Site icon Vistara News

ಬಿಜೆಪಿ ನಾಯಕನ ಸಹೋದರನ ಮನೆಗೆ ನುಗ್ಗಿ ಬೈಕ್‌ ಸುಟ್ಟು ಹಾಕಿದ್ದ ಕಿಡಿಗೇಡಿಗಳ ಬಂಧನ

#image_title

ಬೆಂಗಳೂರು: ವಿಧಾನಸಭೆ ಚುನಾವಣೆಯ (Karnataka Election) ಮತಎಣಿಕೆ ಕಾರ್ಯ ನಡೆಯುತ್ತಿದ್ದ ವೇಳೆ ಕಿಡಿಗೇಡಿಗಳು ದುಷ್ಕೃತ್ಯ ಮೆರೆದಿದ್ದರು. ಮೊನ್ನೆ ಶನಿವಾರದಂದು (ಮೇ 13) ಬಿಜೆಪಿ ನಾಯಕ ಪದ್ಮನಾಭ ರೆಡ್ಡಿಯ (Padmanabha Reddy) ಸಹೋದರನ ಮನೆಗೆ ನುಗ್ಗಿದ ಕಿಡಿಗೇಡಿಗಳು, ಪಾರ್ಕಿಂಗ್‌ ಲಾಟ್‌ನೊಳಗೆ ನಿಲ್ಲಿಸಿದ್ದ ವಾಹನಕ್ಕೆ ಬೆಂಕಿ ಹಚ್ಚಿ ಪರಾರಿ ಆಗಿದ್ದರು. ಸದ್ಯ ಈ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಪದ್ಮನಾಭ ರೆಡ್ಡಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸರ್ವಜ್ಞ ನಗರದ ಬಿಜೆಪಿ ಅಭ್ಯರ್ಥಿಯಾಗಿದ್ದರು. ಇವರ ಸಹೋದರ ಅನಿಲ್‌ ಕುಮಾರ್‌ ವಾರ್ಡ್‌ ಪ್ರೆಸಿಡೆಂಟ್‌ ಆಗಿದ್ದು, ರೆಡ್ಡಿ ಗೆಲುವಿಗಾಗಿ ಸಾಕಷ್ಟು ಪ್ರಚಾರ ಕಾರ್ಯಗಳಲ್ಲಿ ತೊಡಗಿದ್ದರು. ಇದಕ್ಕೆ ಕ್ಷೇತ್ರದಲ್ಲಿ ಹಲವರ ವಿರೋಧ ಕೂಡ ಇತ್ತು ಎಂಬುದಕ್ಕೆ ಅನಿಲ್‌ ಮನೆ ಮೇಲೆ ನಡೆದಿರುವ ದಾಳಿಯೇ ಸಾಕ್ಷಿಯಾಗಿದೆ.

ಕಳೆದ ಶನಿವಾರ ಮತ ಎಣಿಕೆ ಕಾರ್ಯ ನಡೆಯುತ್ತಿದ್ದಾಗ, ಇತ್ತ ಕಿಡಿಗೇಡಿಗಳು ಅನಿಲ್‌ ಕುಮಾರ್‌ ಮನೆಗೆ ನುಗ್ಗಿದ್ದರು. ಗಾಡಿಗಳ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕಾಲ್ಕಿತ್ತಿದ್ದರು. ಘಟನೆಯಲ್ಲಿ ಬಜಾಜ್‌ ಡಿಸ್ಕವರಿ ಹಾಗೂ ಕೆಟಿಎಂ ಬೈಕ್‌ಗಳಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೆ ಸ್ಥಳದಲ್ಲಿದ್ದ ಕೆಲವರು ತಕ್ಷಣ ಪಕ್ಕದಲ್ಲಿದ್ದ ಕಾರನ್ನು ತಳ್ಳಿ ಹೊರ ಹಾಕಿದ್ದರು.

ದುಷ್ಕರ್ಮಿಗಳು ಕೈನಲ್ಲಿ ಪೆಟ್ರೋಲ್‌ ತುಂಬಿದ ಬಾಟಲ್‌ ಹಿಡಿದು ಒಳಗೆ ನುಗ್ಗಿದ್ದು, ಬಳಿಕ ವಾಹನಕ್ಕೆ ಸುರಿದಿದ್ದರು. ಐದು ನಿಮಿಷಗಳ ಕಾಲ ಅಲ್ಲಿಯೇ ಓಡಾಡಿಕೊಂಡು ಧೂಮಪಾನ ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಇದೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಮುಬಾರಕ್‌ ಹಾಗು ಹಫೀಝ್‌ ಎಂಬುವವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಶ್ವಾನಗಳ ದಾಳಿಗೆ ಕುರಿಗಳು ಬಲಿ; ಕೊಡಗಿನಲ್ಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ

ಸದ್ಯ ಮೇಲ್ನೋಟಕ್ಕೆ ಇದೊಂದು ರಾಜಕೀಯ ದ್ವೇಷದ ಕೃತ್ಯ ಎನ್ನಲಾಗುತ್ತಿದೆ. ಪೆಟ್ರೋಲ್‌ ಕದಿಯಲು ಬಂದಿದ್ದರೆ ಐದು ನಿಮಿಷಗಳ ಕಾಲ ಅಲ್ಲೆ ಇರುತ್ತಿರಲಿಲ್ಲ. ಆದರೆ ಇಲ್ಲಿ ಕಿಡಿಗೇಡಿಗಳು ಯಾವುದೇ ಭಯವಿಲ್ಲದೆ ಧೂಮಪಾನ ಮಾಡಿ ನಂತರ ಕೃತ್ಯ ಎಸಗಿದ್ದಾರೆ. ಹೀಗಾಗಿ ಇದೊಂದು ಉದ್ದೇಶ ಪೂರ್ವಕ ಕೃತ್ಯ ಆಗಿರುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಬಾಣಸವಾಡಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version