ಬೆಂಗಳೂರು: ಯುವತಿಯೊಬ್ಬಳು ರಸ್ತೆಯಲ್ಲಿ ನಡೆದ ಗಲಾಟೆ ಸಂಬಂಧ ದೂರು ನೀಡಲು ಹೋದಾಗ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯ ಇನ್ಸ್‌ಪೆಕ್ಟರ್ ಉದಯರವಿ ಅಶ್ಲೀಲವಾಗಿ ಮಾತಾಡಿ ಅಸಭ್ಯವಾಗಿ (Misbehavior By Inspector) ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಫೆ.4ರಂದು ಯುವತಿ ಕತ್ರಿಗುಪ್ಪೆ ಸಿಗ್ನಲ್ ಬಳಿ ದ್ವಿಚಕ್ರ ವಾಹನದಲ್ಲಿ ನಿಂತಿದ್ದಾಗ, ವೇಗವಾಗಿ ಬಂದ ಟಿಟಿ ವಾಹನವು ಯುವತಿಗೆ ಸವರಿಕೊಂಡು ಹೋದಂತೆ ಹೋಗಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಟಿಟಿ ಚಾಲಕ ಯುವತಿಗೆ ಅಶ್ಲೀಲ ಪದಗಳಿಂದ ನಿಂದಿಸಿ ಮುಂದೆ ಹೋಗಿದ್ದಾನೆ. ಆತನ ಬೈಗಳಿಂದ ಕೋಪಗೊಂಡ ಯುವತಿ ಟಿಟಿ ಬೆನ್ನತ್ತಿ ಆತನನ್ನು ಪ್ರಶ್ನೆ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಮತ್ತೆ ಯುವತಿಯನ್ನು ಅಶ್ಲೀಲವಾಗಿ ನಿಂದಿಸಿದ್ದಲ್ಲದೇ, ಚಾಲಕ ಆಕೆಯನ್ನು ಎಳೆದಾಡಿ ಬಟ್ಟೆ ಹರಿದಿದ್ದಾನೆ.
ಚಾಲಕನಲ್ಲದೇ ನಾಲ್ಕೈದು ಮಂದಿ ನಡುರಸ್ತೆಯಲ್ಲಿ ಯುವತಿಯ ಬಟ್ಟೆ ಹರಿದು ಹಲ್ಲೆಗೆ ಯತ್ನಿಸಿದ್ದ ಎಂದು ಯುವತಿ ಆರೋಪಿಸಿದ್ದಳು. ಈ ಸಂಬಂಧ ಯುವತಿ ದೂರು ಕೊಡಲು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ಹೋಗಿದ್ದಾಗ, ತಾವು ಹೇಳಿದಂತೆ ದೂರು ಬರೆದುಕೊಡಲು ಇನ್ಸ್ ಪೆಕ್ಟರ್ ಹೇಳಿದ್ದರಂತೆ. ಅಷ್ಟು ಮಾತ್ರವಲ್ಲದೆ ಕೇವಲ ಬಟ್ಟೆ ಮಾತ್ರ ಹರಿದಿದ್ದಾರೆ? ದೇಹದ ಮೇಲೆ ಕೈ ಹಾಕಿಲ್ಲ ತಾನೆ ಎಂದು ಅಶ್ಲೀಲವಾಗಿ ಇನ್ಸ್ ಪೆಕ್ಟರ್ ಉದಯರವಿ ಮಾತಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜತೆಗೆ ಗಲಾಟೆ ಸಂಬಂಧ ಎಫ್ಐಆರ್ ದಾಖಲಿಸದೆ ಸಮಸ್ಯೆ ರಾಜಿ ಮೂಲಕ ಬಗೆಹರಿಸಿಕೊಳ್ಳುವಂತೆ ಕಾಲಹರಣ ಮಾಡಿದ್ದಾರೆ. ಯುವತಿ ದೂರು ನೀಡಿದರೆ ಯುವಕರಿಂದ ಕೌಂಟರ್ ಕಂಪ್ಲೈಂಟ್ ಕೊಡಿಸ್ತೇನೆ ಎಂದು ಇನ್ಸ್ ಪೆಕ್ಟರ್ ಉದಯರವಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇತ್ತ ದೂರು ದಾಖಲಿಸಿಕೊಳ್ಳದ ಹಿನ್ನೆಲೆ ಯುವತಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ವಿವಿಪುರಂ ಉಪ ವಿಭಾಗ ಎಸಿಪಿಗೆ ಇನ್ಸ್ ಪೆಕ್ಟರ್ ವಿರುದ್ಧ ದೂರು ನೀಡಿದ್ದು, ದೂರು ದಾಖಲಾಗುತ್ತಿದ್ದಂತೆ ಚೆನ್ನಮ್ಮನಕೆರೆ ಠಾಣೆಯಲ್ಲಿ ಗಲಾಟೆ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.