೆ ಹುಡುಗನೂ ವಿಷ ಸೇವಿಸಿದ್ದಾನೆ.
ಈ ಘಟನೆ ನಡೆದಿರುವುದು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯಲ್ಲಿ. ಇಲ್ಲಿನ ಕೂಡ್ಲೂರು ಗ್ರಾಮದ ದಿನೇಶ್ ಜೊತೆ ಎರಡು ತಿಂಗಳ ಹಿಂದೆ ೧೬ ವರ್ಷದ ಬಾಲಕಿಗೆ ಮದುವೆ ನಿಶ್ಚಯವಾಗಿತ್ತು. ಈ ನಡುವೆ, ನವೆಂಬರ್ 2೮ರಂದು ರಾಮನಾಥಪುರ ಷಷ್ಠಿ ಜಾತ್ರೆಗೆಂದು ಆಕೆಯನ್ನು ಮನೆಯವರ ಅನುಮತಿ ಪಡೆದೇ ದಿನೇಶ್ ಕರೆದೊಯ್ದಿದ್ದಾನೆ.
ದಿನೇಶ ಮಧ್ಯಾಹ್ನ 2.30ರ ಹೊತ್ತಿಗೆ ಬಾಲಕಿಯನ್ನು ಮನೆಯಿಂದ ಕರೆದೊಯ್ದಿದ್ದ. ಆದರೆ, ನಾಲ್ಕು ಗಂಟೆಗೆ ಮನೆಗೆ ಕರೆ ಮಾಡಿ, ʻನಿಮ್ಮ ಮಗಳು ವಿಷ ಕುಡಿದಿದ್ದಾಳೆʼ ಎಂದು ಪೋಷಕರಿಗೆ ಫೋನ್ ಮಾಡಿದ್ದಾನೆ. ಜತೆಗೆ ಹಾಸನದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ತಿಳಿಸಿದ್ದಾನೆ. ಆದರೆ, ಆಸ್ಪತ್ರೆಗೆ ದಾಖಲಾಗುವ ಹೊತ್ತಿಗೆ ಬಾಲಕಿ ಮೃತಪಟ್ಟಿದ್ದಾಳೆ.
ಇತ್ತ ದಿನೇಶ್ ಕೂಡಾ ವಿಷ ಸೇವನೆ ಮಾಡಿದ್ದು, ಆತನೂ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಈಗ ಬಾಲಕಿಯ ಹೆತ್ತವರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸಮಗ್ರ ತನಿಖೆಗೆ ಒತ್ತಾಯ
ಬಾಲಕಿಯ ಹೆತ್ತವರು ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಂದ ಘಟನೆ ಬಗ್ಗೆ ತನಿಖೆ ನಡೆಸುವಂತೆ ಕೋರಿ ಎಸ್ಪಿಗೆ ದೂರು ನೀಡಿದ್ದಾರೆ. ಚೈಲ್ಡ್ ಲೈನ್ ಗೆ ಬಂದ ಅಪರಿಚಿತ ಕರೆ ಆಧರಿಸಿಯೂ ಪೋಷಕರಿಂದ ಮಾಹಿತಿ ಪಡೆಯಲಾಗಿದೆ.
ಬಾಲಕಿ ಮೃತದೇಹದ ಮೇಲೆ ಗಾಯದ ಗುರುತು, ಕುತ್ತಿಗೆಯಲ್ಲಿ ಪೆಟ್ಟಾಗಿರುವ ಗುರುತು ಪತ್ತೆಯಾಗಿರುವುದರಿಂದ ಸಾವಿನ ಬಗ್ಗೆ ಅನುಮಾನವಿದೆ ಎಂದು ಹೆತ್ತವರು ಹೇಳಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ | Pocso Case | ಬಾಲಕಿಯನ್ನು ಗರ್ಭಿಣಿ ಮಾಡಿದ ಮಾವನ ಮಗ; ನಾಪತ್ತೆಯಾದ ಆರೋಪಿಗಾಗಿ ಶೋಧ